ಸಾರಾಂಶ
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ವಿದ್ಯಾರ್ಥಿಗಳು ಶೈಕ್ಷಣಿಕ ಹಂತದಿಂದಲೇ ಸಾಮಾಜಿಕ ಜವಾಬ್ದಾರಿ ಅರಿತು ಮತದಾನದಲ್ಲಿ ಪಾಲ್ಗೊಳ್ಳಲು ಮತದಾರ ಪಟ್ಟಿಯಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳುವಂತೆ ತಾಲೂಕು ಪಂಚಾಯತಿ ಕಾರ್ಯ ನಿರ್ವಹಣಾಧಿಕಾರಿ, ಸ್ವೀಪ್ ಸಮಿತಿ ಅಧ್ಯಕ್ಷ ಜಿ.ಆರ್. ಹರೀಶ್ ತಿಳಿಸಿದರು.ಪಟ್ಟಣದ ಶ್ರೀ ಆದಿಚುಂಚನಗಿರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ ಯುವ ಮತದಾರರ ನೋಂದಣಿ ಮತ್ತು ಮತದಾರರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಚನ್ನರಾಯಪಟ್ಟಣ ತಾಲೂಕಿನಲ್ಲಿ ೨೦೬೪ ಜನ ಯುವ ಮತದಾರರಿದ್ದು, ಎಲ್ಲರೂ ಕಡ್ಡಾಯವಾಗಿ ಮತದಾರ ಪಟ್ಟಿಯಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳತಕ್ಕದ್ದು, ೨೦೧೮ರ ಲೋಕಸಭಾ ಚುನಾವಣೆಯಲ್ಲಿ ೯೧೨ ಮಿಲಿಯನ್ ಮತದಾರರನ್ನು ಹೊಂದಿದ್ದು, ದೇಶದಲ್ಲಿ ಶೇಕಡ ೬೫ ರಷ್ಟು ಮಾತ್ರ ಮತದಾನವಾಗಿದೆ, ಮುಂಬರುವ ೨೦೨೪ನೇ ಲೋಕಸಭಾ ಚುನಾವಣೆಯಲ್ಲಿ ಶೇ.೭೫ರಷ್ಟು ಮತದಾನವನ್ನು ಮಾಡಿಸುವ ಗುರಿಯನ್ನು ಭಾರತ ಚುನಾವಣಾ ಆಯೋಗವು ಹೊಂದಿದೆ. ಚುನಾವಣಾ ಆಯೋಗದ ಆದೇಶದಂತೆ ಕಳೆದ ಲೋಕಸಭಾ ಚುನಾವಣೆಯಲ್ಲಿ ತಾಲೂಕಿನಲ್ಲಿ ಶೇ. ೭೫ರಷ್ಟು ಮತದಾನವಾಗಿದ್ದರೂ ಸಹ ಮುಂದಿನ ಚುನಾವಣೆಯಲ್ಲಿ ೮೦ರಿಂದ ೯೦ರಷ್ಟು ಮತದಾನದ ಮಾಡುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ ಎಂದರು.
ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವವನ್ನು ಬಲಪಡಿಸಬೇಕೆಂದು ಕೋರಲಾಗಿದೆ. ವಿದ್ಯಾರ್ಥಿಗಳು ತಾವಷ್ಟೆ ಅಲ್ಲದೆ ತಮ್ಮ ಕುಟುಂಬ ಹಾಗೂ ನೆರೆಹೊರವರಿಗೂ ಸಹ ಹೆಸರು ನೋಂದಾಯಿಸಲು ತಿಳಿ ಹೇಳಿ ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಎಮ್.ಕೆ.ಮಂಜುನಾಥ್ ಮಾತನಾಡಿ, ನಮ್ಮನ್ನು ಆಳುವ, ನಮ್ಮನ್ನು ಪ್ರತಿನಿಧಿಸುವ ಸಮರ್ಥ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕಾದ ಗುರುತರ ಜವಾಬ್ದಾರಿಯನ್ನು ಜನರು ಹೊಂದಿರುತ್ತಾರೆ. ಪ್ರಜಾಪ್ರಭುತ್ವದ ಯಶಸ್ಸಿಗೆ ಮತದಾರರ ಜಾಗೃತಿ ಮತ್ತು ಸ್ಪಷ್ಟ ನಿರ್ಧಾರಗಳೊಂದಿಗೆ ಚುನಾವಣೆಯಲ್ಲಿ ಮತ ಚಲಾಯಿಸುವ ಹೊಣೆಗಾರಿಕೆ ಇರಬೇಕು, ಪ್ರತಿಯೊಬ್ಬರು ತಪ್ಪದೆ ಮತದಾನ ಕಾರ್ಯದಲ್ಲಿ ಭಾಗವಹಿಸಬೇಕು. ವಿಶೇಷವಾಗಿ ಯುವಕರು ಮತ್ತು ವಿದ್ಯಾವಂತರು ಹೆಚ್ಚು ಹೆಚ್ಚು ರಾಜಕೀಯ ಕ್ಷೇತ್ರಕ್ಕೆ ಬರಬೇಕು, ಆಗ ಮಾತ್ರ ಬದಲಾವಣೆ ತರಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ತಾಲೂಕು ಪಂಚಾಯ್ತಿ ಸಹಾಯಕ ನಿರ್ದೇಶಕ ಗಿರೀಶ್ ಮತದಾನದ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು, ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಸಿದ್ದರಾಜು ಸೇರಿದಂತೆ ಹಲವಾರು ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದರು. ತದನಂತರ ಕಾಲೇಜಿನ ಯುವ ಮತದಾರರನ್ನು ವೋಟರ್ ಹೆಲ್ಪ್‌ಲೈನ್ ಆ್ಯಪ್ ಮೂಲಕ ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಿಕೊಳ್ಳಲಾಯಿತು.