ಶೈಕ್ಷಣಿಕ ಸಮಾವೇಶದಿಂದ ಅರಿವು, ಜಾಗೃತಿ

| Published : Nov 18 2024, 01:17 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಜಗತ್ತಿನಲ್ಲಿ ಎಲ್ಲ ಧರ್ಮಗಳು ಜ್ಞಾನ ಸಂಪಾದನೆ ಹಾಗೂ ಸನ್ಮಾರ್ಗದ ಕುರಿತು ಬೋಧಿಸಿವೆ. ಅವು ಉತ್ತಮ ಜ್ಞಾನ ಸನ್ನಡತೆಯನ್ನು ಬೆಳೆಸುತ್ತದೆ. ಈ ನಿಟ್ಟಿನಲ್ಲಿ ಇಂಥ ಸಮಾವೇಶಗಳು ಹೊಸ ಚಿಂತನೆಗಳನ್ನು, ಅರಿವು, ಜಾಗೃತಿಯನ್ನು ಹುಟ್ಟುಹಾಕುತ್ತವೆ ಎಂದು ಹಿರಿಯ ಸಂಸ್ಕೃತ ಪ್ರಾಧ್ಯಾಪಕ ಪಂ.ಮಧ್ವಾಚಾರ್ಯ ಮೊಕಾಶಿ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಜಗತ್ತಿನಲ್ಲಿ ಎಲ್ಲ ಧರ್ಮಗಳು ಜ್ಞಾನ ಸಂಪಾದನೆ ಹಾಗೂ ಸನ್ಮಾರ್ಗದ ಕುರಿತು ಬೋಧಿಸಿವೆ. ಅವು ಉತ್ತಮ ಜ್ಞಾನ ಸನ್ನಡತೆಯನ್ನು ಬೆಳೆಸುತ್ತದೆ. ಈ ನಿಟ್ಟಿನಲ್ಲಿ ಇಂಥ ಸಮಾವೇಶಗಳು ಹೊಸ ಚಿಂತನೆಗಳನ್ನು, ಅರಿವು, ಜಾಗೃತಿಯನ್ನು ಹುಟ್ಟುಹಾಕುತ್ತವೆ ಎಂದು ಹಿರಿಯ ಸಂಸ್ಕೃತ ಪ್ರಾಧ್ಯಾಪಕ ಪಂ.ಮಧ್ವಾಚಾರ್ಯ ಮೊಕಾಶಿ ಹೇಳಿದರು.

ಅಖಿಲ ಭಾರತೀಯ ಶೈಕ್ಷಣಿಕ ಆಂದೋಲನ ಹಾಗೂ ಸಿಕ್ಯಾಬ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನಗರದ ಸಿಕ್ಯಾಬ್ ಸಂಸ್ಥೆ ಆವರಣದಲ್ಲಿ ನಡೆದ ಮೂರು ದಿನಗಳ 14ನೇ ರಾಷ್ಟ್ರೀಯ ಶೈಕ್ಷಣಿಕ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ, ಧರ್ಮದಿಂದ ನಡೆದರೆ ಮಾತ್ರ ಎಲ್ಲ ರಂಗಗಳಲ್ಲಿ ಜಯ ಲಭಿಸುತ್ತದೆ ಎಂದು ಅಭಿಪ್ರಾಯಪಟ್ಟರು.ಅಖಿಲ ಭಾರತ ಶೈಕ್ಷಣಿಕ ಆಂದೋಲನದ ಅಧ್ಯಕ್ಷ ನಿವೃತ್ತ ಸಮಕುಲಾಧಿಪತಿ ದಿಲ್ಲಿಯ ಪ್ರೊ.ಖ್ವಾಜಾ ಮಹಮ್ಮದ ಶಾಹೀದ ಮಾತನಾಡಿ, ದೇಶದ ವಿವಿಧ ನಗರಗಳಲ್ಲಿ ಪ್ರತಿ ವರ್ಷ ಇಂಥ ಸಮಾವೇಶಗಳನ್ನು ನಡೆಸುವ ಮೂಲಕ ಜಾಗೃತಿ ಉಂಟು ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ದಕ್ಷಿಣ ಭಾರತದ ಅಲ್ಪ-ಸಂಖ್ಯಾತ ಶಿಕ್ಷಣ ಸಂಸ್ಥೆಗಳ ಸಾಧನೆ ಗಣನೀಯವಾಗಿದೆ ಎಂದು ಹೇಳಿದರು.

