ಲಕ್ಷ್ಮಿದೇವಿ ನಗರದ ರಸ್ತೆ ಪಕ್ಕದ ಮರಗಳಿಗೆ ಕೊಡಲಿ ಪೆಟ್ಟು

| Published : Jul 18 2025, 12:45 AM IST

ಲಕ್ಷ್ಮಿದೇವಿ ನಗರದ ರಸ್ತೆ ಪಕ್ಕದ ಮರಗಳಿಗೆ ಕೊಡಲಿ ಪೆಟ್ಟು
Share this Article
  • FB
  • TW
  • Linkdin
  • Email

ಸಾರಾಂಶ

ಕುದೂರು: ಗ್ರಾಮದಲ್ಲಿ ಕೆರೆ ಒಡೆದರೂ ಕೇಳುವವರಿಲ್ಲ, ಮರ ಕಡಿದರೂ ಏನೂ ಮಾಡುವುದಿಲ್ಲ ಎಂಬ ಭಂಡತನ ಹೆಚ್ಚಾಗುತ್ತಿದೆ ಎನ್ನುವುದಕ್ಕೆ ಸಾಕ್ಷಿಯಾಗಿ ರಾಮಲೀಲಾ ಮೈದಾನಕ್ಕೆ ಹೊಂದಿಕೊಂಡಿರುವ ಲಕ್ಷ್ಮಿದೇವಿ ನಗರದ ರಸ್ತೆ ಪಕ್ಕದ ಮರಗಳನ್ನು ಕಡಿದುರುಳಿಸಿದ್ದಾರೆ.

ಕುದೂರು: ಗ್ರಾಮದಲ್ಲಿ ಕೆರೆ ಒಡೆದರೂ ಕೇಳುವವರಿಲ್ಲ, ಮರ ಕಡಿದರೂ ಏನೂ ಮಾಡುವುದಿಲ್ಲ ಎಂಬ ಭಂಡತನ ಹೆಚ್ಚಾಗುತ್ತಿದೆ ಎನ್ನುವುದಕ್ಕೆ ಸಾಕ್ಷಿಯಾಗಿ ರಾಮಲೀಲಾ ಮೈದಾನಕ್ಕೆ ಹೊಂದಿಕೊಂಡಿರುವ ಲಕ್ಷ್ಮಿದೇವಿ ನಗರದ ರಸ್ತೆ ಪಕ್ಕದ ಮರಗಳನ್ನು ಕಡಿದುರುಳಿಸಿದ್ದಾರೆ.

ಬೇಲಿಯೇ ಎದ್ದು ಹೊಲವನ್ನು ಮೇಯ್ದಂತೆ ಗ್ರಾಮವನ್ನು ಕಾಪಾಡಬೇಕಾದ ಪಂಚಾಯ್ತಿ ಸದಸ್ಯರು ಯಾವುದೇ ಪ್ರತಿರೋಧ ತೋರದಿರುವುದು ಮತ್ತು ಮರ ಕಡಿಯಲು ಕೆಲ ಸದಸ್ಯರು ಬೆಂಬಲ ಇರುವುದರಿಂದ ಹಾಡಹಗಲೇ ಮರಗಳನ್ನು ಕಡಿದು ಧರೆಗೆ ಉರುಳಿಸುತ್ತಿದ್ದಾರೆ.

ರಾಮಲೀಲಾ ಮೈದಾನವನ್ನು ಹೈಟೆಕ್ ಮೈದಾನವನ್ನಾಗಿ ರೂಪಿಸಲು ಬೃಹತ್ ಕಾಮಗಾರಿ ನಡೆಯುತ್ತಿದೆ. ಅದಕ್ಕಾಗಿ ಮೈದಾನದೊಳಗಿದ್ದ ಪಶ್ಚಿಮ, ಉತ್ತರ ಮತ್ತು ದಕ್ಷಿಣ ದಿಕ್ಕಿನ ಮರಗಳನ್ನು ಈಗಾಗಲೇ ಕಡಿದು ಹಾಕಲಾಗಿದೆ. ಆದರೆ ಈಗ ಕಡಿದಿರುವ ಮರಗಳು ಮೈದಾನದ ಹೊರಗಿದ್ದವು. ಅವುಗಳನ್ನು ಉಳಿಸಿಕೊಂಡೇ ಮೈದಾನವನ್ನು ರೂಪಿಸಬಹುದಾಗಿತ್ತು. ಆದರೆ, ಪರಿಸರ ಪ್ರೇಮಿಗಳ ಮಾತನ್ನು ಕೇಳದೆ ಏಕಾಏಕಿ ನಿರ್ಧಾರವನ್ನು ತೆಗೆದುಕೊಂಡು ಮರಗಳನ್ನು ಕಡಿಯಲಾಗಿದೆ. ಪಂಚಾಯ್ತಿಯವರನ್ನು ಕೇಳಿದರೆ ನಮಗೆ ಗೊತ್ತಿಲ್ಲ ಎನ್ನುತ್ತಾರೆ.

ಆದರೆ, ಮರಗಳನ್ನು ಕಡಿಯಬೇಡಿ ಎಂದು ಅರಣ್ಯ ಇಲಾಖೆಗೆ ದೂರು ನೀಡಿದ್ದ ಸಾಮಾಜಿಕ ಕಾರ‍್ಯಕರ್ತ ನರಸಿಂಹಮೂರ್ತಿ ಅವರಿಗೆ ಗ್ರಾಪಂ ಹಿರಿಯ ಸದಸ್ಯರೊಬ್ಬರು ಮೊಬೈಲ್ ಕರೆ ಮಾಡಿ ದೂರನ್ನು ವಾಪಸ್ ತೆಗೆದುಕೊ ಎಂದು ಧಮಕಿ ಹಾಕಿದ್ದಾರೆ. ಅಭಿವೃದ್ಧಿ ಹೆಸರಿನಲ್ಲಿ ಗ್ರಾಮದ ಜನರನ್ನು ದಿಕ್ಕು ತಪ್ಪಿಸುವ ಕೆಲಸವನ್ನು ಗ್ರಾಮಪಂಚಾಯ್ತಿಯ ಕೆಲವು ಸದಸ್ಯರು ಮಾಡುತ್ತಿರುವುದರಿಂದ ಕಣ್ಣ ಮುಂದೆಯೇ ಪರಿಸರ ನಾಶವಾಗುತ್ತಿದ್ದರೂ ಜನರು ಪ್ರಶ್ನೆ ಮಾಡದಂತಾಗಿದೆ.

ಭೈರವನದುರ್ಗದ ತಪ್ಪಲಿನಲ್ಲಿದ್ದ ಕೆರೆಯನ್ನು ಬಸ್ ಡಿಪೋ ಹೆಸರಿನಲ್ಲಿ ಒಡೆದು ಅದರಲ್ಲಿದ್ದ ನೀರನ್ನು ಹೊರಗೆ ಬಿಡಲಾಯಿತು. ಆಗಲೂ ಜನ ಪ್ರಶ್ನೆ ