ಸಾರಾಂಶ
ಮಹಿಳಾ ರೈತರಿಗೆ ಮಣ್ಣು ಆರೋಗ್ಯ ಮತ್ತು ಫಲವತ್ತತೆಯ ಕುರಿತು ಅರಿವು ತರಬೇತಿ ಕಾರ್ಯಾಗಾರ ನಡೆಯಿತು. ವಿಷಯ ತಜ್ಞೆ ಮಡಿಕೇರಿಯ ಡಾ. ಲತಾ ಮಾಹಿತಿ ನೀಡಿದರು.
ಕನ್ನಡಪ್ರಭ ವಾರ್ತೆ ಶನಿವಾರಸಂತೆ
ಕೊಡಗು ಜಿಲ್ಲಾ ಪಂಚಾಯಿತಿ ಹಾಗೂ ಕೃಷಿ ಇಲಾಖೆ ಸೋಮವಾರಪೇಟೆ ಇವರ ಸಂಯುಕ್ತ ಆಶ್ರಯದಲ್ಲಿ ಸಮೀಪದ ಕೊಡ್ಲಿಪೇಟೆ ಈಶಾನ್ಯ ಕಾಫಿ ವರ್ಕರ್ಸ್‌ನಲ್ಲಿ ಮಹಿಳಾ ರೈತರಿಗೆ ಮಣ್ಣು ಆರೋಗ್ಯ ಮತ್ತು ಫಲವತ್ತತೆಯ ಕುರಿತು ಅರಿವು ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಯಿತು.ತರಬೇತಿ ಕಾರ್ಯಾಗಾರದಲ್ಲಿ ವಿಷಯ ತಜ್ಞೆ ಮಡಿಕೇರಿಯ ಡಾ.ಲತಾ ಮಾಹಿತಿ ನೀಡಿ, ರೈತರು ತಮ್ಮ ಜಮೀನಿನ ಮಣ್ಣಿನ ಆರೋಗ್ಯ ತಪಾಸಣೆ ಮಾಡುತ್ತಿರಬೇಕು. ಇದರಿಂದ ಮಣ್ಣಿನಲ್ಲಿರುವ ಪೋಷಕಾಂಶಗಳ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಮಣ್ಣಿನಲ್ಲಿ ಫಲವತ್ತತೆಯಿಂದ ರೈತರು ಬೆಳೆಯುವ ಬೆಳೆಗಳಲ್ಲಿ ಉತ್ತಮ ಇಳುವರಿ ಪಡೆಯಬಹುದು. ಈ ನಿಟ್ಟಿನಲ್ಲಿ ರೈತರು ಮಣ್ಣಿನ ಆರೋಗ್ಯ ಪರೀಕ್ಷೆ, ಬೆಳೆಗಳ ನಿರ್ವಹಣೆ, ಕೀಟ ಬಾಧೆ ನಿಯಂತ್ರಣ ಈ ಕ್ರಮಗಳನ್ನು ಅನುಸರಿಸುವ ಮೂಲಕ ಮಹಿಳಾ ರೈತರು ಸಹ ಉತ್ತಮ ಪ್ರಗತಿ ಕಾಣುವಂತೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಈಶಾನ್ಯ ಕಾಫಿ ವರ್ಕರ್ಸ್ ಮಾಲೀಕ ಹೆಚ್.ಜೆ.ಪ್ರವೀಣ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿಗಳಾದ ಕೆ.ವಿ.ಬಾಂಧವಿ, ವೇದಪ್ರಿಯಾ ಹಾಜರಿದ್ದರು. ಕಾರ್ಯಾಗಾರದಲ್ಲಿ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಮಹಿಳಾ ರೈತರು ಮತ್ತು ಸ್ವಸಹಾಯ ಸಂಘಗಳ ಮಹಿಳಾ ಸದಸ್ಯರು ಪಾಲ್ಗೊಂಡಿದ್ದರು.