ಹಾನಗಲ್ಲ ಬಸ್ ನಿಲ್ದಾಣದ ಅವ್ಯವಸ್ಥೆಯ ಕುರಿತು ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು ಪರಿಶೀಲನೆ ನಡೆಸಿ ಅಧಿಕಾರಿಗಳನ್ನು ಎಚ್ಚರಿಸಿದ ಬೆನ್ನಲ್ಲೇ, ಇಲ್ಲಿನ ರೋಶನಿ ಸಮಾಜ ಸೇವಾ ಸಂಸ್ಥೆಯ ಜನವೇದಿಕೆ, ಪ್ರಗತಿಪರ ಸಂಘಟನೆ ಪದಾಧಿಕಾರಿಗಳು, ಸದಸ್ಯರು ಬಸ್ ಡಿಪೋ ಎದುರಿನ ಉದ್ದನೆಯ ಕಾಲುದಾರಿಯನ್ನು ಸ್ವಚ್ಛಗೊಳಿಸುವ ಮೂಲಕ ಸ್ವಚ್ಛತಾ ಜಾಗೃತಿ ಮೂಡಿಸಿದರು.

ಹಾನಗಲ್ಲ: ಹಾನಗಲ್ಲ ಬಸ್ ನಿಲ್ದಾಣದ ಅವ್ಯವಸ್ಥೆಯ ಕುರಿತು ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು ಪರಿಶೀಲನೆ ನಡೆಸಿ ಅಧಿಕಾರಿಗಳನ್ನು ಎಚ್ಚರಿಸಿದ ಬೆನ್ನಲ್ಲೇ, ಇಲ್ಲಿನ ರೋಶನಿ ಸಮಾಜ ಸೇವಾ ಸಂಸ್ಥೆಯ ಜನವೇದಿಕೆ, ಪ್ರಗತಿಪರ ಸಂಘಟನೆ ಪದಾಧಿಕಾರಿಗಳು, ಸದಸ್ಯರು ಬಸ್ ಡಿಪೋ ಎದುರಿನ ಉದ್ದನೆಯ ಕಾಲುದಾರಿಯನ್ನು ಸ್ವಚ್ಛಗೊಳಿಸುವ ಮೂಲಕ ಸ್ವಚ್ಛತಾ ಜಾಗೃತಿ ಮೂಡಿಸಿದರು.

ಹಲವು ದಿನಗಳಿಂದ ಹುಬ್ಬಳ್ಳಿ ಶಿವಮೊಗ್ಗ ರಸ್ತೆಗೆ ಹೊಂದಿಕೊಂಡ ಹಾನಗಲ್ಲ ಬಸ್ ಡಿಪೋ ಆವರಣಗೋಡೆಗೆ ಹೊಂದಿಕೊಂಡ ಎದುರಿನ ಫುಟ್‌ಪಾತ್ ಮುಳ್ಳು ಗಿಡ ಕಂಟಿಗಳಿಂದ ತುಂಬಿ ಓಡಾಟಕ್ಕೆ ಅಸಾಧ್ಯವಾದ ಸ್ಥಿತಿಯಲ್ಲಿತ್ತು. ಹತ್ತು ವರ್ಷಗಳ ಹಿಂದೆ ಇದೇ ಕೆಎಸ್‌ಆರ್‌ಟಿಸಿ ಸಿಬ್ಬಂದಿಯೇ ಅತ್ಯಂತ ಕಾಳಜಿಯಿಂದ ಈ ಆವರಣ ಗೋಡೆಗೆ ಮಹಾತ್ಮರು ಹಾಗೂ ಜನ ಜಾಗೃತಿಯ ಚಿತ್ರಗಳನ್ನು ದಾನಿಗಳು ಹಾಗೂ ಸಿಬ್ಬಂದಿಯ ಸಹಕಾರದಿಂದ ಇಡೀ ಗೋಡೆಗೆ ಚಿತ್ರಿಸಿದ್ದರು. ಆದರೆ ಈ ಕಸ ಗಿಡ ಕಂಟಿಯ ಕಾರಣದಿಂದ ಈ ಗೋಡೆಯೇ ಕಾಣದಂತಾಗಿತ್ತು. ಈ ಫುಟ್‌ಪಾತ್ ಜನರು ಓಡಾಡಲು ಇದೆ ಎಂಬುದೇ ಮರೆತು ಹೋಗಿತ್ತು.

