ಸಾರಾಂಶ
ಕನ್ನಡಪ್ರಭ ವಾರ್ತೆ ಹಾನಗಲ್ಲ
ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಜನಾಂಗದ ಮೇಲೆ ದೌರ್ಜನ್ಯ ತಡೆಯಲು ಇರುವ ಕಾನೂನುಗಳನ್ನು ಅರಿತು ನಮ್ಮ ಸಂರಕ್ಷಣೆಗೆ ಮುಂದಾಗಬೇಕು ಎಂದು ವಸತಿ ನಿಲಯದ ವಾರ್ಡನ್ ಅಶೋಕ ಮುದಕಮ್ಮನವರ ತಿಳಿಸಿದರು.ತಾಲೂಕಿನ ಅಕ್ಕಿಆಲೂರು ಸಿ.ಜಿ. ಬೆಲ್ಲದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾಲೂಕ ಆಡಳಿತ, ತಾಪಂ, ಕಾನೂನು ಇಲಾಖೆ, ಪೊಲೀಸ್ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಹಾನಗಲ್ಲ ಇವುಗಳ ಸಹಭಾಗಿತ್ವದಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ದೌರ್ಜನ್ಯ ಪ್ರತಿಬಂಧ ಅಧಿನಿಯಮ-1989 ಹಾಗೂ 2015 ಮತ್ತು ನಿಯಮಗಳು 1995 ಮತ್ತು ಪರಿಷ್ಕೃತ ನಿಯಮಗಳು 2016 ರಡಿ ಅನುಷ್ಠಾನಗೊಳಿಸುವ ಕುರಿತು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಹಾಗೂ ಇತರೆ ಸಮುದಾಯದ ವ್ಯಕ್ತಿಗಳಿಗೆ ಮತ್ತು ವಿಶೇಷವಾಗಿ ಯುವಕರಿಗೆ ಅರಿವು ಮೂಡಿಸುವ ವಿಚಾರ ಸಂಕಿರಣ ಹಾಗೂ ಕಮ್ಮಟ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರಗಳು ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎಂಬ ತತ್ವದಡಿ ಎಲ್ಲರೂ ಒಟ್ಟಾಗಿ ಬದುಕಲು ಕಾನೂನು ರೂಪಿಸಿದೆ. ಇದರ ನಡುವೆಯೂ ದೌರ್ಜನ್ಯಗಳು ನಡೆಯುತ್ತಿರುವುದು ವಿಷಾದದ ಸಂಗತಿ. ಇದರ ಬಗ್ಗೆ ಎಲ್ಲರಿಗೂ ಕಾನೂನಿನ ಅರಿವು ಬೇಕು ಎಂದರು.
ನ್ಯಾಯವಾದಿ ವಿನಾಯಕ ಕುರುಬರ ಉಪನ್ಯಾಸ ನೀಡಿ, ಭಾರತ ದೇಶದಲ್ಲಿ ಹಿಂದಿನಿಂದ ಹಿಂದುಳಿದ ವರ್ಗದ ಜನರು ಮತ್ತು ದಲಿತರ ಮೇಲೆ ದೌರ್ಜನ್ಯ ನಡೆಯುತ್ತಿವೆ. ಅಸ್ಪೃಶ್ಯತೆ ನಿವಾರಣೆ ಹಾಗೂ ದಲಿತರನ್ನು ಸಮಾಜ ಮುಖಿಯನ್ನಾಗಿ ಮಾಡುವ ನಿಟ್ಟಿನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಸಂವಿಧಾನ ರಚಿಸಿದ್ದಾರೆ. ಶೋಷಿತರ ಸರ್ವತೋಮುಖ ಬೆಳವಣಿಗೆಗಾಗಿ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಮುಂದುವರೆಯಲು ಸಮಾನತೆಯ ಕಾನೂನನ್ನು ಜಾರಿಗೆ ತಂದು ಪ.ಜಾತಿ/ಪ.ಪಂಗಡದ ಜನರ ಮೇಲೆ ದೌರ್ಜನ್ಯ ಆಗುತ್ತಿರುವುದನ್ನು ನಿಯಂತ್ರಣಕ್ಕೆ ತರಲು ಕಾನೂನನ್ನು ರೂಪಿಸಿ ಅನುಷ್ಠಾನಗೊಳಿಸಲಾಗಿದೆ ಎಂದು ಹೇಳಿದರು.ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಜಿ.ಬಿ. ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿ, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಜನರ ಮೇಲೆ ಆಗುತ್ತಿರುವ ದೌರ್ಜನ್ಯ ತಡೆಗಟ್ಟಲು ಕಾನೂನನ್ನು ರೂಪಿಸಲಾಗಿದ್ದು, ಅದರಂತೆ ಯುವ ಸಮುದಾಯದ ವಿದ್ಯಾರ್ಥಿಗಳು ಸಹಬಾಳ್ವೆಯಿಂದ ಜೀವನ ನಡೆಸಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಅಕ್ಕಿಆಲೂರು ಸಿ.ಜಿ. ಬೆಲ್ಲದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ವಿ.ಎಂ. ಕುಮ್ಮೂರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಾನಗಲ್ಲ ಆರಕ್ಷಕ ಠಾಣೆಯ ನಿರೀಕ್ಷಕ ವೈ.ಟಿ. ಹಿರಿಗಪ್ಪನವರ., ಕಚೇರಿ ಅಧೀಕ್ಷಕ ಮಾಲತೇಶ ಸಿ.ಬಿ., ವಾರ್ಡನ್ ಪರಮೇಶ್ವರ ಗಾಡಿಹುಚ್ಚನವರ, ಶಂಕ್ರಪ್ಪ ಬಾರ್ಕಿ ಇತರರು ಪಾಲ್ಗೊಂಡಿದ್ದರು.