ಸಾರಾಂಶ
ಜಾಗೃತಿ ಸಮಾವೇಶ ಅ.೪ರ ಶುಕ್ರವಾರ ಬೆಳಗ್ಗೆ ೧೧ಕ್ಕೆ ಗದಗ ಜಿಲ್ಲೆಯ ನರಗುಂದದ ಮಹಾದಾಯಿ ಹೋರಾಟ ವೇದಿಕೆಯಲ್ಲಿ ನಡೆಯಲಿದೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ಮೈಸೂರು ಜಿಲ್ಲಾ ಕಾರ್ಯಾಧ್ಯಕ್ಷ ಕಿರಗಸೂರು ಶಂಕರ್ ಹೇಳಿದರು. ಚಾಮರಾಜನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ತಮ್ಮ ವೈಯಕ್ತಿಕ ವಿಚಾರಗಳಲ್ಲಿ ತಲೆಕೆಡಿಸಿಕೊಂಡು ರೈತರನ್ನು ಮರೆತಿರುವ ಸರ್ಕಾರವನ್ನು ಜಾಗೃತಿಗೊಳಿಸುವ ಹಾಗೂ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನು ಜಾರಿ ಸೇರಿದಂತೆ ವಿವಿಧ ಹಕ್ಕೊತ್ತಾಯಗಳನ್ನು ಮಂಡಿಸುವ ಜಾಗೃತಿ ಸಮಾವೇಶ ಅ.೪ರ ಶುಕ್ರವಾರ ಬೆಳಗ್ಗೆ ೧೧ಕ್ಕೆ ಗದಗ ಜಿಲ್ಲೆಯ ನರಗುಂದದ ಮಹಾದಾಯಿ ಹೋರಾಟ ವೇದಿಕೆಯಲ್ಲಿ ನಡೆಯಲಿದೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ಮೈಸೂರು ಜಿಲ್ಲಾ ಕಾರ್ಯಾಧ್ಯಕ್ಷ ಕಿರಗಸೂರು ಶಂಕರ್ ಹೇಳಿದರು.ನಗರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ನಡೆಯುವ ಈ ಸಮಾವೇಶದಲ್ಲಿ ಹಲವಾರು ಹಕ್ಕೊತ್ತಾಯಗಳನ್ನು ಮಂಡಿಸಲಾಗುವುದು ಎಂದರು. ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನು ಜಾರಿಯಾಗಬೇಕು. ಡಾ.ಸ್ವಾಮಿನಾಥನ್ ವರದಿಯಂತೆ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿಯಾಗಬೇಕು. ಕೃಷಿ ಸಾಲ ಸಂಪೂರ್ಣ ಮನ್ನಾ ಆಗಬೇಕು. ೬೦ ವರ್ಷ ತುಂಬಿದ ರೈತರಿಗೆ ಮಾಸಿಕ ಪಿಂಚಣಿ ಯೋಜನೆ ಜಾರಿಗೆ ತರಬೇಕು. ಬರಗಾಲ ಬಂದಾಗ ರಾಜ್ಯಾದ್ಯಂತ ಎಲ್ಲಾ ಜಲಾಶಯಗಳ ಹಾಗೂ ಕೆರೆಗಳ ಹೂಳೆತ್ತುವ ಕಾರ್ಯಯೋಜನೆ ರೂಪಿಸಬೇಕು, ರಾಜ್ಯದ ಎಲ್ಲಾ ಜಲಾಶಯಗಳ ಹಾಗೂ ಕೆರೆಗಳ ಹೂಳು ತೆಗೆಸಿ, ಈ ಮಣ್ಣನ್ನು ರೈತರ ಜಮೀನಿಗೆ ಸರಬರಾಜು ಮಾಡುವ ಯೋಜನೆ ರೂಪಿಸಬೇಕು, ತೆಲಂಗಾಣ ಸರ್ಕಾರದ ಮಾದರಿಯಲ್ಲಿ ಕ್ರಮ ಕೈಗೊಳ್ಳಬೇಕು.ಕೃಷಿ ಪಂಪ್ ಸೆಟ್‌ಗಳ ರೈತರ ಆಧಾರ್ ಲಿಂಕ್ ಮಾಡುತ್ತಿರುವುದನ್ನು ಕೈ ಬಿಡಬೇಕು, ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ರಾಜ್ಯ ಸರ್ಕಾರ ರದ್ದು ಮಾಡುವಂತೆ ಕ್ರಮ ಕೈಗೊಳ್ಳಬೇಕು. ಕೃಷಿ ಸಾಲ ಪಾವತಿಸದ ರೈತರ ಜಮೀನು ವಶಪಡಿಸಿಕೊಳ್ಳುವ ಸರ್ಪ್ರೇಸಿ ಕಾಯ್ದೆ ಜಾರಿಗೆ ತಂದಿರುವುದನ್ನು ರದ್ದುಗೊಳಿಸುವಂತೆ ಕೇಂದ್ರಕ್ಕೆ ಒತ್ತಾಯಿಸಲಾಗುವುದು.
ಬರ, ಅತಿವೃಷ್ಟಿ ಹಾನಿ, ಪ್ರವಾಹ ಹಾನಿ, ಎನ್‌ಡಿಆರ್‌ಎಫ್ ಪರಿಹಾರ ಮಾನದಂಡ ತಿದ್ದುಪಡಿ ಮಾಡಬೇಕು, ಖಾಸಗಿ ಫೈನಾನ್ಸ್‌ಗಳು, ಬ್ಯಾಂಕುಗಳು ಸಾಲ ವಸೂಲಿಗೆ ನೋಟಿಸ್ ನೀಡಿ ಕಿರುಕುಳ ನೀಡಿ ಜಮೀನುಗಳನ್ನು ಹರಾಜು ಮಾಡುತ್ತಿರುವುದನ್ನು ನಿಲ್ಲಿಸಬೇಕು. ಕಬ್ಬಿನ ಎಫ್ಆರ್‌ಪಿ ದರವನ್ನು ರೈತರ ಹೊಲದಲ್ಲಿನ ದರ ಎಂದು ನಿಗದಿಪಡಿಸಬೇಕು. ಕಬ್ಬಿನ ಉತ್ಪನ್ನ ಇಳುವರಿ ಕಡಿಮೆ ತೋರುತ್ತಿರುವ ಕಾರಣ ಪ್ರಸಕ್ತ ಸಾಲಿಗೆ ಎಫ್ಆರ್‌ಪಿ ದರಕ್ಕಿಂತ ಕಬ್ಬಿನ ಹೆಚ್ಚುವರಿ ದರ ನಿಗದಿ ಮಾಡಬೇಕು.ಹಿಂದಿನ ವರ್ಷ ನಿಗದಿ ಮಾಡಿ ಆದೇಶ ಹೊರಡಿಸಿದ್ದ ಟನ್‌ಗೆ ೧೫೦ ರು. ತಕ್ಷಣವೇ ಕೊಡಿಸಬೇಕು. ರಾಜ್ಯಾದ್ಯಂತ ಎಪಿಎಂಸಿಗಳಲ್ಲಿ ರೈತರ ಉತ್ಪನ್ನಗಳನ್ನು ಖರೀದಿಸಿದ ದಲ್ಲಾಳಿಗಳು ಶೇ.೧೦ ರಷ್ಟು ಕಮಿಷನ್ ತೆಗೆದುಕೊಳ್ಳುವುದನ್ನು ನಿಲ್ಲಿಸಬೇಕು ತೂಕದಲ್ಲಿ ೫ ರಿಂದ ೬ ಕೆಜಿ ಸ್ಯಾಂಪಲ್ ತೆಗೆದುಕೊಳ್ಳುವುದನ್ನು ನಿಲ್ಲಿಸಬೇಕು. ಮಹದಾಯಿ ಯೋಜನೆಗೆ ವನ್ಯಜೀವಿ ಹಾಗೂ ಪರಿಸರ ಇಲಾಖೆಗಳ ಪರವಾನಿಗೆಗಳನ್ನು ಕೇಂದ್ರ ಸರ್ಕಾರವು ನೀಡಬೇಕು ಎಂಬ ಹಕ್ಕೋತ್ತಾಯಗಳನ್ನು ಮಂಡಸಲಾಗುವುದು, ಈ ಜಾಗೃತಿ ಸಮಾವೇಶಕ್ಕೆ ಜಿಲ್ಲಾ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾರ್ಯಾಧ್ಯಕ್ಷ ರೇವಣ್ಣ ಉಡೀಗಾಲ, ಉಪಾಧ್ಯಕ್ಷ ಪಟೇಲ್ ಶಿವಮೂರ್ತಿ, ತಾಲ್ಲೂಕು ಉಪಾಧ್ಯಕ್ಷ ಹೆಗ್ಗೋಠಾರ ಶಿವಸ್ವಾಮಿ, ಪ್ರದಾನಕಾರ್ಯದರ್ಶಿ ಸುಂದರಪ್ಪ, ನಂಜುಂಡಸ್ವಾಮಿ, ಪ್ರದೀಪ್ ಎಂ. ಕುರುಬೂರು ಇದ್ದರು.