ಭಾರತದ ಪ್ರಾಚೀನ ವಿಶ್ವವಿದ್ಯಾಲಯಗಳ ಘನತೆ ಉನ್ನತ ಪರಂಪರೆಯಿಂದ ಕೂಡಿದ್ದು, ಇಂದಿನ ಬ್ರಿಟೀಷ್ ಶಿಕ್ಷಣದ ವ್ಯವಸ್ಥೆ ಕುರಿತು ಸವಿಸ್ತಾರವಾಗಿ ಪ್ರಸ್ತಾಪಿಸಿದರು. ಶಿಕ್ಷಣದಲ್ಲಿ ಎಲ್ಲ ವರ್ಗ, ಧರ್ಮ, ಲಿಂಗ, ಪ್ರದೇಶದ ಜನ ಒಳಗೊಳ್ಳಬೇಕು. ಶಿಕ್ಷಣ ಪಡೆಯುವ ವೆಚ್ಚ ಕಡಿಮೆಯಾಗಬೇಕು ಎಂದು ಸಿಕ್ಯಾಬ್ ಶಿಕ್ಷಣ ಸಂಸ್ಥೆಯ ಸಾಧನೆ, ಆಯೋಜನೆಯನ್ನು ಮುಕ್ತ ಕಂಠದಿಂದ ಪ್ರಶಂಸಿದರು.

ಮುಕ್ತಾಯ ಸಮಾರಂಭಕ್ಕೂ ಮುನ್ನ ನಡೆದ ತಾಂತ್ರಿಕ ಗೋಷ್ಠಿಗಳಲ್ಲಿ ಲಂಡನ್‌ನ ಹಿರಿಯ ವಾಸ್ತುಶಿಲ್ಪ ಪ್ರಾಧ್ಯಾಪಕ ಡಾ.ಅನ್ವರ ಪುಣೇಕರ, ಸ್ಥಳೀಯ ಡಾ.ಎಂ.ಬಿ.ಮುಲ್ಲಾ, ನಾಡೋಜ ಡಾ.ಎಚ್.ಜಿ.ದಡ್ಡಿ, ಪ್ರೊ.ಇರ್ಶಾದ ಪುಣೇಕರ, ಪ್ರೊ.ರುಕ್ಸಾನಾ ಅಲಗೂರ, ಅಮಿನ್ ಹುಲ್ಲೂರ, ಚಿಂತಕ ಪೀಟರ್‌ ಅಲೆಕ್ಸಾಂಡರ್, ಪ್ರವಾಸೋದ್ಯಮ ಇಲಾಖೆಯ ಅನಿಲ ಬನಜಿಗೇರ, ಮಹಾನಗರ ಪಾಲಿಕೆ ಉಪಆಯುಕ್ತ ಮಹಾವೀರ ಬೋರಣ್ಣವರ, ಪ್ರೊ.ಸರಳಾ ಸಿರಸಗಿ, ಪ್ರಾಚಾರ್ಯ ಡಾ.ಸೈಯ್ಯದ್‌ ಅಬ್ಬಾಸ ಅಲಿ, ಪಾರಂಪರಿಕ ನಗರ ವಿಜಯಪುರದ ಪ್ರವಾಸೋದ್ಯಮ ಅಭಿವೃದ್ಧಿ ಹಾಗೂ ಸ್ಮಾರಕಗಳ ರಕ್ಷಣೆ ಕುರಿತು ಮಾತನಾಡಿದರು.

ಬೀದರನ ಶಾಹೀನ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಡಾ.ಅಬ್ದುಲ್ ಖಾದೀರ ಶಿಕ್ಷಣದ ಪ್ರವರ್ಧನೆಯಲ್ಲಿ ನಾಗರಿಕ ಸಮಾಜದ ಪಾತ್ರ ಗೋಷ್ಠಿಯ ಬಗ್ಗೆ ಮಾತನಾಡಿ, ಬಾಲಕಿಯ ಮದುವೆಗೆ ಮಾಡುವ ಖರ್ಚಿನ ಅರ್ಧದಷ್ಟು ಹಣವನ್ನು ಶಿಕ್ಷಣಕ್ಕೆ ಬಳಸಬೇಕೆಂದು ಹೇಳಿದರು.

ಅಖಿಲ ಭಾರತ ಶಿಕ್ಷಣ ಉಳಿಸಿ ಆಂದೋಲನದ ಪ್ರಮುಖ ರಾಜಶೇಖರ ವಿ.ಎನ್. ಮಾತನಾಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಶೈಕ್ಷಣಿಕ ನೀತಿ ಪರಾಮರ್ಶೆಗೆ ಒಳಪಡಬೇಕೆಂದು ಕೆಲವು ಸಲಹೆಗಳನ್ನು ನೀಡಿದರು.

