ಸಾರಾಂಶ
ಬಳ್ಳಾರಿ: ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಹತ್ತಿ ಬೆಳೆಗಾರರಿಗೆ ಜಾಗೃತಿ ಶಿಬಿರ ಆಯೋಜಿಸಲಾಗಿತ್ತು.
ಸಸಿಗೆ ನೀರೆರೆಯುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಎನ್. ಕೆಂಗೇಗೌಡ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆಯಿಂದ ಬೆಳೆಗಾರರಿಗೆ ಜಾಗೃತಿ ಶಿಬಿರ ಆಯೋಜಿಸಿರುವುದು ಶ್ಲಾಘನೀಯ ಕಾರ್ಯ. ಬೆಳೆಗಾರರಿಗೆ ಬೇಕಾದ ಸೌಲಭ್ಯಗಳನ್ನು ಇಲಾಖೆ ನೀಡಲು ಸಿದ್ಧವಿದೆ. ಸರ್ಕಾರ ಯೋಜನೆಗಳ ಕುರಿತು ರೈತರು ಮನವರಿಕೆ ಮಾಡಿಕೊಳ್ಳಬೇಕು. ಕೃಷಿಕರ ಪ್ರಗತಿಗೆ ಬೇಕಾದ ಸೌಕರ್ಯಗಳನ್ನು ಪಡೆದುಕೊಳ್ಳಬೇಕು ಎಂದರು.ಪ್ರಾಸ್ತಾವಿಕ ಮಾತನಾಡಿದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ ಅಧ್ಯಕ್ಷ ಮಹಾರುದ್ರಗೌಡ ಅವರು, ಹತ್ತಿ ಪ್ರಮುಖ ಬೆಳೆಯಾಗಿದ್ದು, ಹವಾಗುಣ ನೋಡಿಕೊಂಡು ರೈತರು ಯಾವ ಬಿತ್ತನೆ ಬೀಜಗಳನ್ನು ಬಳಕೆ ಮಾಡಬೇಕು. ಹತ್ತಿ ಬೆಳೆಯನ್ನು ಲಾಭದಾಯಿಕವಾಗಿ ಮಾಡಿಕೊಳ್ಳುವುದು ಹೇಗೆ ಎಂಬಿತ್ಯಾದಿ ಮಾಹಿತಿಯನ್ನು ತಿಳಿಸಿಕೊಡಲು ಶಿಬಿರ ಆಯೋಜಿಸಲಾಗಿದೆ. ಏನೇ ಗೊಂದಲಗಳಿದ್ದರೆ ತಜ್ಞರಿಂದ ಮಾಹಿತಿ ಪಡೆದುಕೊಂಡು ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ರೈತರಿಗೆ ಹತ್ತಿ ಬಿತ್ತನೆ ಮಾಡುವ ವೈಜ್ಞಾನಿಕ ಪದ್ಧತಿ ಗೊತ್ತಿಲ್ಲ. ಇದರಿಂದ ಹತ್ತಿ ಬೆಳೆಯುವ ಕ್ಷೇತ್ರದ ತೀರಾ ಕಡಿಮೆಯಾಗಿದೆ. ಇದರಿಂದ ಕಾಟನ್ ಮಿಲ್‌ಗಳು ಮುಚ್ಚುವ ಸ್ಥಿತಿ ಬಂದಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆಯ ಮಾಜಿ ಅಧ್ಯಕ್ಷ ವಿ. ರವಿಕುಮಾರ್ ಬೇಸರ ವ್ಯಕ್ತಪಡಿಸಿದರು.ಸಂಸ್ಥೆಯ ಗೌರವ ಅಧ್ಯಕ್ಷ ಸಿ. ಶ್ರೀನಿವಾಸ ರಾವ್ ಹಾಗೂ ರಾಯಚೂರು ಜಿಲ್ಲೆ ಕಾಟನ್ ಅಸೋಸಿಯೇಷನ್ ಅಧ್ಯಕ್ಷ ಲಕ್ಷ್ಮಿರೆಡ್ಡಿ ಮಾತನಾಡಿದರು.
ರಾಯಚೂರು ಕೃಷಿ ಕಾಲೇಜಿನ ಕೀಟಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಎ.ಜಿ. ಶ್ರೀನಿವಾಸ್ ಹಾಗೂ ಡಾ. ಜೆ.ಎಂ. ನಿಡಗುಂದಿ ಶಿಬಿರದಲ್ಲಿ ಪಾಲ್ಗೊಂಡು ರೈತರಿಗೆ ಮಾಹಿತಿ ನೀಡಿದರು.ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ, ಕರ್ನಾಟಕ ಕಾಟನ್ ಅಸೋಸಿಯೇಷನ್, ಹುಬ್ಬಳ್ಳಿ, ಬಳ್ಳಾರಿ ಜಿಲ್ಲೆ ಕಾಟನ್ ಅಸೋಸಿಯೇಷನ್, ಕನ್ನಡನಾಡು ರೈತ ಸಂಘ, ಕರ್ನಾಟಕ ರಾಜ್ಯ ಕೃಷಿ ಪರಿಕರಗಳ ಮಾರಾಟಗಾರರ ಸಂಘ ಹಾಗೂ ಹತ್ತಿ ಬೆಳೆಯುವ ರೈತರ ಸಮೂಹ ಸಹಯೋಗದಲ್ಲಿ ಶಿಬಿರ ಆಯೋಜಿಸಲಾಗಿತ್ತು.
ವಿ. ರಾಮಚಂದ್ರ ಹಾಗೂ ಕೆ.ಸಿ. ಸುರೇಶಬಾಬು ಕಾರ್ಯಕ್ರಮ ನಿರ್ವಹಿಸಿದರು.