ಸಾರಾಂಶ
ಗೋಕರ್ಣ: ಕಾಲಪ್ರಜ್ಞೆ ಮತ್ತು ದೇಶಪ್ರಜ್ಞೆಯನ್ನು ಬೆಳೆಸಿಕೊಂಡರೆ ಮಾತ್ರ ಉತ್ತಮ ಜೀವನ ಸಾಧ್ಯ ಎಂದು ರಾಘವೇಶ್ವರ ಭಾರತೀ ಸ್ವಾಮೀಜಿ ನುಡಿದರು.ಅಶೋಕೆಯ ಗುರುದೃಷ್ಟಿಯಲ್ಲಿ ಅನಾವರಣ ಚಾತುರ್ಮಾಸ್ಯ ಕೈಗೊಂಡಿರುವ ಸ್ವಾಮೀಜಿಯವರು, ಆಯಾ ದೇಶ, ಆಯಾ ಕಾಲಕ್ಕೆ ತಕ್ಕಂತೆ ಜೀವನವನ್ನು ಬದಲಾಯಿಸಿಕೊಳ್ಳಬೇಕು. ಊಟ, ನಿದ್ದೆ, ಎಚ್ಚರ ಹೀಗೆ ಎಲ್ಲಕ್ಕೂ ಒಂದು ನಿರ್ದಿಷ್ಟ ಕಾಲವಿದೆ. ಯುಕ್ತಾಹಾರ ವಿಹಾರ, ಸ್ವಪ್ನ ಎಲ್ಲವೂ ಅಗತ್ಯ ಎಂದು ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಬಣ್ಣಿಸಿದ್ದಾನೆ ಎಂದರು.ಭಾರತೀಯರು ಕಾಲವನ್ನು ನೋಡಿದ ರೀತಿ ಅತ್ಯದ್ಭುತ. ಪ್ರತಿಯೊಂದು ಘಟನೆಗಳಿಗೆ ಕಾಲ ಕನ್ನಡಿ ಹಿಡಿಯುತ್ತದೆ. ಭಾರತೀಯ ಪರಿಭಾಷೆಯಲ್ಲಿ ಫಲ ನೀಡುವಂಥದ್ದು ಗ್ರಹ. ವಿಜ್ಞಾನದ ಪರಿಭಾಷೆಗೂ ನಮ್ಮ ಭಾರತೀಯ ಪರಿಭಾಷೆಗೂ ವ್ಯತ್ಯಾಸವಿದೆ ಎಂದರು.ಸೂರ್ಯಚಂದ್ರರು ದೊಡ್ಡದಾಗಿ ಗೋಚರಿಸಿದರೆ, ಉಳಿದ ಐದು ಗ್ರಹಗಳಿಗೆ ತಾರಾಗ್ರಹಗಳೆನ್ನುತ್ತೇವೆ. ರಾಹುಕೇತುಗಳು ಛಾಯಾಗ್ರಹಗಳು. ಶುಕ್ರ ಹೆಚ್ಚು ತೇಜೋಮಯವಾಗಿ ಗೋಚರಿಸುತ್ತಾನೆ. ಗ್ರಹಗಳು ನಮ್ಮ ಬದುಕಿನ ಮೇಲೆ ದೊಡ್ಡ ಪ್ರಭಾವವನ್ನು ಬೀರುತ್ತದೆ. ಆದರೆ ಒಂದೊಂದು ಕಡೆಗೆ ಇದ್ದಾಗ ಒಂದೊಂದು ಸಂದೇಶವನ್ನು ನೀಡುತ್ತವೆ. ಅಂತರಿಕ್ಷದ ಬೇರೆ ಬೇರೆ ಭಾಗಗಳನ್ನು ರಾಶಿ ಎನ್ನುತ್ತೇವೆ ಎಂದರು.ವೃತ್ತಾಕಾರದ ಆಕಾಶವನ್ನು ಹನ್ನೆರಡು ಭಾಗಗಳಾಗಿ ವಿಂಗಡಿಸಲಾಗುತ್ತದೆ. ಇದೇ ರಾಶಿ. ನಕ್ಷತ್ರಗಳ ಗುಂಪನ್ನೇ ನಾವು ರಾಶಿ ಎಂದು ಕರೆಯಬಹುದು. ನಮ್ಮ ಪೂರ್ವಜರು ಇದನ್ನು ಸ್ಥಿರ ಎಂದು ಪರಿಗಣಿಸಿದ್ದಾರೆ ಎಂದು ವಿವರಿಸಿದರು. ಅಶ್ವಿನಿ, ಭರಣಿ ಮತ್ತು ಭಾಗಶಃ ಕೃತಿಕಾ ನಕ್ಷತ್ರವನ್ನು ಮೇಷ ಎಂದು ಕರೆದರು. ಇದಾವುದೂ ಒಂದು ನಕ್ಷತ್ರವಲ್ಲ. ನಕ್ಷತ್ರಪುಂಜ. ಹೀಗೆ ಎರಡೂವರೆ ನಕ್ಷತ್ರಪುಂಜಗಳ ಗುಂಪೇ ರಾಶಿ ಎಂದು ಬಣ್ಣಿಸಿದರು.