ಇದನ್ನು ಗಮನಿಸುತ್ತಲೇ ಇದ್ದ ರೋಶನಿ ಸಮಾಜ ಸೇವಾ ಸಂಸ್ಥೆ ಶನಿವಾರ ಬೆಳ್ಳಂಬೆಳಗ್ಗೆ ಜನವೇದಿಕೆ ಸದಸ್ಯರು, ಪ್ರಗತಿಪರ ಸಂಘಟನೆಗಳ ಸದಸ್ಯರು, ಪುರಸಭೆ ಕಾರ್ಮಿಕರು, ರೋಶನಿ ಸಿಬ್ಬಂದಿ ಜೊತೆಗೂಡಿ, ಅನಿವಾರ್ಯಕ್ಕೆ ಜೆಸಿಬಿ ಬಳಸಿ ಸ್ವಚ್ಛಗೊಳಿಸುವ ಕಾರ್ಯ ಮಾಡಿದರು. ರೋಶನಿಯಿಂದಲೇ ಜೆಸಿಬಿ ಹಾಗೂ ಟ್ರ್ಯಾಕ್ಟರ್ ಬಾಡಿಗೆಯ ಖರ್ಚನ್ನು ಭರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ರೋಶನಿ ಸಮಾಜ ಸೇವಾ ಸಂಸ್ಥೆಯ ನಿರ್ದೇಶಕಿ ಅನಿತಾ ಡಿಸೋಜಾ, ನಗರ ಪ್ರವೇಶದ ಸ್ಥಳದಲ್ಲಿರುವ ಬಸ್‌ಡಿಪೋದ ಎದುರಿಗಿನ ಕಸ ಕಂಟಿ ಅರ್ಧ ರಸ್ತೆಯನ್ನೇ ಆವರಿಸಿತ್ತು. ಇದನ್ನು ಸ್ವಚ್ಛಗೊಳಿಸಲು ಲೋಕೋಪಯೋಗಿ ಇಲಾಖೆ, ಪುರಸಭೆಗೆ ಮನವಿ ಮಾಡಿದ್ದೆವು. ಆದರೆ ಅದು ಫಲ ನೀಡದ ಕಾರಣ ನಮ್ಮ ಸಂಘಟನೆಗಳೆಲ್ಲ ಸೇರಿ ಸ್ವಚ್ಛತೆಗೆ ಮುಂದಾದೆವು. ಇದರಲ್ಲಿ ಸ್ವಚ್ಛತೆಗೆ ಜಾಗೃತಿ ಮೂಡಿಸುವುದೇ ಮಖ್ಯವಾದ ಕಾರ್ಯ. ಆದರೆ ಸರ್ಕಾರಿ ಇಲಾಖೆಗಳ ನಿರ್ಲಕ್ಷ್ಯ ಮಾತ್ರ ಸರಿಯಲ್ಲ. ಬೆಳ್ಳಂಬೆಳಗ್ಗೆ ವಾಕಿಂಗ್‌ಗಾಗಿ ಓಡಾಡುವವರು ರಸ್ತೆಯಲ್ಲಿಯೇ ಓಡಾಡುವಂತಾಗಿದೆ. ಇದು ಸಂಬಂಧಿಸಿದ ಇಲಾಖೆಗಳಿಗೆ ಗಮನ ಸೆಳೆದರೂ ಕೆಲಸ ಮಾಡುವ ಔದಾರ್ಯವಿಲ್ಲ ಎಂದರು.

ಪುರಸಭೆ ಮುಖ್ಯಾಧಿಕಾರಿ ವಾಯ್.ಕೆ. ಜಗದೀಶ ಸ್ಥಳಕ್ಕೆ ಭೇಟಿ ನೀಡಿದರು. ಪುರಸಭೆ ಮಾಜಿ ಅಧ್ಯಕ್ಷೆ ಮಮತಾ ಆರೆಗೊಪ್ಪ, ಜನವೇದಿಕೆಯ ಕಲೀಂ ಮಾಸನಕಟ್ಟಿ, ಪಾಲಕ್ಷಯ್ಯ ಹಿರೇಮಠ, ಮಾರ್ತಾಂಡಪ್ಪ ತಳವಾರ, ಮಂಜುನಾಥ ಕುದರಿ, ಮುನೀರಹಮ್ಮದ್ ಗೌಂಡಿ, ಬಸವರಾಜ ಕೋತಂಬರಿ, ಪ್ರಗತಿಪರ ಸಂಘಟನೆಯ ಬಿ.ಆರ್. ಶೆಟ್ಟರ, ಅಹಮ್ಮದ್ ಶಿರಬಡಗಿ, ಎನ್.ಎಂ. ಪೂಜಾರ, ಅಶೋಕ ದಾಶರ, ರೋಶನಿ ಸಿಬ್ಬಂದಿ, ಪುರಸಭೆಯ ೧೨ ಸ್ವಚ್ಛತಾ ಸಿಬ್ಬಂದಿ ಈ ಸಂದರ್ಭದಲ್ಲಿದ್ದು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡರು.