ಮತದಾನದಲ್ಲಿ ಪಾಲ್ಗೊಳ್ಳುವಿಕೆಗೆ ಜಾಗೃತಿ ಅವಶ್ಯಕ ಜಿ.ಪಂ. ಸಿಇಓ ಜಿ. ಪ್ರಭು

| Published : Mar 23 2024, 01:02 AM IST

ಮತದಾನದಲ್ಲಿ ಪಾಲ್ಗೊಳ್ಳುವಿಕೆಗೆ ಜಾಗೃತಿ ಅವಶ್ಯಕ ಜಿ.ಪಂ. ಸಿಇಓ ಜಿ. ಪ್ರಭು
Share this Article
  • FB
  • TW
  • Linkdin
  • Email

ಸಾರಾಂಶ

ದೇಶದ ಎಲ್ಲ ನಾಗರಿಕರು ಮತದಾನದಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಲು ಅರಿವು ಮೂಡಿಸುವುದು ಅವಶ್ಯಕವಾಗಿದೆ ಎಂದು ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ತಿಳಿಸಿದರು.

ಕನ್ನಡಪ್ರಭ ವಾರ್ತೆ ತುಮಕೂರು

ದೇಶದ ಎಲ್ಲ ನಾಗರಿಕರು ಮತದಾನದಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಲು ಅರಿವು ಮೂಡಿಸುವುದು ಅವಶ್ಯಕವಾಗಿದೆ ಎಂದು ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ತಿಳಿಸಿದರು.

ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ, ಸ್ವೀಪ್ ಸಮಿತಿ, ರೇಷ್ಮೆ ಇಲಾಖೆಯಿಂದ ಹಮ್ಮಿಕೊಂಡಿದ್ದ ಮತ ಜಾಗೃತಿ ಹಾಗೂ ರೇಷ್ಮೆ ಬೆಳೆಗಾರರ ಜಾಥಾ ಹಾಗೂ ತಾಂತ್ರಿಕ ಸಂವಾದದಲ್ಲಿ ಅವರು ಮಾತನಾಡಿದರು. ದೇಶದಲ್ಲಿ ಮತದಾನ ಕಡ್ಡಾಯವಾಗಿಲ್ಲ. ಆದರೂ ಚುನಾ ವಣಾ ಆಯೋಗ ಮತದಾನ ಜಾಗೃತಿಯನ್ನು ತನ್ನ ಧ್ಯೇಯನ್ನಾಗಿ ಅಳವಡಿಸಿಕೊಂಡು, ಮತದಾನಕ್ಕೆ ಪ್ರೇರೇಪಿಸುವ ಮೂಲಕ ಸದೃಢ ದೇಶವನ್ನು ನಿರ್ಮಾಣ ಮಾಡಲು ಗ್ರಾಮ ಪಂಚಾಯತಿ ಮಟ್ಟದಲ್ಲಿಯೂ ಕಾರ್ಯಕ್ರಮ ರೂಪಿಸಿದೆ ಎಂದರು.ಪ್ರಪಂಚದ ಶೇ.50 ರಷ್ಟು ದೇಶಗಳು ಪ್ರಜಾಪ್ರಭುತ್ವವನ್ನು ಒಪ್ಪಿಕೊಂಡಿದ್ದು, ಭಾರತ ಇಂದು ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಗುರುತಿಸಿ ಕೊಂಡಿದೆ. ನಮ್ಮ ಜವಾಬ್ದಾರಿ ಅರಿತು, ಅದನ್ನು ಪಾಲನೆ ಮಾಡಿದಾಗ ಮಾತ್ರ ಮುಂದಿನ ಪೀಳಿಗೆಗೆ ಉತ್ತಮ ಆದರ್ಶ ನೀಡಬಹುದು. ಈ ಚುನಾವಣೆಯಲ್ಲಿ ಹಿರಿಯ ಮತದಾರರಿಗೆ, ವಿಕಲಚೇತನರಿಗೆ ಮನೆಯಲ್ಲಿಯೇ ಮತದಾನ ಮಾಡಲು ಚುನಾವಣಾ ಆಯೋಗ ಅವಕಾಶ ನೀಡಿದ್ದು, ಮತದಾನ ಹೆಚ್ಚಳ ಮಾಡುವ ಮೂಲಕ ಸದೃಢ ವ್ಯವಸ್ಥೆಗಾಗಿ ಉತ್ತಮ ವ್ಯಕ್ತಿಯನ್ನು ಆರಿಸುವ ಪಣತೊಡೋಣ ಎಂದು ಕರೆ ನೀಡಿದರು.ರೇಷ್ಮೆ ಇಲಾಖೆಯು ಬೆಳೆಗಾರರಿಗೆ ನಿರಂತರವಾಗಿ ತಾಂತ್ರಿಕ ಅರಿವು ಮೂಡಿಸುವಲ್ಲಿ ಜಿಲ್ಲೆ ಮುಂದಿದೆ. ಜಿಲ್ಲೆಯಲ್ಲಿ ರೇಷ್ಮೆ ಬೆಳೆಗಾರರು ಆರ್ಥಿಕ ಸ್ವಾವಲಂಬಿಗಳಾಗಿದ್ದಾರೆ. ಬಹುವಿಧ ಬೆಳೆಗಳ ಮೂಲಕ ರೈತರು ಆರ್ಥಿಕ ಕ್ಷಮತೆಯನ್ನು ಹೆಚ್ಚಿಸಿಕೊಳ್ಳಬಹುದಾಗಿದ್ದು, ಬಯೋಟ್ರಿಯನ್ ಉತ್ಪಾದನೆಯಲ್ಲಿ ರಾಜ್ಯಕ್ಕೆ ಜಿಲ್ಲೆ ಮೊದಲ ಸ್ಥಾನದಲ್ಲಿದೆ ಎಂದರು.

