ಶೃಂಗೇರಿಮಕ್ಕಳಿಗೆ, ಮಹಿಳೆಯರಿಗೆ ತಮ್ಮದೇ ಆದ ಹಕ್ಕುಗಳಿವೆ. ಆದರೆ ಇತ್ತಿಚಿನ ದಿನಗಳಲ್ಲಿ ಮಕ್ಕಳು, ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ, ಶೋಷಣೆ ದೌರ್ಜನ್ಯಗಳು ಹೆಚ್ಚುತ್ತಿವೆ. ಅವರ ಹಕ್ಕುಗಳ ಬಗ್ಗೆ ಅರಿವು, ಜಾಗೃತಿ ಮೂಡಿಸುವ ಕೆಲಸ ನಡೆಯಬೇಕಿದೆ ಎಂದು ಶೃಂಗೇರಿ ಸಿವಿಲ್ ಹಾಗೂ ಜೆಎಂಎಫ್ ಸಿ ನ್ಯಾಯಾಲಯದ ನ್ಯಾಯಾಧೀಶ ಆರ್.ಎಸ್.ಜೀತು ಹೇಳಿದರು.

- ಕಿಗ್ಗಾದಲ್ಲಿ ನಡೆದ ಮಕ್ಕಳ ವಿಶೇಷ ಗ್ರಾಮಸಭೆಯಲ್ಲಿ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಸಲಹೆ

ಕನ್ನಡಪ್ರಭ ವಾರ್ತೆ, ಶೃಂಗೇರಿ

ಮಕ್ಕಳಿಗೆ, ಮಹಿಳೆಯರಿಗೆ ತಮ್ಮದೇ ಆದ ಹಕ್ಕುಗಳಿವೆ. ಆದರೆ ಇತ್ತಿಚಿನ ದಿನಗಳಲ್ಲಿ ಮಕ್ಕಳು, ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ, ಶೋಷಣೆ ದೌರ್ಜನ್ಯಗಳು ಹೆಚ್ಚುತ್ತಿವೆ. ಅವರ ಹಕ್ಕುಗಳ ಬಗ್ಗೆ ಅರಿವು, ಜಾಗೃತಿ ಮೂಡಿಸುವ ಕೆಲಸ ನಡೆಯಬೇಕಿದೆ ಎಂದು ಶೃಂಗೇರಿ ಸಿವಿಲ್ ಹಾಗೂ ಜೆಎಂಎಫ್ ಸಿ ನ್ಯಾಯಾಲಯದ ನ್ಯಾಯಾಧೀಶ ಆರ್.ಎಸ್.ಜೀತು ಹೇಳಿದರು.

ತಾಲೂಕಿನ ಮರ್ಕಲ್ ಪಂಚಾಯಿತಿ ಕಿಗ್ಗಾದಲ್ಲಿ ಆಯೋಜಿಸಲಾಗಿದ್ದ ಮಕ್ಕಳ ವಿಶೇಷ ಗ್ರಾಮಸಭೆಯಲ್ಲಿ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪೋಕ್ಸೋ ಕಾಯ್ದೆ ಬಗ್ಗೆ ಅರಿವು ಮೂಡಿಸಬೇಕು. ಮಹಿಳೆಯರಿಗೆ ಮಹಿಳಾ ದೌರ್ಜನ್ಯ ತಡೆ ಕಾಯ್ದೆ, ಪೋಶ್ ಕಾಯ್ದೆ ಯಂತಹ ಹಲವು ಕಾಯ್ದೆಗಳಿವೆ. ಆದರೆ ಕಾನೂನು ಕಾಯ್ದೆಗಳಿದ್ದರೂ ಶೋಷಣೆ, ದೌರ್ಜನ್ಯ ಹೆಚ್ಚಲು ಈ ಕಾಯ್ದೆಗಳ ಬಗ್ಗೆ ಅವರಲ್ಲಿ ಅರಿವು ಇಲ್ಲದಿರುವುದು. ಕಾನೂನು ಕಾಯ್ದೆಗಳಿಂದ ಅವರಿಗೆ ರಕ್ಷಣೆ ಸಿಗುವಂತಾಗಬೇಕು ಎಂದರು.

