ಸಾರಾಂಶ
ಕನ್ನಡಪ್ರಭ ವಾರ್ತೆ ಮಳವಳ್ಳಿ
ಪ್ರತಿಯೊಬ್ಬ ಹೆಣ್ಣು ಮಕ್ಕಳಿಗೂ ಉಚಿತ ಕಾನೂನು ಹಾಗೂ ಆರೋಗ್ಯ ಸೇವೆಗಳ ಕುರಿತು ಅರಿವು ಅಗತ್ಯವಾಗಿದೆ ಎಂದು ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದ 1ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಎಚ್.ಎಸ್.ಕಾವ್ಯಶ್ರೀ ಹೇಳಿದರು.ಪಟ್ಟಣದ ಸ್ತ್ರೀಶಕ್ತಿ ಭವನದಲ್ಲಿ ಶನಿವಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ತಾಲೂಕು ಕಾನೂನು ಸೇವೆಗಳ ಸಮಿತಿ ಹಾಗೂ ಶಿಶು ಅಭಿವೃದ್ಧಿ ಯೋಜನೆ ಸೇರಿದಂತೆ ವಿವಿಧ ಸರ್ಕಾರಿ ಇಲಾಖೆಗಳ ಸಹಯೋಗದೊಂದಿಗೆ ನಡೆದ ತಾಲೂಕು ಮಟ್ಟದ ಪೋಷಣ್ ಅಭಿಯಾನ ಮಾಸಾಚರಣೆ ಹಾಗೂ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ತಾಯಂದಿರು ಬೆಳಗ್ಗೆಯಿಂದ ರಾತ್ರಿಯವರೆಗೆ ಪ್ರತಿಯೊಂದು ಕೆಲಸಗಳಲ್ಲಿ ನಿರತರಾಗಿರುತ್ತಾರೆ. ಅವರಿಗೆ ಬಿಡುವು ಮರಿಚೀಕೆಯಾಗಿದೆ. ಇಂತಹ ಸಮಯದಲ್ಲಿ ಅವರು ಅನಾರೋಗ್ಯ ತುತಾಗುವ ಸಾಧ್ಯತೆ ಹೆಚ್ಚಾಗಿದೆ ಎಂದರು.ಮಹಿಳೆಯರು, ಹೆಣ್ಣು ಮಕ್ಕಳು ತಮ್ಮ ಆರೋಗ್ಯ ರಕ್ಷಣೆ ಕೂಡ ಮಹತ್ವ ನೀಡಬೇಕು. ಹೀಗಾಗಿ ಹೆಣ್ಣು ಮಕ್ಕಳಿಗಾಗಿ ಉಚಿತ ಕಾನೂನು ಹಾಗೂ ಆರೋಗ್ಯ ಸೇವೆಗಳ ಕುರಿತು ಅಧಿಕಾರಿಗಳು ತಮಗೆ ಸಂಪೂರ್ಣವಾಗಿ ಮಾಹಿತಿ ನೀಡಲಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ದಿನನಿತ್ಯದ ಕರ್ತವ್ಯಗಳ ಮಧ್ಯೆ ಮಹಿಳೆಯರು, ಮಕ್ಕಳು ಆರೋಗ್ಯ ಕಾಪಾಡಿಕೊಳ್ಳುವುದಕ್ಕೆ ಪೌಷ್ಟಿಕಾಂಶಯುಕ್ತ ಆಹಾರ ಸೇವನೆಗೆ ಆದ್ಯತೆ ನೀಡಬೇಕು. 5 ವರ್ಷದೊಳಗಿನ ಮಕ್ಕಳಲ್ಲಿ ಅಪೌಷ್ಟಿಕತೆ ಸಮಸ್ಯೆ ಕಾಡಬಹುದು. ಹೀಗಾಗಿ ತಾಯಂದಿರಿಗೆ ಪೌಷ್ಟಿಕಾಂಶಯುಕ್ತ ಆಹಾರ ನೀಡಬೇಕು ಎಂದರು.ಆರೋಗ್ಯದ ಮೇಲೆ ಗಮನ ನೀಡುವುದು ಮತ್ತು ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡುವುದು ಮಹತ್ವ ಪೂರ್ಣವಾಗಿದೆ. ಮಕ್ಕಳ ಪೋಷಣೆ ಮತ್ತು ಆರೈಕೆಯಲ್ಲಿ ಯಶಸ್ವಿಯಾಗಲು ಪೌಷ್ಟಿಕ ಆಹಾರ, ಹಸಿರು ಸೊಪ್ಪುಗಳ ಸದ್ಬಳಿಕೆಯಿಂದ ಮತ್ತು ಕಲೆಬೆರಿಕೆ ಮುಕ್ತ ಆಹಾರದಿಂದ ಮಾತ್ರ ಸಾಧ್ಯ ಎಂದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ನಂಜಾಮಣಿ ಮಾತನಾಡಿ, ತಾಲೂಕಿನ ಎಲ್ಲ ಅಂಗನವಾಡಿ ಕೇಂದ್ರಗಳು ಪಾರದರ್ಶಕವಾಗಿ ಕಾರ್ಯ ನಿರ್ವಹಿಸುತ್ತಿದೆ. ಎಲ್ಲವೂ ಆನ್ಲೈನ್ ನಲ್ಲಿ ಮಾಹಿತಿ ಸಂಗ್ರಹವಾಗುತ್ತದೆ. ಅಂಗನವಾಡಿ ಕಾರ್ಯಕರ್ತೆಯರು ಮಕ್ಕಳು ಮತ್ತು ಗರ್ಭಿಣಿಯರ ಆರೋಗ್ಯ ಕಾಪಾಡುವ ಜೊತೆಗೆ ಸರ್ಕಾರಿ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಕಾರ್ಯ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.ಅಂಗನವಾಡಿ ಮೇಲ್ವಿಚಾರಕಿ ಮಂಜುಳಾ ಹಾಗೂ ಸಹಾಯಕ ಸರ್ಕಾರಿ ಅಭಿಯೋಜಕ ಶಂಕರಸ್ವಾಮಿ ಮಾತನಾಡಿದರು.
ಗರ್ಭಿಣಿಯರಿಗೆ ಸೀಮಂತ ಹಾಗೂ ಮಕ್ಕಳಿಗೆ ಅನ್ನಪ್ರಸಾಣ ಕಾರ್ಯಕ್ರಮ ನಡೆಯಿತು. ಇದೇ ವೇಳೆ ಐಸಿಡಿಎಸ್ ಯೋಜನೆ ಆರಂಭವಾಗಿ 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ಸಂಭ್ರಮಾಚರಣೆ ಮಾಡಲಾಯಿತು.ಕಾರ್ಯಕ್ರಮದಲ್ಲಿ ಅಂಗನವಾಡಿ ಮೇಲ್ವಿಚಾರಕಿಯರಾದ ಶೈಲಜಾ, ಸರಳಾ, ಸಿದ್ದರಾಜಮ್ಮ, ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಲತಾ, ಗೌವರಾಧ್ಯಕ್ಷೆ ಶಿವಮ್ಮ, ಕಾರ್ಯದರ್ಶಿ ನಾಗಮ್ಮ, ಖಂಜಾಚಿ ಭಾಗ್ಯವತಿ ಪಾಲ್ಗೊಂಡಿದ್ದರು.