ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಪದ್ಧತಿ ಸಂಪೂರ್ಣವಾಗಿ ತಡೆಗಟ್ಟುವ ನಿಟ್ಟಿನಲ್ಲಿ ಕಾರ್ಮಿಕ ಇಲಾಖೆ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಸಹಯೋಗದಲ್ಲಿ ಪಟ್ಟಣದಲ್ಲಿ ಜಾಗೃತಿ ಜಾಥಾ ಹಾಗೂ ಅರಿವು ಕಾರ್ಯಕ್ರಮ ನಡೆಸಲಾಯಿತು.
ಬ್ಯಾಡಗಿ: ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಪದ್ಧತಿ ಸಂಪೂರ್ಣವಾಗಿ ತಡೆಗಟ್ಟುವ ನಿಟ್ಟಿನಲ್ಲಿ ಕಾರ್ಮಿಕ ಇಲಾಖೆ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಸಹಯೋಗದಲ್ಲಿ ಪಟ್ಟಣದಲ್ಲಿ ಜಾಗೃತಿ ಜಾಥಾ ಹಾಗೂ ಅರಿವು ಕಾರ್ಯಕ್ರಮ ನಡೆಸಲಾಯಿತು.
ಅಂತಾರಾಷ್ಟ್ರೀಯ ಖ್ಯಾತಿಯ ಮೆಣಸಿನಕಾಯಿ ಮಾರುಕಟ್ಟೆಯ ವಿವಿಧ ವಾಣಿಜ್ಯ ಮಳಿಗೆಗಳು ಹಾಗೂ ಬೀದಿಗಳಲ್ಲಿ ಜಾಗೃತಿ ಜಾಥಾ ನಡೆಸಲಾಯಿತು. ಬಾಲಕಾರ್ಮಿಕ ಪದ್ಧತಿ ದುಷ್ಪರಿಣಾಮಗಳು ಹಾಗೂ ಕಿಶೋರ ಕಾರ್ಮಿಕರ ನಿಯೋಜನೆಗೆ ಸಂಬಂಧಿಸಿದ ಕಾನೂನು ನಿಯಮಗಳ ಕುರಿತು ಸಾರ್ವಜನಿಕರು, ವ್ಯಾಪಾರಸ್ಥರು ಹಾಗೂ ಕಾರ್ಮಿಕರಿಗೆ ಅರಿವು ಮೂಡಿಸಲಾಯಿತು.ಈ ವೇಳೆ ಮಾತನಾಡಿದ ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿ ತರುನ್ನುಮ ಬೆಂಗಾಲಿ, ಮಕ್ಕಳು ಶಾಲೆಗೆ ತೆರಳಿ ಶಿಕ್ಷಣ ಪಡೆಯುವ ವಾತಾವರಣ ನಿರ್ಮಿಸುವುದು ಸಮಾಜದ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಬಾಲಕಾರ್ಮಿಕ ಪದ್ಧತಿ ಕಂಡುಬಂದಲ್ಲಿ ಸಂಬಂಧಿಸಿದ ಇಲಾಖೆಗಳ ಗಮನಕ್ಕೆ ತಂದು, ಮಕ್ಕಳ ರಕ್ಷಣೆ ಹಾಗೂ ಪುನರ್ವಸತಿಗೆ ಸಹಕರಿಸುವಂತೆ ಮನವಿ ಮಾಡಿದರು.
ಎಪಿಎಂಸಿ ಕಾರ್ಯದರ್ಶಿ ಡಿ.ಬಿ. ಆದರ್ಶ ಮಾತನಾಡಿ, ಬಡತನ, ಕುಟುಂಬದ ಆರ್ಥಿಕ ಸಂಕಷ್ಟ ಸೇರಿದಂತೆ ವಿವಿಧ ಕಾರಣಗಳಿಂದ ಮಕ್ಕಳು ದುಡಿಮೆಗೆ ಸೇರುವ ಸಾಧ್ಯತೆಗಳಿದ್ದು, ಇಂತಹ ಮಕ್ಕಳನ್ನು ಗುರ್ತಿಸಿ ಅವರಿಗೆ ಶಿಕ್ಷಣ ಹಾಗೂ ಅಗತ್ಯ ನೆರವು ದೊರಕಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಗಳು ಕಾರ್ಯನಿರ್ವಹಿಸುತ್ತಿವೆ. ಮಾರುಕಟ್ಟೆಯಲ್ಲಿನ ಯಾವುದೇ ಅಂಗಡಿ, ಹೋಟೆಲ್, ಗ್ಯಾರೇಜ್, ಕಾರ್ಖಾನೆ ಅಥವಾ ಇತರೆ ವಾಣಿಜ್ಯ ಸ್ಥಳಗಳಲ್ಲಿ ಬಾಲ ಕಾರ್ಮಿಕರನ್ನು ಕೆಲಸಕ್ಕೆ ಬಳಸಿಕೊಳ್ಳುವುದು ಕಂಡು ಬಂದಲ್ಲಿ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡುವಂತೆ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು.ಈ ವೇಳೆ ವರ್ತಕರಾದ ಎನ್.ಎಂ. ಕೆಂಬಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಿಬ್ಬಂದಿ ಎಸ್.ಎಸ್. ಅಸುಂಡಿ, ನಾಗರಾಜ ಪೋಟೇರ, ಎಂ. ಜಾವೇದಲಿ, ಜಯಶೀಲಾ ಕಿರಗೇರಿ, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ ಹಾವೇರಿಯ ಯೋಜನಾ ನಿರ್ದೇಶಕ, ರಾಘವೇಂದ್ರ ಶಿರೂರ, ಪೊಲೀಸ್ ಠಾಣೆಯ ನಾಗರಾಜ ಕಂಬಳಿ, ಗುರುರಾಜ ಕಂಬಳಿ, ಜಿಲ್ಲಾ ಮಕ್ಕಳ ಸಹಾಯವಾಣಿಯ ಸಂಯೋಜಕರು, ಆಪ್ತ ಸಮಾಲೋಚಕರು ಮತ್ತು ಸಿಬ್ಬಂದಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.