ಪ್ಲಾಸ್ಟಿಕ್‌ ಬಳಸದಂತೆ ಬೀದಿ ನಾಟಕದ ಮೂಲಕ ಜಾಗೃತಿ

| Published : Aug 01 2025, 11:45 PM IST

ಸಾರಾಂಶ

ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸ್ವಚ್ಛ ಭಾರತ ಮಿಷನ್‌ನಡಿ ಪ್ಲಾಸ್ಟಿಕ್ ಮುಕ್ತ ನಗರ ಹಾಗೂ ನನ್ನ ಲೈಫ್ ನನ್ನ ಸ್ವಚ್ಛ ನಗರ ಶೀರ್ಷಿಕೆಯಡಿ ಸ್ನೇಹ ಜ್ಯೋತಿ ಡೆವಲಪ್‌ಮೆಂಟ್ ಸೊಸೈಟಿಯ ಕಲಾ ತಂಡದಿಂದ ಬೀದಿ ನಾಟಕದ ಮೂಲಕ ಅರಿವು ಮೂಡಿಸಲಾಯಿತು.

ಕನ್ನಡಪ್ರಭ ವಾರ್ತೆ ತಿಪಟೂರು

ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸ್ವಚ್ಛ ಭಾರತ ಮಿಷನ್‌ನಡಿ ಪ್ಲಾಸ್ಟಿಕ್ ಮುಕ್ತ ನಗರ ಹಾಗೂ ನನ್ನ ಲೈಫ್ ನನ್ನ ಸ್ವಚ್ಛ ನಗರ ಶೀರ್ಷಿಕೆಯಡಿ ಸ್ನೇಹ ಜ್ಯೋತಿ ಡೆವಲಪ್‌ಮೆಂಟ್ ಸೊಸೈಟಿಯ ಕಲಾ ತಂಡದಿಂದ ಬೀದಿ ನಾಟಕದ ಮೂಲಕ ಅರಿವು ಮೂಡಿಸಲಾಯಿತು.

ಈ ವೇಳೆ ಪ್ರಾಂಶುಪಾಲ ಎಂ.ಡಿ. ಶಿವಕುಮಾರ್ ಮಾತನಾಡಿ, ಪ್ಲಾಸ್ಟಿಕ್ ಹಾಗೂ ಕಸ ಮುಕ್ತ ಪರಿಸರ ನಿರ್ಮಿಸಲು ಸರ್ಕಾರ ಹಲವಾರು ಯೋಜನೆ, ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು ನಾಗರಿಕರು ಆದಷ್ಟು ಜಾಗೃತರಾಗಿ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಿ ಬಟ್ಟೆ ಬ್ಯಾಗ್‌ಗಳನ್ನು ಬಳಸಬೇಕು. ಪ್ಲಾಸ್ಟಿಕ್ ಬಳಕೆಯಿಂದ ಪರಿಸರಕ್ಕೂ ಧಕ್ಕೆ, ಆರೋಗ್ಯಕ್ಕೂ ಹಾನಿಯಾಗಲಿದ್ದು ಸಾರ್ವಜನಿಕರು ಪಾಲಿಥೀನ್ ಚೀಲಗಳ ಬದಲಾಗಿ ಬಟ್ಟೆ ಚೀಲ ಉಪಯೋಗಿಸಿ ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿ ಮಾಡುವಬತ್ತ ನಾವೆಲ್ಲರೂ ಸಂಕಲ್ಪ ಮಾಡಬೇಕೆಂದರು. ನಗರಸಭೆ ಆರೋಗ್ಯ ನಿರೀಕ್ಷಕ ಜಯರಾಮ್ ಮಾತನಾಡಿ ದನಕರುಗಳು ಪ್ಲಾಸ್ಟಿಕ್ ಕವರ್ ತಿಂದು ಸಾಯುತ್ತಿರುವುದನ್ನು ನಾವು ಕಣ್ಣಾರೆ ನೋಡುತ್ತಿದ್ದೇವೆ. ಜನರು ಅಂಗಡಿ, ಮಾರುಕಟ್ಟೆಗೆ ತೆರಳುವಾಗ ಮನೆಯಿಂದಲೇ ಬಟ್ಟೆಚೀಲ ತೆಗೆದುಕೊಂಡು ಹೋಗುವುದನ್ನು ಅಭ್ಯಾಸ ಮಾಡಿಕೊಳ್ಳಬೇಕೆಂದರು.ಕಾರ್ಯಕ್ರಮದಲ್ಲಿ ಸ್ನೇಹ ಜ್ಯೋತಿ ಕಲಾತಂಡದ ಸಂತೋಷ್, ಉಪನ್ಯಾಸಕರಾದ ಪ್ರಕಾಶ್, ಭೈರೇಶ್, ಷಡಕ್ಷರಿ, ನಾಗರತ್ನ ಮತ್ತಿತರರಿದ್ದರು.