ಕೊಪ್ಪಳ ಗವಿಸಿದ್ಧೇಶ್ವರ ಜಾತ್ರೆಯಲ್ಲಿ ಕಾರ್ಖಾನೆ ವಿರುದ್ಧ, ಪರಿಸರ ರಕ್ಷಣೆ, ಬಲ್ಡೋಟಾ ಹಠಾವೋ ಘೋಷಣೆ ಮೂಲಕ ಜನಜಾಗೃತಿ ಮೂಡಿಸುವ ಕಾರ್ಯ ಮಾಡಿದ ಅಂಗಡಿ ಮಾಲಿಕರಿಗೆ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ, ಪರಿಸರ ಹಿತರಕ್ಷಣಾ ವೇದಿಕೆಯ ಜಂಟಿ ಕ್ರಿಯಾ ವೇದಿಕೆ ಮೂಲಕ ಸನ್ಮಾನ ಮಾಡಲಾಯಿತು.

ಕೊಪ್ಪಳ: ನಗರ, ಭಾಗ್ಯನಗರ ಮತ್ತು 20ಕ್ಕೂ ಅಧಿಕ ಹಳ್ಳಿಗಳ ಪರಿಸರ ಮಾಲಿನ್ಯಕ್ಕೆ ಕಾರಣವಾದ ಧೂಳು, ವಿಷಾನಿಲ ಸೂಸುವ ಮೂಲಕ ಆರೋಗ್ಯಕ್ಕೆ ಮಾರಕವಾದ ಕಾರ್ಖಾನೆ ವಿರೋಧಿ ಹೋರಾಟ 70ನೇ ದಿನ ಪೂರೈಸಿತು.

ಈ ಸಂದರ್ಭದಲ್ಲಿ ಗವಿಸಿದ್ಧೇಶ್ವರ ಜಾತ್ರೆಯಲ್ಲಿ ಹಾಕಲಾದ ಮಿಠಾಯಿ, ಫಳಾರ ಅಂಗಡಿಗಳಲ್ಲಿ ಕಾರ್ಖಾನೆ ವಿರುದ್ಧ, ಪರಿಸರ ರಕ್ಷಣೆ, ಬಲ್ಡೋಟಾ ಹಠಾವೋ ಘೋಷಣೆ ಮೂಲಕ ಜನಜಾಗೃತಿ ಮೂಡಿಸುವ ಕಾರ್ಯ ಮಾಡಿದ ಅಂಗಡಿ ಮಾಲಿಕರಿಗೆ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ, ಪರಿಸರ ಹಿತರಕ್ಷಣಾ ವೇದಿಕೆಯ ಜಂಟಿ ಕ್ರಿಯಾ ವೇದಿಕೆ ಮೂಲಕ ಸನ್ಮಾನ ಮಾಡಿ, ಕೃತಜ್ಞತೆ ಸಲ್ಲಿಸಲಾಯಿತು.

ಜಾತ್ರೆಯ ರಥಬೀದಿಯಲ್ಲಿ ಯುವತಿಯರು ಕಾರ್ಖಾನೆ ವಿರೋಧಿ ಹೋರಾಟ ಬೆಂಬಲಿಸಿ ರಂಗೋಲಿ ರಚಿಸಿದ್ದರು. ಫಳಾರ, ಮಿಠಾಯಿ ಅಂಗಡಿ ಮಾಲೀಕರು ಬ್ಯಾನರ್‌ ಅಳವಡಿಸಿ ಜಾಗೃತಿ ಮೂಡಿಸಿದ್ದರು. ಅವರು ಹೋರಾಟಕ್ಕೆ ಶಕ್ತಿ ನೀಡುವ ಜತೆಗೆ ಜನಸಮಾನ್ಯರ ಹತ್ತಿರ ತೆಗೆದುಕೊಂಡು ಹೋಗಿದ್ದಾರೆ. ಇದಕ್ಕೆ ಪ್ರೇರಣೆಯಾದ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಕಾರ್ಖಾನೆ ವಿರೋಧಿ ಹೋರಾಟದಲ್ಲಿ ಎಲ್ಲರೊಟ್ಟಿಗೆ ಇದ್ದಾರೆ. ಅವರ ಬೆಂಬಲ ಇರುವುದು ಸ್ಪಷ್ಟ ಎಂದು ಹೋರಾಟ ವೇದಿಕೆ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು ಹೇಳಿದರು.