ನರೇಗಾ, ಹನಿ ನೀರಾವರಿ ಸೇರಿದಂತೆ ತಾಂತ್ರಿಕ ವಿಚಾರದಲ್ಲಿಯೂ ತುಮಕೂರು ಜಿಲ್ಲೆ ರಾಜ್ಯದಲ್ಲಿಯೇ ಮೊದಲ ಸ್ಥಾನವನ್ನು ಪಡೆದಿರುವುದಕ್ಕೆ ರೈತರು ಮತ್ತು ಇಲಾಖೆಗಳ ನಡುವಿನ ಒಡನಾಟ ಕಾರಣವಾಗಿದ್ದು, ಒಂದು ಕುಟುಂಬದಂತೆ ಕಾರ್ಯನಿರ್ವಹಿಸುತ್ತಿರುವುದರಿಂದ ಉತ್ತಮ ಫಲಿತಾಂಶ ಬಂದಿದೆ. ತುಮಕೂರು ಜಿಲ್ಲೆಯಲ್ಲಿ 25 ಸಾವಿರ ಹೆಕ್ಟೇರ್ ರೇಷ್ಮೇ ಭೂಮಿ ವಿಸ್ತೀರ್ಣಕ್ಕೆ ಅವಕಾಶವಿದ್ದು, ಸರ್ಕಾರದ ಯೋಜನೆಗಳನ್ನೇ ಸದ್ಭಳಕೆ ಮಾಡಿಕೊಳ್ಳಲು ರೈತರು ಮುಂದಾದರೆ ಜಿಲ್ಲೆ ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಪಡೆಯಲಿದೆ, ರೇಷ್ಮೆ ಉತ್ಪನ್ನಗಳ ಮೌಲ್ಯವರ್ಧನೆ ಕಡೆಗೆ ಇಲಾಖೆ ಮುತುವರ್ಜಿ ವಹಿಸಬೇಕೆಂದು ಕರೆ ನೀಡಿದರು.ರೇಷ್ಮೆ ಇಲಾಖೆ ಉಪನಿರ್ದೇಶಕ ಡಾ.ವೈ.ಕೆ.ಬಾಲಕೃಷ್ಣಪ್ಪ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಚುನಾವಣೆಗೆ ಪ್ರಾಮುಖ್ಯತೆ ಹೆಚ್ಚಿದ್ದು, ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ನಮ್ಮ ಹಕ್ಕನ್ನು ಚಲಾಯಿಸಬೇಕು ಎಂದು ಮನವಿ ಮಾಡಿದರು. ರೇಷ್ಮೆ ಬೆಳೆಗಾರರು ವಿಜ್ಞಾನಿಗಳೊಂದಿಗೆ ಸಂವಾದ ಮಾಡುವ ಮೂಲಕ ರೇಷ್ಮೆ ಬೆಳೆಯನ್ನು ಕಾಪಾಡುವ ನಿಟ್ಟಿನಲ್ಲಿ ಅವಶ್ಯಕವಾಗಿರುವ ತಾಂತ್ರಿಕ ಅರಿವು ಮೂಡಿಸಲು ತಾಂತ್ರಿಕ ಕಾರ್ಯಾಗಾರ ಅವಶ್ಯಕವಾಗಿದ್ದು, ರೈತರು ಕಾರ್ಯಾಗಾರದ ಸದುಪಯೋಗಪಡೆಯಬೇಕೆಂದರು.ಸಮಾರಂಭದಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ರಮೇಶ್, ಉಪ ನಿರ್ದೇಶಕ ಅಶೋಕ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಶಾರದಮ್ಮ, ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕಿ ಚೇತನಾ, ರೇಷ್ಮೆ ಬೆಳೆಗಾರ ಸ್ವಾಮಿ ಸೇರಿದಂತೆ ಇತರರಿದ್ದರು. ಕಾರ್ಯಕ್ರಮಕ್ಕೂ ಮೊದಲು ಮತಜಾಗೃತಿ ಕುರಿತು ಕಿರು ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ನಗರದ ಬಿಜಿಎಸ್ ವೃತ್ತದಿಂದ ಗುಬ್ಬಿ ವೀರಣ್ಣ ಕಲಾಕ್ಷೇತ್ರ ದವರೆಗೆ ರೇಷ್ಮೆ ಬೆಳೆಗಾರರ ಜಾಥಾ ಹಮ್ಮಿಕೊಂಡು ಮತ ಜಾಗೃತಿ ಮೂಡಿಸಲಾಯಿತು.