ಸಹಸ್ರಾರು ವರ್ಷಗಳ ಹಿರಿಮೆಯನ್ನು ಹೊಂದಿರುವ ಕನ್ನಡನಾಡಿನ ಇತಿಹಾಸ ಮತ್ತು ನೆಲಜಲ ಭಾಷೆಗಾಗಿ ತ್ಯಾಗ ಮಾಡಿದ ಮಹನೀಯರ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವ ಅಗತ್ಯವಿದೆ ಎಂದು ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ ಹೇಳಿದರು.
ತೀರ್ಥಹಳ್ಳಿ: ಸಹಸ್ರಾರು ವರ್ಷಗಳ ಹಿರಿಮೆಯನ್ನು ಹೊಂದಿರುವ ಕನ್ನಡನಾಡಿನ ಇತಿಹಾಸ ಮತ್ತು ನೆಲಜಲ ಭಾಷೆಗಾಗಿ ತ್ಯಾಗ ಮಾಡಿದ ಮಹನೀಯರ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವ ಅಗತ್ಯವಿದೆ ಎಂದು ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ ಹೇಳಿದರು.
ರಾಷ್ಟ್ರೀಯ ಹಬ್ಬಗಳ ವತಿಯಿಂದ ಪಟ್ಟಣದ ಡಾ. ಯು.ಆರ್.ಅನಂತಮೂರ್ತಿ ಸರ್ಕಾರಿ ಪ್ರೌಡಶಾಲಾ ಆವರಣದಲ್ಲಿ ನಡೆದ ಕನ್ನಡ ರಾಜ್ಯೋತ್ಸವದಲ್ಲಿ ಕನ್ನಡ ಧ್ವಜವನ್ನು ಅರಳಿಸಿ ಸಮಾರಂಭದ ಅಧ್ಯಕ್ಷತೆ ವಹಿಸಿ ಉದಯೋನ್ಮುಖ ಲೇಖಕರನ್ನು ಗೌರವಿಸಿ ಮಾತನಾಡಿ, ಶ್ರೀಮಂತವಾದ ಕನ್ನಡ ಭಾಷೆಯ ಬಗೆಗೆ ಅಭಿಮಾನ ಶೂನ್ಯತೆಯ ಪರಿಣಾಮ ಕನ್ನಡ ನೆಲದಲ್ಲೇ ಭಾಷೆಗೆ ಹಿನ್ನಡೆಯಾಗಿದೆ. ಕನ್ನಡಿಗರಾದ ನಾವು ಭಾವನಾತ್ಮಕವಾಗಿ ಭಾಷಾಭಿಮಾನದೊಂದಿಗೆ ಕನ್ನಡತನವನ್ನು ಮೈಗೂಡಿಸಿಕೊಳ್ಳುವ ಅಗತ್ಯವಿದೆ ಎಂದು ಹೇಳಿದರು.ರಾಷ್ಟ್ರಧ್ವಜಾರೋಹಣವನ್ನು ನೆರೆವೇರಿಸಿದ ತಹಸೀಲ್ದಾರ್ ಎಸ್.ರಂಜಿತ್, ಧ್ವಜ ಸಂದೇಶ ನೀಡಿ ಸುದೀರ್ಘ ಇತಿಹಾಸವನ್ನು ಹೊಂದಿರುವ ನಾವುಗಳು ನಮ್ಮ ಪಾರಂಪರಿಕ ಸಾಂಸ್ಕೃತಿಕ ಧಾರ್ಮಿಕ ಆಚರಣೆಗಳನ್ನು ಮರೆಯಬಾರದು. ಕರ್ನಾಟಕ ಏಕೀಕರಣ ಸೇರಿದಂತೆ ಈ ನೆಲದ ಹಿರಿಮೆಗಾಗಿ ಶ್ರಮಿಸಿದ ಮಹನೀಹರುಗಳ ಕೊಡುಗೆ ಅನನ್ಯವಾಗಿದ್ದು, ಮುಂದಿನ ಪೀಳಿಗೆಗೆ ಮಾದರಿಯಾಗಿ ಕನ್ನಡತನವನ್ನು ಮೆರೆಯೋಣ ಎಂದು ಹೇಳಿದರು.
ಸಮಾರಂಭದಲ್ಲಿ ವ್ಯಂಗಚಿತ್ರಕಾರ ನಟರಾಜ್ ಅರಳಸುರುಳಿ, ಲೇಖಕರಾದ ನೆಂಪೆ ದೇವರಾಜ್, ಡಾ. ಪ್ರಭಾಕರ್, ಶೃತಿ ಗದ್ದೆಗಲ್ ಮತ್ತು ಗಾಯತ್ರಿ ಶೇಷಗಿರಿಯವರನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ್, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಜಗದೀಶ್, ಪೋಲಿಸ್ ಇನ್ಸ್ಪೆಕ್ಟರ್ ಇಮ್ರಾನ್ಬೇಗ್, ಯು.ಆರ್.ಅನಂತಮೂರ್ತಿ ಸರ್ಕಾರಿ ಪ್ರೌಡಶಾಲಾ ಮುಖ್ಯೋಪಾಧ್ಯಾಯ ಮಂಜಪ್ಪ, ತಾ. ಕಸಾಪ ಅಧ್ಯಕ್ಷ ಟಿ.ಕೆ.ರಮೇಶ್ ಶೆಟ್ಟಿ, ಕರವೇ ಮುಖಂಡ ಸುರೇಂದ್ರ ಇತರರು ಇದ್ದರು.