ಪ್ರತಿವರ್ಷ ಸಮಾಜದ ಎಲ್ಲರೂ ಸೇರಿ ರಾಮದೇವರ ನೈವೇದ್ಯಕ್ಕೆ ಭತ್ತ ಬೆಳೆಯುವ ಆನೆಕೊಳಂಜಿ ಭತ್ತದ ಭಕ್ತಿಯ ಬಗೆಗಿನ ಅನಾವರಣವನ್ನು ನಿವೃತ್ತ ಕೃಷಿ ಅಧಿಕಾರಿ ಎಸ್.ವಿ. ಹೆಗಡೆ ಭದ್ರನ್ ನೆರವೇರಿಸಿದರು. ಚಾತುರ್ಮಾಸ್ಯ ಸೇವಾ ಸಮಿತಿ ಅಧ್ಯಕ್ಷ ಮಂಜುನಾಥ ಸುವರ್ಣಗದ್ದೆ, ಕಾರ್ಯದರ್ಶಿ ಶ್ರೀಕಾಂತ ಹೆಗಡೆ, ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ಕಾರ್ಯದರ್ಶಿ ಜಿ.ಕೆ. ಮಧು, ವ್ಯವಸ್ಥಾಪಕ ಪ್ರಮೋದ್ ಮುಡಾರೆ, ಶಾಸ್ತ್ರಿಗಳಾದ ಸುಬ್ರಾಯ ಅಗ್ನಿಹೋತ್ರಿ, ಶ್ರೀಶ ಶಾಸ್ತ್ರಿ, ವಿವಿವಿ ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ. ಹೆಗಡೆ, ಹೊನ್ನಾವರ ಮಂಡಲ ಅಧ್ಯಕ್ಷ ಆರ್.ಜಿ. ಹೆಗಡೆ ಹೊಸಾಕುಳಿ, ಕುಮಟಾ ಮಂಡಲದ ಅಧ್ಯಕ್ಷ ಸುಬ್ರಾಯ ಭಟ್ ಮುರೂರು, ಜಿ.ವಿ. ಹೆಗಡೆ, ಮೋಹನ ಭಟ್ ಹರಿಹರ ಮತ್ತಿತರರು ಉಪಸ್ಥಿತರಿದ್ದರು. ರವೀಂದ್ರ ಭಟ್ ಸೂರಿ ನಿರೂಪಿಸಿದರು.
ಕುಮಟಾ ಮಂಡಲದ ವೈದಿಕರಿಂದ ಸೇವಾರೂಪದಲ್ಲಿ ಎರಡು ದಿನಗಳಿಂದ ನಡೆದ ದುರ್ಗಾ ಅನುಷ್ಠಾನದ ಒಂದು ಲಕ್ಷ ಜಪ ಮತ್ತು ನವಗ್ರಹರ್ಪೂಕ ದುರ್ಗಾಹವನದ ಪೂರ್ಣಾಹುತಿ ಭಾನುವಾರ ನಡೆಯಿತು. ೨೦೦ಕ್ಕೂ ಹೆಚ್ಚು ವೈದಿಕರು ಮತ್ತು ಪಾಠಕರು ಭಾಗವಹಿಸಿದ್ದರು. ಇದಕ್ಕೂ ಮೊದಲು ಅಡಕೆ ಬೆಳೆಯಲ್ಲಿ ಸಮಗ್ರ ಕೃಷಿಯ ಆಯಾಮಗಳು ಎಂಬ ವಿಷಯ ಕುರಿತ ವಿಚಾರಸಂಕಿರಣ ನಡೆಯಿತು. ಅಡಕೆ ಬೆಳೆ ಕುರಿತ ಮಾಹಿತಿಪತ್ರ ಬಿಡುಗಡೆ ಮಾಡಲಾಯಿತು.ಡಾ. ವಿನಾಯಕ ಹೆಗಡೆ, ಡಾ. ಭವಿಷ್ಯ, ಡಾ. ನಾಗರಾಜಪ್ಪ ಅಡಿವೆಪ್ಪನವರ, ಡಾ. ಕೆ. ಬಾಲಚಂದ್ರ ಹೆಬ್ಬಾರ ಮತ್ತಿತರರು ಭಾಗವಹಿಸಿದ್ದರು.