ಹಳೇ ವಿದ್ಯಾರ್ಥಿಗಳಿಂದ ಸರ್ಕಾರಿ ಶಾಲೆಗಳ ಉದ್ಧಾರ: ರಮೇಶ್

| Published : Jan 27 2024, 01:19 AM IST

ಸಾರಾಂಶ

ಸರ್ಕಾರಿ ಶಾಲೆಗಳಿಗೆ ಅಗತ್ಯವಾದ ಮೂಲಭೂತ ಸೌಲಭ್ಯಗಳನ್ನು ಗ್ರಾಮದ ಮುಖಂಡರು ಹಾಗೂ ಆ ಶಾಲೆಯ ಹಳೆಯ ವಿದ್ಯಾರ್ಥಿಗಳು ಮಾಡಿದರೆ ಸರ್ಕಾರಿ ಶಾಲೆಗಳಲ್ಲೂ ಗುಣಮಟ್ಟದ ಶಿಕ್ಷಣ ದೊರೆತು, ಶಾಲೆಗಳು ಮುಚ್ಚುವುದನ್ನು ತಡೆಯಬಹುದು ಎಂದು ನಿವೃತ್ತ ಭೂ ಮಾಪನಾ ಸಹಾಯಕ ನಿರ್ದೇಶಕ ರಮೇಶ್ ಹೇಳಿದರು. ಚನ್ನರಾಯಪಟ್ಟಣದ ಕಬ್ಬಾಳು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಪೀಠೋಪಕರಣ ಹಾಗೂ ಕ್ರೀಡಾ ಸಮವಸ್ತ್ರ ವಿತರಿಸಿ ಮಾತನಾಡಿದರು.

ನಿವೃತ್ತ ಭೂ ಮಾಪನಾ ಸಹಾಯಕ ನಿರ್ದೇಶಕ

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಸರ್ಕಾರಿ ಶಾಲೆಗಳಿಗೆ ಅಗತ್ಯವಾದ ಮೂಲಭೂತ ಸೌಲಭ್ಯಗಳನ್ನು ಗ್ರಾಮದ ಮುಖಂಡರು ಹಾಗೂ ಆ ಶಾಲೆಯ ಹಳೆಯ ವಿದ್ಯಾರ್ಥಿಗಳು ಮಾಡಿದರೆ ಸರ್ಕಾರಿ ಶಾಲೆಗಳಲ್ಲೂ ಗುಣಮಟ್ಟದ ಶಿಕ್ಷಣ ದೊರೆತು, ಶಾಲೆಗಳು ಮುಚ್ಚುವುದನ್ನು ತಡೆಯಬಹುದು ಎಂದು ನಿವೃತ್ತ ಭೂ ಮಾಪನಾ ಸಹಾಯಕ ನಿರ್ದೇಶಕ ರಮೇಶ್ ಹೇಳಿದರು.

ತಾಲೂಕಿನ ಶ್ರವಣಬೆಳಗೊಳ ಹೋಬಳಿಯ ಕಬ್ಬಾಳು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಪೀಠೋಪಕರಣ ಹಾಗೂ ಕ್ರೀಡಾ ಸಮವಸ್ತ್ರ ವಿತರಿಸಿ ಮಾತನಾಡಿದ ಅವರು, ಪೋಷಕರ ಖಾಸಗಿ ಶಾಲೆಗಳ ವ್ಯಾಮೋಹದಿಂದ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿ ಹಲವಾರು ಶಾಲೆಗಳು ಮುಚ್ಚಿವೆ. ಇದನ್ನು ತಪ್ಪಿಸಬೇಕಾದರೆ ನಾವೆಲ್ಲರೂ ಸೇರಿ ಶಾಲೆಗಳಿಗೆ ಅಗತ್ಯವಾದ ಬೇಕಾದ ಸೌಲಭ್ಯಗಳನ್ನು ಒದಗಿಸಬೇಕು ಎಂದರು.

ತಾಲೂಕು ಕುರುಬರ ಸಂಘದ ಅಧ್ಯಕ್ಷ ಕೆ.ಆರ್.ರಮೇಶ್ ಮಾತನಾಡಿ, ವೃತ್ತಿ ನಿಮಿತ್ತ ನಗರ ಪ್ರದೇಶಗಳಲ್ಲಿ ನೆಲೆಸಿದ್ದರೂ ಹುಟ್ಟಿದ ಊರನ್ನು ಮರೆಯದೇ ಓದಿದ ಶಾಲೆಯನ್ನು ಗುರುತಿಸಿ ಈ ರೀತಿಯ ಸಹಕಾರ ಮಾಡುತ್ತಿರುವುದು ಶ್ಲಾಘನೀಯವಾದುದು. ಇವರ ಆದರ್ಶವನ್ನು ಎಲ್ಲರೂ ರೂಢಿಸಿಕೊಳ್ಳಬೇಕು. ಹಾಗೂ ಈ ಶಾಲೆಗೆ ಅಗತ್ಯವಾಗಿ ಬೇಕಾಗಿರುವ ರಂಗಮಟಪ, ದ್ವಜದ ಕಟ್ಟೆ, ಕಂಪ್ಯೂಟರ್, ಟಿವಿ ಮುಂತಾದ ಸೌಕರ್ಯಗಳನ್ನು ಎಲ್ಲರ ಸಹಕಾರದಿಂದ ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಕುಮಾರ್, ಕೆಎಸ್‌ಆರ್‌ಟಿಸಿ ಸಹಾಯಕ ವ್ಯವಸ್ಥಾಪಕ ಕೆ.ಎನ್.ಕೃಷ್ಣೇಗೌಡ, ನಂದೀಶ್, ರಾಜಣ್ಣ, ಮಂಜಣ್ಣ, ನಾಗಣ್ಣ, ನಿಂಗರಾಜ್, ಚಂದ್ರು, ಎಸ್.ಡಿ.ಎಂ.ಸಿ. ಅಧ್ಯಕ್ಷ ಮಂಜೇಗೌಡ, ಶಿಕ್ಷಕರಾದ ಸುಕುಮಾರ್, ಇಂದಿರಾ ಜಯಕುಮಾರ್, ನಿಂಗರಾಜು ಇದ್ದರು. ವಿದ್ಯಾರ್ಥಿಗಳಿಗೆ ಉಚಿತವಾಗಿ ಸಮವಸ್ತ್ರ ನೀಡಿದ ರಮೇಶ್ ರವರಿಗೆ ಶಾಲೆ ವತಿಯಿಂದ ಅಭಿನಂದಿಸಲಾಯಿತು.

ಕಬ್ಬಾಳು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಪೀಠೋಪಕರಣ ಹಾಗೂ ಕ್ರೀಡಾ ಸಮವಸ್ತ್ರ ವಿತರಿಸಲಾಯಿತು.