ಯುವಕರಲ್ಲಿ ಕ್ರೀಡಾ ಚಟುವಟಿಕೆಗಳ ಜಾಗೃತಿ ಅಗತ್ಯವಿದೆ-ಮಮತಾ

| Published : Sep 21 2024, 01:56 AM IST

ಸಾರಾಂಶ

ಬದಲಾದ ಕಾಲದಲ್ಲಿ ಯುವಕರ ಚಿಂತನೆಗಳು ಬದಲಾಗುತ್ತಿದ್ದು, ಕ್ರೀಡೆಯತ್ತ ಯುವಕರ ಚಿತ್ತ ಬೆಳೆಯುತ್ತಿಲ್ಲ, ಆರೋಗ್ಯವನ್ನು ಕಾಪಾಡುವ ಕ್ರೀಡಾ ಚಟುವಟಿಕೆಗಳನ್ನು ಯುವಕರಲ್ಲಿ ಜಾಗೃತಗೊಳಿಸುವ ಅಗತ್ಯವಿದೆ ಎಂದು ಪುರಸಭೆ ಅಧ್ಯಕ್ಷೆ ಮಮತಾ ಆರೆಗೊಪ್ಪ ತಿಳಿಸಿದರು.

ಹಾನಗಲ್ಲ: ಬದಲಾದ ಕಾಲದಲ್ಲಿ ಯುವಕರ ಚಿಂತನೆಗಳು ಬದಲಾಗುತ್ತಿದ್ದು, ಕ್ರೀಡೆಯತ್ತ ಯುವಕರ ಚಿತ್ತ ಬೆಳೆಯುತ್ತಿಲ್ಲ, ಆರೋಗ್ಯವನ್ನು ಕಾಪಾಡುವ ಕ್ರೀಡಾ ಚಟುವಟಿಕೆಗಳನ್ನು ಯುವಕರಲ್ಲಿ ಜಾಗೃತಗೊಳಿಸುವ ಅಗತ್ಯವಿದೆ ಎಂದು ಪುರಸಭೆ ಅಧ್ಯಕ್ಷೆ ಮಮತಾ ಆರೆಗೊಪ್ಪ ತಿಳಿಸಿದರು.ಶುಕ್ರವಾರ ಇಲ್ಲಿನ ತಾಲೂಕು ಕ್ರೀಡಾಂಗಣದಲ್ಲಿ ಕ್ರೀಡಾ ಇಲಾಖೆ ಆಯೋಜಿಸಿದ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, ಜನಪದ ಆಟಗಳು ಮಾಯವಾಗಿವೆ. ಈಗ ಆಧುನಿಕ ಆಟಗಳಿಂದಲೂ ಯುವಕರು ದೂರ ಸರಿಯುತ್ತಿದ್ದಾರೆ. ಮೊಬೈಲ್‌ನಲ್ಲಿ ಮಿಂದು ಹೋದ ಯುವಕರಿಗೆ ಒಳ್ಳೆಯವ ಹವ್ಯಾಸಗಳತ್ತ ಚಿತ್ತ ಬೆಳೆಯುತ್ತಿಲ್ಲ. ಸರಕಾರ ಸೌಲಭ್ಯ ನೀಡುತ್ತಿದೆ. ಆದರೆ ಅದರ ಸದ್ಬಳಕೆಗೆ ಯುವಕರು ಮುಂದಾಗಬೇಕು ಎಂದರು.ಮುಖ್ಯ ಅತಿಥಿಯಾಗಿ ಮಾತನಾಡಿದ ಪುರಸಭೆ ಉಪಾಧ್ಯಕ್ಷೆ ವೀಣಾ ಗುಡಿ, ದಕ್ಷ ಚಿಂತನೆಗಳು ಆರೋಗ್ಯಯುತ ಮನಸ್ಸಿಗಾಗಿ ಕ್ರೀಡೆಗಳು ಬೇಕೆ ಬೇಕು. ಶಾಲಾ ಕಾಲೇಜು ಹಂತದಲ್ಲಿಯೇ ಯುವ ಪ್ರತಿಭೆಗಳನ್ನು ಬೆಳೆಸಲು ಮುಂದಾಗಬೇಕು. ಶಾಲಾ ಕಾಲೇಜುಗಳನ್ನು ಹೊರತುಪಡಿಸಿ ಸಾರ್ವಜನಿಕವಾಗಿ ಕ್ರೀಡೆಯನ್ನು ಪ್ರೋತ್ಸಾಹಿಸಲು ದಸರಾ ಕ್ರೀಡಾಕೂಟ ಹೆಚ್ಚು ಮಹತ್ವದ್ದಾಗಿದೆ. ಜೀವನದ ಶಿಸ್ತಿಗೆ ಕ್ರೀಡೆಗಳು ಬೇಕು. ಶಾರೀರಿಕ ಸದೃಢತೆಯನ್ನು ಕಾಪಾಡಿಕೊಳ್ಳಲು ಇಂತಹ ಆಟಗಳು ಸಹಜವಾಗಿಯೇ ಸಹಕಾರಿ ಎಂದರು.ಅಧ್ಯಕ್ಷತೆವಹಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ.ಸಾಲಿಮಠ, ಪಠ್ಯದೊಂದಿಗೆ ಕ್ರೀಡೆಯೂ ಅಷ್ಟೇ ಮಹತ್ವದ ಚಟುವಟಿಕೆಯಾಗಿದೆ. ಕ್ರೀಡಾ ಪ್ರತಿಭೆಗಳಿಗೆ ಉತ್ತಮ ಉದ್ಯೋಗ ಅವಕಾಶಗಳೂ ಇವೆ. ಪರಿಶ್ರಮದಿಂದ ಮಾತ್ರ ಎಲ್ಲವನ್ನೂ ಸಾಧಿಸಲು ಸಾಧ್ಯ. ಸಾಧಿಸುವ ಇಚ್ಛಾಶಕ್ತಿ ಮೊದಲು ಯುವಕರಲ್ಲಿರಬೇಕು ಎಂದರು.ಸಾಹಿತಿ ಪ್ರೊ.ಮಾರುತಿ ಶಿಡ್ಲಾಪೂರ, ರಾಜೇಶ ಗುಡಿ, ಮುಖ್ಯೋಪಾಧ್ಯಾಯ ಸಂತೋಷ ದೊಡ್ಡಮನಿ, ಲೋಯಲಾ ವಿಕಾಸ ಕೇಂದ್ರದ ಜರಾಲ್ಡ ಡಿಸೋಜ, ಲಕ್ಷ್ಮಣ ಉಗಲವಾಟ, ವಿನಾಯಕ ಕಳಸೂರ, ಎಚ್.ಎನ್. ಗೂಳಪ್ಪನವರ, ಗೌರಮ್ಮ ಕೊಂಡೋಜಿ, ಬಿ.ಎನ್. ದಿಡಗೂರ, ಪೀರಪ್ಪ ಸಿರ್ಸಿ, ಫಕ್ಕೀರೇಶ ಗೋಡಳ್ಳಿ, ಸಾಗರ ಸರ್ವದೆ, ಆರ್.ಎಸ್. ಹಿರೇಮಠ, ರಮೇಶ ಮಡಿವಾಳರ, ಪಂಚಾಕ್ಷರಿ ಚಿಕ್ಕೇರಿ ಮೊದಲಾದವರು ಇದ್ದರು.