ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಗರ್ಭಿಣಿ, ಬಾಣಂತಿಯರ ಹಾಗೂ ಚಿಕ್ಕ ಮಕ್ಕಳಲ್ಲಿನ ಅಪೌಷ್ಟಿಕತೆ ಮತ್ತು ರಕ್ತಹೀನತೆ ತಡೆಯಲು ಸಾರ್ವಜನಿಕರಲ್ಲಿ ಹಾಗೂ ಸಮುದಾಯದಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಸಂಗಪ್ಪ ಹೇಳಿದರು.ನಗರದ ಡಾ.ಅಂಬೇಡ್ಕರ್ ಭವನದಲ್ಲಿ ಗುರುವಾರ ಬಾಗಲಕೋಟೆ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ತಾಲೂಕು ಆಡಳಿತ, ತಾಪಂ ಹಾಗೂ ಶಿಶು ಅಭಿವೃದ್ಧಿ ಯೋಜನೆ ಸಹಯೋಗದಲ್ಲಿ ನಡೆದ ಜಿಲ್ಲಾ ಮತ್ತು ತಾಲೂಕು ಮಟ್ಟದ ಪೋಷನ್ ಮಾಸಾಚರಣೆ, ಸ್ವಾಸ್ಥ್ಯ ನಾರಿ, ಸಶಕ್ತ ಕುಟುಂಬ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜನಿಸುವ ಪ್ರತಿಯೊಬ್ಬ ಮಗು ದೇಶದ ಆಸ್ತಿಯಾಗಬೇಕೆಂಬ ಉದ್ದೇಶದಿಂದ ಗರ್ಭಾವಸ್ಥೆಯಲ್ಲಿ ಮತ್ತು ಹೆರಿಗೆಯಲ್ಲಾಗುವ ಅಪಾಯ ತಪ್ಪಿಸುವ ನಿಟ್ಟಿನಲ್ಲಿ ಈ ಪೋಷನ್ ಮಾಸಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಗರ್ಭಾವಸ್ಥೆಯ ಸಮಯದಲ್ಲಿ ಕಬ್ಬಿಣಾಂಶದ ಕೊರತೆಯಿಂದ ತಾಯಂದಿರು ಮರಣ ಹೊಂದುತ್ತಿದ್ದಾರೆ. ಆರೋಗ್ಯ ಅಮೂಲ್ಯವಾಗಿದ್ದು, ತಮ್ಮ ಜೀವನ ಕಳೆದು ಕೊಳ್ಳುವಂತಾಗಬಾರದು. ಗರ್ಭಿಣಿ ಮಹಿಳೆಯರು ರಕ್ತ ತಪಾಸಣೆ ಮಾಡಿಸಿಕೊಂಡು ತಮ್ಮ ಆರೋಗ್ಯವನ್ನು ಉತ್ತಮವಾಗಿಟ್ಟುಕೊಂಡಾಗ ಮಾತ್ರ ಸಮಾಜಕ್ಕೆ ಆರೋಗ್ಯವಂತ ಮಗುವನ್ನು ಕೊಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಜಂಟಿ ನಿರ್ದೇಶಕ ನಟರಾಜ್ ಮಾತನಾಡಿ, ತಾಯಿ ಗರ್ಭಿಣಿಯಿಂದ ಹಿಡಿದು ಮಗು ಜನಿಸಿ, ಆರು ವರ್ಷ ತುಂಬಿ ಶಾಲೆಗೆ ಹೋಗುವವರೆಗೆ ಸಂಪೂರ್ಣ ಮಗುವಿನ ಮಾಹಿತಿ ಅಂಗನವಾಡಿ ಕಾರ್ಯಕರ್ತೆಯರಿಗೆ ಇರುತ್ತದೆ. ಅಪೌಷ್ಠಿಕತೆಯಿಂದ ಹುಟ್ಟಿದ ಮಕ್ಕಳು, ಬಾಣಂತಿಯರು ಮರಣ ಹೊಂದುತ್ತಿದ್ದಾರೆ. ಅದನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರ ಯೋಜನೆಗಳನ್ನು ರೂಪಿಸಿದ್ದು, ಅವುಗಳ ಸಮರ್ಪಕ ಅನುಷ್ಠಾನಕ್ಕೆ ತರುವ ಕೆಲಸವಾಗಬೇಕು ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಕೃಷಿ ವಿಜ್ಞಾನ ಕೇಂದ್ರ ವಿಷಯ ತಜ್ಞೆ ಡಾ.ರಮೀತ ಬಿ.ಈ ಅವರು ಪೌಷ್ಠಿಕ ಆಹಾರದ ಬಗ್ಗೆ ವಿವರವಾಗಿ ತಿಳಿಸಿದರು. ಈ ವೇಳೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಚಂದ್ರಶೇಖರ ದಿಡ್ಡಿ ಅಂಗನವಾಡಿ ಕಾರ್ಯಕರ್ತೆಯರೊಂದಿಗೆ ಸಂವಾದ ನಡೆಸಿದರು. ಗರ್ಭಿಣಿಯರಿಗೆ ಕೊಡುವ ಆಹಾರದ ಪ್ರಮಾಣ ಹೆಚ್ಚಿಗೆ ಆಗಬೇಕಿದೆ. ತರಕಾರಿ ಪದಾರ್ಥಗಳನ್ನು ಹೆಚ್ಚಿಗೆ ನೀಡಲು ತಿಳಿಸಿದರು. ಅಲ್ಲದೇ ಫೇಸ್ ರೆಕಾಗ್ನಿಜೇಶನ್ ಇರುವುದರಿಂದ ತೊಂದರೆಯಾಗುತ್ತಿದೆ ಎಂದು ತಿಳಿಸಿದಾಗ ಪಾರದರ್ಶಕವಾಗಿ ಮಾಡಲು ಈ ವ್ಯವಸ್ಥೆ ಮಾಡಲಾಗಿದೆ ಎಂದು ದಿಡ್ಡಿ ತಿಳಿಸಿದರು.ಈ ವೇಳೆ ಸಾಂಕೇತಿಕವಾಗಿ 5 ಜನ ಗರ್ಭಿಣಿಯರಿಗೆ ಸೀಮಂತ ಕಾರ್ಯ, 6 ತಿಂಗಳು ಪೂರ್ಣಗೊಂಡ 5 ಜನ ಮಕ್ಕಳಿಗೆ ಅನ್ನಪ್ರಾಶನ ಹಾಗೂ ಮೂರು ಜನ ಮಕ್ಕಳ ಹುಟ್ಟುಹಬ್ಬ ಆಚರಿಸಲಾಯಿತು. ಅಲ್ಲದೇ ತಾಯಿ ಹೆಸರಿನಲ್ಲಿ ಒಂದು ಗಿಡ ನೆಡುವ ಕಾರ್ಯಕ್ರಮದಡಿ ಸಾಂಕೇತಿಕವಾಗಿ ಸಸಿ ವಿತರಿಸಲಾಯಿತು. ಪ್ರಾರಂಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪ್ರಭಾಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಸುಮಂಗಲಾ ಹಿರೇಮನಿ, ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಮೇಶ ಸೂಳಿಕೇರಿ, ಜಿಲ್ಲಾ ನಿರೂಪಣಾಧಿಕಾರಿ ಮಂಜುನಾಥ ಪರಸನ್ನವರ ಸೇರಿ ಇತರರು ಇದ್ದರು.