ಮಳೆ ಇಲ್ಲದೇ ಒಣಗಿದ ಅಡಕೆ ಗಿಡಗಳ ನಾಶಪಡಿಸಿರುವ ರೈತ ಲಕ್ಷ್ಮಣಪ್ಪ.

ಜಡೇಕುಂಟೆ ಮಂಜುನಾಥ್

ಕನ್ನಡಪ್ರಭ ವಾರ್ತೆ ಚಳ್ಳಕೆರೆಬಯಲು ಸೀಮೆಯ ಚಳ್ಳಕೆರೆ ತಾಲೂಕಿನ ವಿವಿಧೆಡೆ ಕಳೆದ ಐದಾರು ವರ್ಷಗಳ ಹಿಂದೆ ಅಡಕೆಯ ಬೆಳೆಗೆ ಮಾರು ಹೋಗಿ ಎಲ್ಲೆಂದರಲ್ಲಿ ಅಡಕೆ ನೆಟ್ಟು ಲಾಭದ ನಿರೀಕ್ಷೆಯಲ್ಲಿದ್ದ ರೈತಾಪಿ ವರ್ಗಕ್ಕೆ ಮಳೆಯ ಕೊರತೆ ಇದೀಗ ಬರಸಿಡಿಲು ಬಡಿದಂತಾಗಿದೆ. ನೆಟ್ಟ ಅಡಕೆ ಸಸಿಗಳು ಆಳೆತ್ತರಕ್ಕೆ ಬೆಳೆದು ಇನ್ನೆರೆಡು ವರ್ಷಕ್ಕೆ ಭರ್ತಿ ಕೈ ತುಂಬಾ ಕಾಸು ಎಣಿಸಬಹುದೆಂಬ ಮಹದಾಸೆಯಲ್ಲಿದ್ದ ರೈತರಿಗೆ ಈ ವರ್ಷದ ಮುಂಗಾರು ಮಳೆ ದೊಡ್ಡ ಆಘಾತ ತಂದಿದೆ.

ಬಯಲು ಸೀಮೆ ರೈತನಿಗೆ ಕೊಂಚ ಧೈರ್ಯ ಜಾಸ್ತಿ. ಪ್ರಮುಖ ವಾಣಿಜ್ಯ ಬೆಳೆಯಾಗಿದ್ದ ಶೇಂಗಾ ಬೆಳೆ ಕಳೆದೊಂದು ದಶಕದಿಂದ ಕೈಕೊಟ್ಟಿದೆ. ಪರ್ಯಾಯ ಬೆಳೆಯಾಗಿ ತೊಗರಿಗೆ ಮಾರುಹೋದರೂ ಅದೂ ಕೈ ಹಿಡಿಯಲಿಲ್ಲ. ನೀರಾವರಿ ಜಮೀನುಗಳಲ್ಲಿ ಅಡಕೆ ನೆಡುವ ಪ್ರಯೋಗ ಐದಾರು ವರ್ಷಗಳಿಂದ ಎಗ್ಗಿಲ್ಲದೇ ನಡೆಯುತ್ತಲೇ ಇತ್ತು. ಈಗಲೂ ಮುಂದುವರಿದಿದೆ. ಅದ್ಯಾವ ಧೈರ್ಯದ ಮೇಲೆ ಅಡಕೆಯ ಕಡೆಗೆ ಬಯಲು ಸೀಮೆ ರೈತನಿಗೆ ಮನಸ್ಸು ಹೋಯಿತೋ? ಈಗ ಅದರ ಅಡ್ಡ ಪರಿಣಾಮಗಳು ಅಲ್ಲಲ್ಲಿ ಗೋಚರಿಸುತ್ತಿವೆ.

ಕಸಬಾ ಹೋಬಳಿ ಸಾಣೀಕೆರೆ ಪಂಚಾಯಿತಿ ವ್ಯಾಪ್ತಿಯ ಕಾಪರಹಳ್ಳಿ ಗ್ರಾಮದ ಚಿತ್ತಪ್ಪ ಎಂಬ ರೈತನ ಜಮೀನಿನಲ್ಲಿ ಕಳೆದೊಂದು ತಿಂಗಳ ಹಿಂದೆ ಫಸಲಿಗೆ ಬಂದ ಅಡಕೆ ಗಿಡಗಳಿಗೆ ನೀರಿನ ಕೊರತೆ ಕಂಡ ಕಾರಣ ಆಳೆತ್ತರದ ಗಿಡಗಳು ನೆಲಕ್ಕುರುಳಿದ್ದವು. ಇದೀಗ ಮೀರಾಸಾಬಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸೂರು ಗ್ರಾಮದ ಲಕ್ಷ್ಮಣಪ್ಪ ಕಳೆದ ನಾಲ್ಕು ವರ್ಷಗಳ ಹಿಂದೆ ಮೂರು ಎಕರೆ ಪ್ರದೇಶದಲ್ಲಿ ನೆಟ್ಟಿದ್ದ ಸುಮಾರು 1400 ಅಡಕೆ ಗಿಡಗಳು ಫಲ ಕೊಡುವ ಹಂತದಲ್ಲಿದ್ದವು. ಅಲ್ಲಲ್ಲಿ ಹೊಂಬಾಳೆಯೂ ಹೊಡೆದಿದ್ದವು. ಆದರೆ, ಕಳೆದ ಎರಡು ತಿಂಗಳಿಂದ ಪಂಪ್‌ಸೆಟ್‌ಗಳಲ್ಲಿ ನೀರು ಕ್ಷೀಣಿಸಿತ್ತು. ಸಾಲ ಮಾಡಿ ಬೋರ್ ಕೊರೆಸಿದರೆ ಹನಿ ನೀರೂ ಕಾಣಿಸಿಕೊಳ್ಳಲಿಲ್ಲ. ಇರುವ ಎರಡು ಪಂಪ್ ಸೆಟ್ ಗಳಲ್ಲಿ ದಿನದಿಂದ ದಿನಕ್ಕೆ ನೀರು ಕ್ಷೀಣಿಸುತ್ತಲೇ ಇತ್ತು.

