ಅಭಿವ್ಯಕ್ತಿ ಸ್ವಾತಂತ್ರ್ಯದ ಮಿತಿಗಳ ಅರಿವು ಅಗತ್ಯ: ಶ್ರೀನಿವಾಸ್

| Published : Jan 27 2024, 01:19 AM IST

ಅಭಿವ್ಯಕ್ತಿ ಸ್ವಾತಂತ್ರ್ಯದ ಮಿತಿಗಳ ಅರಿವು ಅಗತ್ಯ: ಶ್ರೀನಿವಾಸ್
Share this Article
  • FB
  • TW
  • Linkdin
  • Email

ಸಾರಾಂಶ

ಗಣತಂತ್ರ ಭಾರತ ಇಂದು ಜಾಗತಿಕ ಶಕ್ತಿಯಾಗಿದೆ. ಹಲವು ಸಂದಿಗ್ಧತೆ, ಸವಾಲುಗಳನ್ನು ಮೆಟ್ಟಿನಿಂತು ವಿಶ್ವದ ಗಮನ ಸೆಳೆದಿದೆ. ವಿಜ್ಞಾನ, ತಂತ್ರಜ್ಞಾನ, ಆರೋಗ್ಯ, ಶಿಕ್ಷಣ ಇತ್ಯಾದಿ ಮಹತ್ವದ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದೆ.

ದೊಡ್ಡಬಳ್ಳಾಪುರ: ಅಭಿವ್ಯಕ್ತಿ ಸ್ವಾತಂತ್ರ್ಯದ ಮಿತಿಗಳನ್ನು ಅರ್ಥ ಮಾಡಿಕೊಂಡು ಅವುಗಳನ್ನು ಜಾರಿಗೆ ತರುವ ಪ್ರಯತ್ನ ಆಗಬೇಕಿದೆ. ದೇಶದ ಯುವ ಶಕ್ತಿ ರಚನಾತ್ಮಕ ಚಿಂತನೆಗಳ ಮೂಲಕ ವಿಶ್ವ ವೇದಿಕೆಯಲ್ಲಿ ಗುರ್ತಿಸಿಕೊಳ್ಳುತ್ತಿರುವುದು ಆಶಾಭಾವನೆಯನ್ನು ಹೆಚ್ಚಿಸಿದೆ ಎಂದು ಉಪವಿಭಾಗಾಧಿಕಾರಿ ಶ್ರೀನಿವಾಸ್ ಅಭಿಪ್ರಾಯಪಟ್ಟರು.

ಇಲ್ಲಿನ ಭಗತ್‌ಸಿಂಗ್ ಕ್ರೀಡಾಂಗಣದಲ್ಲಿ ದೊಡ್ಡಬಳ್ಳಾಪುರ ಉಪವಿಭಾಗ ಮತ್ತು ತಾಲೂಕು ಆಡಳಿತದ ನೇತೃತ್ವದಲ್ಲಿ ನಡೆದ 75ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಗಣತಂತ್ರ ಭಾರತ ಇಂದು ಜಾಗತಿಕ ಶಕ್ತಿಯಾಗಿದೆ. ಹಲವು ಸಂದಿಗ್ಧತೆ, ಸವಾಲುಗಳನ್ನು ಮೆಟ್ಟಿನಿಂತು ವಿಶ್ವದ ಗಮನ ಸೆಳೆದಿದೆ. ವಿಜ್ಞಾನ, ತಂತ್ರಜ್ಞಾನ, ಆರೋಗ್ಯ, ಶಿಕ್ಷಣ ಇತ್ಯಾದಿ ಮಹತ್ವದ ಕ್ಷೇತ್ರಗಳಲ್ಲಿ ಗಮನೀಯ ಸಾಧನೆ ಮಾಡುತ್ತಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ಪರಸ್ಪರಸಹಕಾರವೇ ಯಶಸ್ಸಿನ ಮಂತ್ರ. ಈ ಹಂತದಲ್ಲಿ ಸಮಗ್ರತೆ ಮತ್ತು ಏಕತೆಯನ್ನು ಪ್ರತಿನಿಧಿಸುವ ಮೂಲಕ ಉತ್ತಮ ಬಾಂಧವ್ಯ ವೃದ್ದಿಸುವುದುಅಭಿವೃದ್ದಿಗೆ ಪೂರಕ. ಸಂವಿಧಾನ ನಮಗೆ ಕೊಟ್ಟಿರುವ ಮೂಲಭೂತ ಹಕ್ಕುಗಳು, ಕರ್ತವ್ಯಗಳಲ್ಲಿ ಲೋಪವಾಗದಂತೆ ಎಚ್ಚರ ವಹಿಸಬೇಕು ಎಂದರು.