ಬಾಲಕಾರ್ಮಿಕ ಪದ್ಧತಿ ಒಂದು ಸಾಮಾಜಿಕ ಪಿಡುಗಾಗಿದೆ. ಇದನ್ನು ಸಂಪೂರ್ಣವಾಗಿ ಹೋಗಲಾಡಿಸಬೇಕಿದೆ. ಬಾಲಕಾರ್ಮಿಕ ಪದ್ಧತಿ ಕಂಡುಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಮಕ್ಕಳಿಗೆ ಅವರದೇ ಆದ ಹಕ್ಕುಗಳಿದ್ದು ನಮ್ಮ ಸಂವಿಧಾನದಲ್ಲಿ ತಿಳಿಸಿದಂತೆ ಪ್ರತಿಯೊಂದು ಮಗುವಿಗೂ 14 ವರ್ಷದವರೆಗೆ ಕಡ್ಡಾಯ ಶಿಕ್ಷಣ ನೀಡ ಬೇಕು. ಯಾರೂ ಶಿಕ್ಷಣದಿಂದ ವಂಚಿತರಾಗಬಾರದು. ಶಿಕ್ಷಣ ಪ್ರತಿಯೊಬ್ಬರ ಹಕ್ಕು. ಶಾಲೆಗಳ ವ್ಯವಸ್ಥ ಬಗ್ಗೆ ಗಮನ ಹರಿಸಬೇಕು. ಮೂಲಸೌಕರ್ಯ ಕಲ್ಪಿಸಬೇಕು. ಮಕ್ಕಳಲ್ಲಿ ಉತ್ತಮ ಸಂಸ್ಕಾರ ಬೆಳೆಸುವಲ್ಲಿ ಶಿಕ್ಷಕರು, ಪೋಷಕರ ಪಾತ್ರ ಮಹತ್ತರವಾಗಿದೆ. ಶಿಕ್ಷಕರು ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡುತ್ತಾರೆ. ಆದರೆ ಪೋಷಕರು ಮನೆಯಲ್ಲಿ ಮಕ್ಕಳ ಭೌದ್ದಿಕ ಮಟ್ಟ, ಕಲಿಕೆ ಜವಾಬ್ದಾರಿ ವಹಿಸಬೇಕಿದೆ. ಮಕ್ಕಳಲ್ಲಿ ನೈತಿಕ ಮೌಲ್ಯಗಳು, ಸ್ಪರ್ಧಾತ್ಮಕ ಮನೋಭಾವ ಬೆಳೆಸಬೇಕು.

ದೇಶದಲ್ಲಿ ಮಕ್ಕಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವಲ್ಲಿ ಶಿಕ್ಷಕರು, ಪೋಷಕರ ಜವಾಬ್ದಾರಿ ಪ್ರಮುಖ. ನಮ್ಮ ಸಂವಿಧಾನದಲ್ಲಿ ಪ್ರತಿ ನಾಗರಿಕನಿಗೂ ಎಲ್ಲಾ ರೀತಿ ಸೌಲಭ್ಯಗಳನ್ನು ನೀಡಲಾಗಿದೆ. ಅದು ಜನರಿಗೆ ತಲುಪಿಸುವ ಕೆಲಸ ನಡೆಯಬೇಕಿದೆ. ಯಾರೋಬ್ಬರೂ ಹಕ್ಕು, ಸೌಲಭ್ಯಗಳಿಂದ ವಂಚಿತರಾಗಬಾರದು. ಸರ್ಕಾರದ ಯೋಜನೆಗಳು ಸಮಾಜದ ಪ್ರತಿಯೊಬ್ಬ ವ್ಯಕ್ತಿಗೂ ತಲುಪಬೇಕು ಎಂದು ಹೇಳಿದರು.

ಪರಿಸರ ಸಂರಕ್ಷಣೆ ಬಗ್ಗೆ ನಾವು ಹೆಚ್ಚಿನ ಕಾಳಜಿ ವಹಿಸಬೇಕಿದೆ. ಇತ್ತಿಚಿನ ದಿನಗಳಲ್ಲಿ ಪ್ಲಾಸ್ಟಿಕ್ ಬಳಕೆ ಹೆಚ್ಚುತ್ತಿದ್ದು ಪರಿಸರದ ಮೇಲೆ ಮಾರಕ ಪರಿಣಾಮ ಬೀರುತ್ತಿದೆ. ಮೆಡಿಕಲ್ ಬಳಕೆಯಲ್ಲಿ ಪ್ಲಾಸ್ಟಿಕ್ ಬಳಕೆ ಅನಿವಾರ್ಯವಿದ್ದರೂ, ಇನ್ನುಳಿದಂತೆ ನಾವು ಸಾಧ್ಯವಾದಷ್ಟು ಪ್ಲಾಸ್ಟಿಕ್ ಬಳಕೆ ನಿಯಂತ್ರಿಸಬೇಕಿದೆ. ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಶ್ರಮಿಸಬೇಕು. ಎಲ್ಲೆಂದರಲ್ಲಿ ಕಸ,ತ್ಯಾಜ್ಯ ಎಸೆಯಬಾರದು. ನಮ್ಮ ಸುತ್ತಮುತ್ತಲಿನ ಪರಿಸರ ನೈರ್ಮಲ್ಯ ಕಾಪಾಡಬೇಕು ಎಂದರು.

ಕು.ಆದ್ಯಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮರ್ಕಲ್ ಗ್ರಾಪಂ ಅಧ್ಯಕ್ಷ ಮಹೇಶ್,ಸದಸ್ಯರಾದ ಸುರೇಖ ಕೃಷ್ಣಮೂರ್ತಿ, ಪ್ರಶಾಂತ್,ಶಿಶು ಅಭಿವೃದ್ಧಿ,ಪೊಲೀಸ್ ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

30 ಶ್ರೀ ಚಿತ್ರ 2-

ಶೃಂಗೇರಿ ತಾಲೂಕಿನ ಕಿಗ್ಗಾದಲ್ಲಿ ನಡೆದ ಮಕ್ಕಳ ವಿಶೇಷ ಗ್ರಾಮಸಭೆಯಲ್ಲಿ ಆಯೋಜಿಸಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ನ್ಯಾ.ಆರ್.ಎಸ್.ಜೀತು ಉದ್ಘಾಟಿಸಿದರು.