ದೊಡ್ಡಬಳ್ಳಾಪುರ: ಇಲ್ಲಿನ ಮಹಿಳಾ ಸಮಾಜ ಕಸ್ತೂರಿ ಬಾ ಶಿಶು ವಿಹಾರದಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಸಂಘದ ಆವರಣದಲ್ಲಿ ನಡೆಯಿತು.
ಆರಕ್ಷಕ ಉಪನಿರೀಕ್ಷಕರಾದ ವರಲಕ್ಷ್ಮಿ ಮಾತನಾಡಿ, ಇಂದು ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಮುನ್ನಡೆಯುತ್ತಿದ್ದಾರೆ. ಆದರೆ, ಕೆಲಸದ ಸಮಯದಲ್ಲಿ ಮಹಿಳೆಯರು, ಶಾಲಾ ಕಾಲೇಜುಗಳಲ್ಲಿ ಮಕ್ಕಳ ಮೇಲೆ ಲೈಂಗಿಕ ಕಿರುಕುಳ ನಡೆಯುತ್ತಿರುವುದು ಕಂಡು ಬರುತ್ತದೆ. ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟಲು ಮತ್ತು ಅವರಿಗೆ ಸುರಕ್ಷತೆ ಒದಗಿಸಲು ಭಾರತದಲ್ಲಿ ಪ್ರಮುಖ ಕಾನೂನುಗಳಿದ್ದು ದೈಹಿಕ, ಲೈಂಗಿಕ, ಆರ್ಥಿಕ ಮತ್ತು ಭಾವನಾತ್ಮಕ ಕಿರುಕುಳದಿಂದ ರಕ್ಷಣೆ ನೀಡುತ್ತದೆ ಎಂದು ಹೇಳಿದರು.ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆ 2005ರ ಮೂಲಕ ಕುಟುಂಬದೊಳಗೆ ನಡೆಯುವ ದೌರ್ಜನ್ಯ, ವರದಕ್ಷಿಣೆ ಕಿರುಕುಳದ ವಿರುದ್ಧ ರಕ್ಷಣೆ ಮತ್ತು ಆರ್ಥಿಕ ಪರಿಹಾರ ಒದಗಿಸುತ್ತದೆ. ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯ ತಡೆಯಲು ಪೋಕೋ ಕಾಯ್ದೆ ಪರಿಣಾಮ ಕಾರಿಯಾಗಿದೆ. ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಕಾನೂನು ನೆರವು, ತಾತ್ಕಾಲಿಕ ಆಶ್ರಯ, ಕೌನ್ಸೆಲಿಂಗ್ ಒದಗಿಸುತ್ತದೆ. ಕೌಟುಂಬಿಕ ದೌರ್ಜನ್ಯ ಕಾಯ್ದೆಯಡಿ ಸಂತ್ರಸ್ತರಿಗೆ ಸಹಾಯ ಮಾಡಲು ಪ್ರತಿ ಜಿಲ್ಲೆಯಲ್ಲೂ ಸ್ವಯಂ ಸೇವಕರು ನೇಮಕಗೊಂಡಿದ್ದು, ಮಹಿಳೆಯರಿಗೆ ಅರಿವಿರಬೇಕು ಎಂದು ಹೇಳಿದರು.ಎಂಎಸ್‌ವಿ ಶಾಲೆ ಕಾರ್ಯದರ್ಶಿ ಮಂಜುಳಾ ಸುಬ್ರಹ್ಮಣ್ಯ ಮಾತನಾಡಿ, ಮಹಿಳೆಯರು ಇಂದು ಎಲ್ಲಾ ಕ್ಷೇತ್ರದಲ್ಲಿಯೂ ಮುನ್ನಡೆಯುತ್ತಿದ್ದಾರೆ. ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರು ಸಾಧನೆ ಅನನ್ಯವಾಗಿದೆ. ಇಂತಹ ಮಹಿಳೆಯರಿಗೆ ಸಮಾಜ ಗೌರವ ನೀಡಿ ಅವರನ್ನು ಸ್ಮರಿಸಬೇಕಿದೆ. ಮಹಿಳೆಯರ ಸ್ವಾಭಿಮಾನ ಹಾಗೂ ಅವರಿಗೆ ನೀಡಬೇಕಾದ ಸ್ಥಾನಮಾನಗಳ ಕುರಿತು ಚರ್ಚಿಸಲು ಮಹಿಳಾ ದಿನಾಚರಣೆ ಮಹತ್ವದ್ದಾಗಿದೆ ಎಂದರು.ವೈದ್ಯೆ ಡಾ.ಎಂ.ಎಸ್.ಗೀತಾ ಮಾತನಾಡಿ, ಮಹಿಳೆಯರು ತಮ್ಮ ಕುಟುಂಬದ ಹೊಣೆಗಾರಿಕೆಯೊಂದಿಗೆ ತಮ್ಮ ಆರೋಗ್ಯವನ್ನೂ ಕಾಪಾಡಿ ಕೊಳ್ಳಬೇಕಾದ ಅಗತ್ಯವಿದೆ. ಪ್ರತಿ ತಿಂಗಳ 2ನೇ ಶನಿವಾರ ತಮ್ಮ ಕ್ಲಿನಿಕ್ ನಿಂದ ಮಹಿಳೆಯರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಸುವುದಾಗಿ ಭರವಸೆ ನೀಡಿದರು.
ಮಹಿಳಾ ಸಮಾಜದ ಅಧ್ಯಕ್ಷೆ ಎಂ.ಕೆ. ವತ್ಸಲಾ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಉಪಾಧ್ಯಕ್ಷೆ ವಿ.ನಿರ್ಮಲಾ, ಕಾರ್ಯದರ್ಶಿ ಗಿರಿಜಾ ಬಿ.ಎ, ಸಹ ಕಾರ್ಯದರ್ಶಿ ವೀಣಾ.ಎಸ್, ಖಜಾಂಚಿ ಬಿ.ಸಿ.ಕವಿತಾ, ನಿರ್ದೇಶಕರಾದ ಕೆ.ಜೆ.ಕವಿತ, ಎಂ.ಉಮಾದೇವಿ, ಕೆ.ಎಲ್.ಮಮತಾ, ಆರ್.ಕವಿತಾ, ಕೆ.ವನಿತ ಮತ್ತಿತರರು ಭಾಗವಹಿಸಿದ್ದರು.5ಕೆಡಿಬಿಪಿ4-
ದೊಡ್ಡಬಳ್ಳಾಪುರದ ಮಹಿಳಾ ಸಮಾಜ ಕಸ್ತೂರಿ ಬಾ ಶಿಶು ವಿಹಾರದಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ನಡೆಯಿತು.