ಪಾಂಡವಪುರ:
ಆರೋಗ್ಯಯುತ ಗುಣಮಟ್ಟದ ಜೀವನ ಶೈಲಿ, ಸಕಾರಾತ್ಮಕ ಚಿಂತನೆ ಹಾಗೂ ಮುನ್ನೆಚ್ಚರಿಕೆ ಕ್ರಮಗಳನ್ನುವಹಿಸಿದರೆ ಮಾರಕ ಕ್ಯಾನ್ಸರ್ ಕಾಯಿಲೆ ತಡೆಗಟ್ಟಬಹುದು ಎಂದು ಅಂತಾರಾಷ್ಟ್ರೀಯ ಖ್ಯಾತ ವಿಜ್ಞಾನಿ ಡಾ.ಪ್ರಸನ್ನ ಸಂತೇಕಡೂರು ಹೇಳಿದರು.ತಾಲೂಕಿನ ಸಣದಕೊಪ್ಪಲು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕ್ಯಾನ್ಸರ್ ಅರಿವು ಕಾರ್ಯಕ್ರಮದಲ್ಲಿ ಕ್ಯಾನ್ಸರ್ ಕಾಯಿಲೆಯನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ಪಡೆದರೆ ಸಂಪೂರ್ಣವಾಗಿ ಗುಣಪಡಿಸಬಹುದು ಎಂದು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದರು.
ತಂಬಾಕು, ಧೂಮಪಾನ, ಮದ್ಯಪಾನ ಹಾಗೂ ಇಂದಿನ ಬದಲಾದ ಪಾಶ್ಚಾತ್ಯ ಜೀವನ ಶೈಲಿಯ ಅನುಕರಣೆ ಮತ್ತು ದೋಷಪೂರಿತ ಆಹಾರ ಪದ್ಧತಿಯಿಂದ ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗುತ್ತಿವೆ. ಎಲ್ಲರೂ ಆರೋಗ್ಯಕರ ಜೀವನ ಶೈಲಿ ರೂಡಿಸಿಕೊಳ್ಳಬೇಕು ಮತ್ತು ಕಾಯಿಲೆಗಳ ಲಕ್ಷಣಗಳು ಕಂಡುಬಂದ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು ಎಂದರು.ಜನರು ಮೂಢನಂಬಿಕೆಗಳಿಗೆ ಕಿವಿಗೊಡದೆ ಆಧುನಿಕ ವೈದ್ಯಕೀಯ ಚಿಕಿತ್ಸೆಗಳ ಸೌಲಭ್ಯವನ್ನು ಬಳಸಿಕೊಳ್ಳಬೇಕು, ಸ್ತನ ಕ್ಯಾನ್ಸರ್, ಗರ್ಭಕಂಠದ ಕ್ಯಾನ್ಸರ್, ಲಿವರ್ ಕ್ಯಾನ್ಸರ್ ನ ಲಕ್ಷಣಗಳು ಮತ್ತು ಅವುಗಳನ್ನು ತಡೆಗಟ್ಟುವ ಕ್ರಮಗಳ ಬಗ್ಗೆ ವಿವರವಾದ ಮಾಹಿತಿಗಳ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಶಾಲೆ ಮುಖ್ಯ ಶಿಕ್ಷಕರಾದ ಎಂ.ಎಸ್.ಜಯಚಂದ್ರನ್, ಡಿ.ಎಂ.ಮಹದೇವಪ್ಪ., ಸಹ ಶಿಕ್ಷಕರು, ಗ್ರಾಮದ ಮುಖಂಡರು ಹಾಜರಿದ್ದರು.
ತ್ಯಾಜ್ಯ ವಿಂಗಡಣೆ ಕುರಿತು ಶಾಲಾ ಮಕ್ಕಳಿಗೆ ಅರಿವುಪಾಂಡವಪುರ:ಪುರಸಭೆಯಿಂದ ಪಟ್ಟಣದ ನಿರ್ಮಲ ಕಾರ್ಮೆಂಟ್ ಶಾಲೆಯಲ್ಲಿ ಮಳೆ ನೀರು ಸಂಗ್ರಹಿಸೋಣ ಭವಿಷ್ಯವನ್ನು ಸುರಕ್ಷಿತ ಗೊಳಿಸೋಣ ಮತ್ತು ಘನ ತ್ಯಾಜ್ಯ ವಿಲೇವಾರಿ ನಿಯಮಗಳು, ನಾಲ್ಕು ವಿಧದ ತ್ಯಾಜ್ಯ ವಿಂಗಡಣೆ ಮಾಡಿ ವಾಹನಕ್ಕೆ ನೀಡುವ ಶೀರ್ಷಿಕೆ ಕುರಿತು ಮಕ್ಕಳಿಗೆ ಪುರಸಭೆ ಕಿರಿಯ ಅಭಿಯಂತರೆ ಯಶಸ್ವಿನಿ ಮತ್ತು ಆರೋಗ್ಯ ನಿರೀಕ್ಷಕ ಮಂಜುನಾಥ್ ರವರು ಅರಿವು ಮೂಡಿಸಿದರು.
ನೀರು ಜೀವನದ ಸಂಪನ್ಮೂಲ. ಅದರ ಸಂರಕ್ಷಣೆ ಇಂದಿಗೆ ಅಗತ್ಯ. ಹೀಗಾಗಿ ಮಳೆಗಾಲದಲ್ಲಿ ಬಿದ್ದ ನೀರನ್ನು ಸಂಗ್ರಹಿಸಿ ಭವಿಷ್ಯದ ನೀರಿನ ಅಭಾವವನ್ನು ತಡೆಯಬಹುದು ಎಂದು ಕಿರಿಯ ಎಂಜಿನಿಯರ್ ಯಶಸ್ವಿನಿ ತಿಳಿಸಿದರು.ಆರೋಗ್ಯ ನಿರೀಕ್ಷಕರಾದ ಮಂಜುನಾಥ್ ಮಾತನಾಡಿ, ಸಾರ್ವಜನಿಕರು ಮನೆ ಹಸಿ ಮತ್ತು ಒಣ ಕಸವನ್ನು ವಿಂಗಡಿಸಿ ಡಬ್ಬಿಗಳಲ್ಲಿ ಹಾಕಿ ಪುರಸಭೆ ಗಾಡಿಗಳಿಗೆ ನೀಡುವ ಮೂಲಕ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದರು.ಈ ವೇಳೆ ನಿರ್ಮಲ ಶಾಲೆ ಶಿಕ್ಷಕರಾದ ಕನಿಕಾ ಮೇರಿ, ರೀಟಾ ಜೋಯ್, ಶಾಲೆ ಸಹ ಶಿಕ್ಷಕರು ಮತ್ತು ಪುರಸಭೆ ಸಿಬ್ಬಂದಿ ಶಿವರಾಜ್, ಜೋಯ್, ಹೆಲೆನ್, ಕೌಶಲ್ಯ, ಕಾವ್ಯ, ಸ್ನೇಹ ಸೇರಿದಂತೆ ಹಲವರು ಉಪಸ್ಥಿತಿ ಇದ್ದರು.