ಪ್ರತಿ ಅಂಗಡಿಯ ಮುಂದೆ ಹೋಗಿ ಅದರ ಮಾಲೀಕರಿಗೆ ಸನ್ಮಾನ ಮಾಡಿ, ಜಯಘೋಷಗಳನ್ನು ಹಾಕುವ ಮೂಲಕ ಜನಜಾಗೃತಿ ಮೂಡಿಸಲಾಯಿತು.

ಮಿಠಾಯಿ, ಫಳಾರ ಅಂಗಡಿ ಮಾಲೀಕರಾದ ಪ್ರದೀಪ, ಎಂ.ಡಿ. ರಫೀಕ್, ಎಂ.ಡಿ. ಜಾವೀದ್, ಎಂ.ಡಿ. ಹುಸೇನ ಮಿಠಾಯಿ, ಗುರುರಾಜ ಬಳ್ಳಾರಿ ಅವರಿಗೆ ಸನ್ಮಾನ ನೆರವೇರಿಸಿದ ತಂಡದಲ್ಲಿ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು, ಪ್ರಕಾಶಕ ಡಿ.ಎಂ. ಬಡಿಗೇರ, ಕೃಷಿ ಬೆಲೆ ಆಯೋಗ ಸದಸ್ಯ ಡಿ.ಎಚ್. ಪೂಜಾರ, ಮಹಿಳಾ ಮುಖಂಡರಾದ ಜ್ಯೋತಿ ಎಂ. ಗೊಂಡಬಾಳ, ಕವಿಯಿತ್ರಿ ಪುಷ್ಪಲತಾ ಏಳುಬಾವಿ, ವಿದ್ಯಾ ನಾಲವಾಡ, ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ, ಮಂಜುನಾಥ ಜಿ. ಗೊಂಡಬಾಳ, ಎಸ್.ಬಿ. ರಾಜೂರು, ಜಿ.ಬಿ. ಪಾಟೀಲ್, ಕವಿ ಮಹೇಶ ಮನ್ನಾಪುರ, ಶರಣು ಗಡ್ಡಿ, ಫಕೀರಗೌಡ ಕಾಸನಕಂಡಿ, ನಿವೃತ್ತ ಶಿಕ್ಷಕ ವಿರೂಪಾಕ್ಷಪ್ಪ ದೊಡ್ಡಮನಿ ಪಾಲ್ಗೊಂಡರು.

70ನೇ ದಿನದ ವೇದಿಕೆಯ ಧರಣಿಯಲ್ಲಿ ಹಿರಿಯ ಸಾಹಿತಿ ಎಚ್.ಎಸ್. ಪಾಟೀಲ್, ಎ.ಎಂ. ಮದರಿ, ಮಹಾಂತೇಶ ಮಲ್ಲನಗೌಡರ, ಶಿವಾನಂದಯ್ಯ ಬೀಳಗಿಮಠ, ಬಸವರಾಜ ಪೂಜಾರ, ಯಲ್ಲಪ್ಪ ಸಿದ್ದರು ಶಿವಪುರ, ಗವಿಸಿದ್ದಪ್ಪ ಎಫ್. ತೊಂಡಿಹಾಳ, ಬಸವರಾಜ್ ಸೋಮನಾಳ, ಅಂದಪ್ಪ ಹುರಳಿ, ಭೀಮಸೇನ ಕಲಕೇರಿ, ರಮೇಶ ಬೋಚನಹಳ್ಳಿ, ಮಂಜುನಾಥ ಕವಲೂರು ಪಾಲ್ಗೊಂಡಿದ್ದರು.