ನಿವೃತ್ತ ಜಂಟಿ ರಿಜಿಸ್ಟ್ರಾರ್ ಎಸ್.ಎಸ್.ಬಿಳಗಿಪೀರ ಅಧ್ಯಕ್ಷತೆ ವಹಿಸಿದ್ದರು. ದಿಲ್ಲಿಯ ಇಂಡಿಯಾ ಇಸ್ಲಾಮಿಕ್ ಕಲ್ಚರಲ್ ಕೇಂದ್ರದ ಸಿರಾಜುದ್ದೀನ್ ಖುರೇಶಿ, ಸಿಂದಗಿಯ ಬೈತುಲ್ ಉಲೂಮ್, ಮದರಸಾದ ಉಪಪ್ರಾಚಾರ್ಯ ಮೌಲಾನಾ ಮಹಮ್ಮದ ಅಯೂಬ್ ಮೊಹಿಮುದ್ದೀನ ನದವಿ ಮಾತನಾಡಿದರು. ನಗರದ ಮುಲ್ಲಾ ಮದರಸಾದ ಮೌಲಾನಾ ಶಕೀಲ ಮುಲ್ಲಾ, ಡಾ.ಶಫಿ ಅನ್ವರಿ ಭಾವಹಿಸಿದ್ದರು.ಸಂಜೆ ನಡೆದ ಸಾರ್ವಜನಿಕ ಸಮಾವೇಶದಲ್ಲಿ ಪಾಲಕರು ಹಾಗೂ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಸೊಲಾಪೂರದ ತಜ್ಞವೈದ್ಯ ಹಾಗೂ ಪ್ರೇರಣಾದಾಯಕ ಉಪನ್ಯಾಸಕ ಡಾ.ಇಸ್ಮಾಯಿಲ್ ಶೇಖ್ ಮಾತನಾಡಿ, ಸಾಮಾಜಿಕ ಮಾಧ್ಯಮ, ಮೊಬೈಲ್, ಅಂತರ್ಜಾಲ ಇವುಗಳ ದುರುಪಯೋಗ, ಪರಿಣಾಮಗಳು ಹಾಗೂ ಸದ್ಬಳಕೆ ಕುರಿತು ಅಭಿಪ್ರಾಯ ಹಂಚಿಕೊಂಡರು.

ನಿವೃತ್ತ ಪ್ರಾಚಾರ್ಯ ಡಾ.ಮಹಮ್ಮದ ಅಫ್ಜಲ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಡಾ.ಶುಜಾವುದ್ದೀನ್, ಅಖಿಲ ಭಾರತ ಶೈಕ್ಷಣಿಕ ಆಂದೋಲನ ಕಾರ್ಯದರ್ಶಿ ಅಬ್ದುಲ ರಶೀದ್, ಡಾ.ಇಲ್ಯಾಸ ಸೈಫಿ, ಡಾ.ಖಾಲಿದ್ ಸೈಫುದ್ದೀನ್, ಮುಜಫರ್ ಅಲಿ, ಡಾ.ಶೆರಿಯಾರ್, ಸಿಕ್ಯಾಬ್ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎಸ್.ಎ.ಪುಣೇಕರ, ಕಾರ್ಯದರ್ಶಿ ಎ.ಎಸ್.ಪಾಟೀಲ, ನಿರ್ದೇಶಕರಾದ ಡಾ.ಶುಜಾಯುದ್ದೀನ್, ಸಲಾಹುದ್ದೀನ್ ಅಯೂಬಿ, ನಿವೃತ್ತ ಇಂಜನಿಯರ್ ಜೆಡ್.ಎ.ಪುಣೇಕರ, ನಿವೃತ್ತ ಪ್ರಾಚಾರ್ಯ ಎನ್.ಎಸ್.ಭೂಸನೂರ, ಡಾ.ನಿಯಾಮತುಲ್ಲಾ ಪಟೇಲ, ಪ್ರಾಚಾರ್ಯ ಡಾ.ಎಚ್.ಕೆ. ಯಡಹಳ್ಳಿ, ಡಾ.ಎಸ್.ಎಚ್.ಮಲಘಾಣ, ಡಾ.ಮುಸ್ತಾಕ ಅಹ್ಮದ, ಪ್ರೊ.ಗಂಗಾಧರ ಭಟ್, ಡಾ.ಸಮಿಯುದ್ದೀನ್, ಡಾ.ಹಾಜಿರಾ ಪರವೀನ, ಪ್ರೊ.ಸಾದಿಯಾಬಾನು, ಪ್ರೊ.ವಿದ್ಯಾವತಿ ಉಪಸ್ಥಿತರಿದ್ದರು.