ಹೆಣ್ಣು ಮಕ್ಕಳಿಗೆ 18 ವರ್ಷ, ಗಂಡು ಮಕ್ಕಳಿಗೆ 21 ವರ್ಷದವರೆಗೆ ಮದುವೆ ಮಾಡಬಾರದು. ಇಂತಹ ಘಟನೆಗಳು ಕಂಡು ಬಂದಲ್ಲಿ ಬಾಲ್ಯವಿವಾಹ ನಿಷೇಧ ಕಾಯ್ದೆ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ

ಕುಷ್ಟಗಿ: ಸಮಾಜದಲ್ಲಿ ನಡೆಯುವ ಅನಿಷ್ಟ ಪದ್ಧತಿಗಳಾದ ಬಾಲ್ಯವಿವಾಹ ಹಾಗೂ ಬಾಲ ಕಾರ್ಮಿಕ ಪದ್ಧತಿ ನಿಯಂತ್ರಣ ಮಾಡುವದು ಒಂದು ಸವಾಲಾಗಿದ್ದು, ಪ್ರತಿಯೊಬ್ಬರೂ ಜಾಗೃತರಾಗಿ ಯುವಜನತೆಗೆ ಪಾಲಕರಿಗೆ ಅರಿವು ಮೂಡಿಸಬೇಕು ಎಂದು ಹಿರೇಮನ್ನಾಪೂರು ಬಿ ವಲಯದ ಅಂಗನವಾಡಿ ಸೂಪರವೈಸರ್ ಅನ್ನಪೂರ್ಣ ಪಾಟೀಲ ಹೇಳಿದರು.

ತಾಲೂಕಿನ ಕಂದಕೂರು ಗ್ರಾಮದಲ್ಲಿ ನಡೆದ ಬಾಲ್ಯವಿವಾಹ ತಡೆಗಟ್ಟುವಿಕೆಯ ಕುರಿತು ನಡೆದ ವಿಶೇಷ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬಾಲ್ಯವಿವಾಹ ಮುಕ್ತ ಗ್ರಾಮವನ್ನಾಗಿ ನಿರ್ಮಾಣ ಮಾಡಲು ಅಭಿಯಾನ ಹಮ್ಮಿಕೊಂಡಿದ್ದು ಪ್ರತಿಯೊಬ್ಬ ನಾಗರಿಕರು ಬಾಲ್ಯ ವಿವಾಹ ಮುಕ್ತ ಗ್ರಾಮವನ್ನಾಗಿ ಮಾಡಲು ಹಾಗೂ ಬಾಲ ಕಾರ್ಮಿಕ ಪದ್ಧತಿ ಕಿತ್ತಸೆಯಲು ಅಧಿಕಾರಿಗಳೊಂದಿಗೆ ಕೈ ಜೋಡಿಸಬೇಕು ಅಂತಹ ಘಟನೆಗಳು ಕಂಡು ಬಂದಲ್ಲಿ ಕೂಡಲೆ ಸಹಾಯವಾಣಿ 1098 ಅಥವಾ 15100 ಈ ನಂಬರಿಗೆ ಪೋನ್ ಮಾಡುವ ಮೂಲಕ ಮಾಹಿತಿ ತಿಳಿಸಬೇಕು ಎಂದು ತಿಳಿಸಿದರು.

ಹೆಣ್ಣು ಮಕ್ಕಳಿಗೆ 18 ವರ್ಷ, ಗಂಡು ಮಕ್ಕಳಿಗೆ 21 ವರ್ಷದವರೆಗೆ ಮದುವೆ ಮಾಡಬಾರದು. ಇಂತಹ ಘಟನೆಗಳು ಕಂಡು ಬಂದಲ್ಲಿ ಬಾಲ್ಯವಿವಾಹ ನಿಷೇಧ ಕಾಯ್ದೆ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ. ಇದನ್ನು ಮಾಡುವವರಿಗೆ ಮತ್ತು ಮಾಡಿಸುವವರಿಗೆ ದಂಡ ಮತ್ತು ಜೈಲು ಶಿಕ್ಷೆ ವಿಧಿಸಲಾಗುತ್ತದೆ ಪ್ರತಿಯೊಬ್ಬರು ಜಾಗೃತರಾಗಬೇಕು ಎಂದರು.

ಬಾಲ್ಯವಿವಾಹ ಮಾಡುವುದರಿಂದ ಯುವಜನತೆಯ ಆರೋಗ್ಯ ಮತ್ತು ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತದೆ, ಬಾಲ್ಯವಿವಾಹ ಮಾಡುವುದರಿಂದ ಇಬ್ಬರಿಗೂ ವಯಸ್ಸಿಗೆ ಮೀರಿದ ಜವಾಬ್ದಾರಿ ಹೊರಿಸಿದಂತಾಗುತ್ತದೆ. ಅಪ್ರಾಪ್ತ ವಯಸ್ಸಿನಲ್ಲಿ ಗರ್ಭಿಣಿಯಾಗುವುದರಿಂದ ಗರ್ಭಕೋಶದ ಬೆಳವಣಿಗೆ ಪೂರ್ಣಗೊಳ್ಳದೆ ಹೆರಿಗೆ ಸಮಯದಲ್ಲಿ ತೊಂದರೆಗಳಾಗುತ್ತದೆ. ವಿಕಲಾಂಗ ಮಕ್ಕಳ ಜನನ ಉಂಟಾಗುತ್ತದೆ. ಮಕ್ಕಳು ಲೈಂಗಿಕ ದೌರ್ಜನ್ಯಕ್ಕೆ ಹಾಗೂ ಬಲತ್ಕಾರಕ್ಕೆ ಒಳಗಾಗುತ್ತಾರೆ. ರಕ್ತಹೀನತೆ ಉಂಟಾಗುತ್ತದೆ ಮತ್ತು ಕಡಿಮೆ ತೂಕದ ಮಗುವಿನ ಜನನವಾಗುವ ಸಾಧ್ಯತೆ ಇರುತ್ತದೆ, ಶಿಶುಗಳ ದೈಹಿಕ ಬೆಳವಣಿಗೆ ಕುಂಠಿತವಾಗುತ್ತದೆ. ಆದ್ದರಿಂದ ಬಾಲ್ಯವಿವಾಹ ನಿಷೇಧ ಕುರಿತು ಅರಿವು ಮೂಡಿಸಬೇಕು ಎಂದರು.

ಈ ಸಂದರ್ಭದಲ್ಲಿ ರೇಣುಕಾ ಹಿರೇಮುಕರ್ತಿನಾಳ, ಲಕ್ಷ್ಮೀ ಕಂದಕೂರ, ಪದ್ಮಾ ನಂದಾಪುರ, ಗಂಗಮ್ಮ, ಪಾರ್ವತೆಮ್ಮ ಹನುಮಸಾಗರ, ಯಂಕಮ್ಮ, ಶರಣಮ್ಮ ಹುಸೇನಬಿ ಅಲ್ಲಾಬಿ, ಲಕ್ಷ್ಮವ್ವ, ಬಸಮ್ಮ ಹಿರೇಮುಕರ್ತಿನಾಳ, ಹುಲಿಗೆಮ್ಮ, ಪುಷ್ಪಾವತಿ ಕಂದಕೂರ ಸೇರಿದಂತೆ ಗ್ರಾಮಸ್ಥರು, ಶಾಲಾ ವಿದ್ಯಾರ್ಥಿಗಳು ಇದ್ದರು.