ಒಂದು ಗಂಟೆ ನೀರು ಬಿಟ್ಟರೂ ಒಂದು ಬಿಂದಿಗೆ ನೀರು ತುಂಬುತ್ತಿರಲಿಲ್ಲ. ಶುಕ್ರವಾರ ತೋಟಕ್ಕೆ ಹೋದ ರೈತ ಲಕ್ಷ್ಮಣಪ್ಪ ತಾನೇ ಕಷ್ಟ ಪಟ್ಟು ಬೆಳೆಸಿದ ಗಿಡಗಳು ಒಣಗುತ್ತಾ ಬಾಡಿ ನಿಂತಿರುವುದನ್ನು ಕಂಡು ಕಣ್ಣೀರಾಗಿದ್ದಾರೆ. ಅದೆಷ್ಟು ಕಷ್ಟಪಟ್ಟು ಬೆಳೆಸಲಾಗಿತ್ತು ಎಂದು ಮಮ್ಮುಲ ಮರುಗಿದ್ದಾರೆ. ತಕ್ಷಣವೇ ಜೆಸಿಬಿ ತರಿಸಿ ನಾಲ್ಕು ಗಂಟೆ ಕಾಲವಧಿಯಲ್ಲಿ ಇಡೀ ತೋಟದಲ್ಲಿನ ಅಡಕೆ ಗಿಡಗಳನ್ನು ತೆಗೆಸಿ ಹಾಕಿದ್ದಾರೆ.

ಈ ಕುರಿತು ಕನ್ನಡಪ್ರಭದೊಂದಿಗೆ ಮಾತನಾಡಿದ ರೈತ ಲಕ್ಷ್ಮಣಪ್ಪ ಈ ಭಾಗದಲ್ಲಿ ಮಳೆ ಕಡಿಮೆ ಬೀಳುವುದರಿಂದ ಅಡಕೆ ಬೆಳೆ ಬೆಳೆಯುವುದು ಕಷ್, ಮುಂಗಾರು ಮಳೆ ಕೈ ಕೊಟ್ಟ ಪರಿಣಾಮ ಈ ಸಾರಿ ಪಂಪ್ ಸೆಟ್‌ಗಳಲ್ಲಿ ನೀರು ಬತ್ತಿದೆ. ನಮ್ಮಂತಹ ರೈತಾಪಿಗಳು ಸಾಲ ಮಾಡಿ ಏನೋ ಒಂದಿಷ್ಟು ಲಾಭ ಬರುವಂತಹ ಬೆಳೆ ಬೆಳೆಯಲು ಹೋದರೆ ಮಳೆರಾಯನ ಕೃಪೆ ಇಲ್ಲದೇ ಇಟ್ಟ ಸಸಿ ಎದೆಯೆತ್ತರ ಬೆಳೆದ ಮೇಲೆ ನಾವೇ ನಾಶಪಡಿಸುವ ಈ ಪರಿಸ್ಥಿತಿ ಬಂದರೆ ಬದುಕುವುದಾದರೂ ಹೇಗೆ ಎಂದು ಕಣ್ಣೀರಾಗುತ್ತಾರೆ.

ಇದಕ್ಕೂ ಮುನ್ನ ದಾಳಿಂಬೆ ಹಾಕಿದ್ದೆ. ಒಳ್ಳೆ ಫಸಲು ಬಂದಿತ್ತು. ಎರಡು ದಿನ ಸಂಬಂಧಿಕರ ಮದುವೆಗೆ ಹೋಗಿದ್ದೆ. ಬರುವಷ್ಟರಲ್ಲಿ ಅಷ್ಟೂ ಹಣ್ಣುಗಳ ಕಳ್ಳತನವಾಗಿತ್ತು. ಅದರಿಂದಲೂ ನಷ್ಟ ಅನುಭವಿಸಿದೆ. ಅಡಕೆ ಹಾಕಿದರೆ ಸುಲಭ ಎಂದುಕೊಂಡು ಇದನ್ನೂ ಹಾಕಿದೆ. ಆದರೆ, ಮಳೆ ಕೊರತೆಯಿಂದಾಗಿ ಇದೂ ಕೈಗೂಡಲಿಲ್ಲ ಎಂದು ಮೌನಕ್ಕೆ ಜಾರುತ್ತಾರೆ.

ನಾಲ್ಕು ಜನ ಹೆಣ್ಣು ಮಕ್ಕಳ ತಂದೆ, ಸಾಲ ಮಾಡಿ ಹಾಕಿದ ಅಡಕೆ ಸಸಿ ತೋಟವಾಗುವುದಕ್ಕೆ ಪಟ್ಟ ಕಷ್ಟ, ನೀರು ಕಡಿಮೆಯಾಯಿತೆಂದು ಧೈರ್ಯ ಮಾಡಿ ಬೋರ್ ವೆಲ್ ಕೊರೆಸಿದರೆ ಅಲ್ಲೂ ಅದೃಷ್ಟ ಕೈ ಕೊಟ್ಟು ಸಾಲ ಮಾತ್ರ ಜಾಸ್ತಿಯಾಯಿತು ಎನ್ನುವ ಲಕ್ಷ್ಮಣಪ್ಪ ದಾರಿತೊರದೇ ಚಿಂತೆಗೀಡಾಗಿದ್ದಾರೆ.