ಶಾಸಕ ಧೀರಜ್ ಮುನಿರಾಜ್ ಮಾತನಾಡಿ, ಭಾರತ ವಿವಿಧತೆಯಲ್ಲಿ ಏಕತೆಯನ್ನೇ ಜೀವಾಳವಾಗಿಟ್ಟುಕೊಂಡಿರುವ ದೇಶ. ಜಾತಿ, ಮತ, ಪಂಥ, ಭಾಷೆ, ಸಂಸ್ಕೃತಿ ಎಲ್ಲವೂ ಬೇರೆ ಬೇರೆಯಾದರೂ ನಾವೆಲ್ಲರೂ ಭಾರತೀಯರು ಎಂಬ ಘೋಷ ವಾಕ್ಯವೇ ನಮ್ಮ ಉಸಿರು, ಭಾವನೆ ಮತ್ತು ಅನನ್ಯತೆಯಾಗಿದೆ. ಭಾರತ ಸಂವಿಧಾನ ಆಧುನಿಕ ಭಾರತದ ಮಾರ್ಗದರ್ಶಿಯಾಗಬೇಕು. ಭಾರತೀಯತೆ ನಮ್ಮೆಲ್ಲರ ಪರಮೋಚ್ಛ ಧರ್ಮವಾಗಬೇಕು ಎಂಬ ವಿಶಾಲ ಅರ್ಥದ ರಾಷ್ಟ್ರೀಯತೆಯನ್ನು ಪ್ರತಿಪಾದಿಸುವುದು ಇಂದಿನ ಅಗತ್ಯವಾಗಿದೆ ಎಂದರು.

8 ಸಾಧಕರಿಗೆ ಸನ್ಮಾನ:

ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಗುರ್ತಿಸಿಕೊಂಡಿರುವ ಕಲಾವಿದ ಸಿ.ನಾಗರಾಜ್, ಸಾರ್ವಜನಿಕ ಆಸ್ಪತ್ರೆ ವೈದ್ಯ ಡಾ.ರಮೇಶ್, ದೈಹಿಕ ಶಿಕ್ಷಕ ಅಶ್ವತ್ಥನಾರಾಯಣ್, ಪೊಲೀಸ್‌ ಉಪನಿರೀಕ್ಷಕ ಕೃಷ್ಣಪ್ಪ, ಕನ್ನಡಪರ ಹೋರಾಟಗಾರ ಮುನಿರಾಜು, ಅಂಗನವಾಡಿ ಶಿಕ್ಷಕಿ ರೇಣುಕಮ್ಮ, ಕ್ರೀಡಾಪಟು ಎಸ್.ಮನು, ಪೌರಕಾರ್ಮಿಕ ಸಿ.ಎಂ.ಸುಬ್ಬಯ್ಯ ಅವರನ್ನು ತಾಲೂಕು ಆಡಳಿತದಿಂದ ಪುರಸ್ಕರಿಸಿ ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಸುಧಾರಾಣಿ, ಉಪಾಧ್ಯಕ್ಷೆ ಫರ್ಹಾನಾ ತಾಜ್, ಡಿವೈಎಸ್ಪಿ ರವಿ, ತಹಸೀಲ್ದಾರ್ ವಿಭಾ ವಿದ್ಯಾ, ನಗರಸಭೆ ಆಯುಕ್ತ ಪರಮೇಶ್ರ್, ಬಿಇಒ ರಂಗಪ್ಪ ಉಪಸ್ಥಿತರಿದ್ದರು.

26ಕೆಡಿಬಿಪಿ1-

ದೊಡ್ಡಬಳ್ಳಾಪುರದಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ವಿವಿಧ ಕ್ಷೇತ್ರಗಳ ಸಾಧಕ ಗಣ್ಯರನ್ನು ಸನ್ಮಾನಿಸಲಾಯಿತು.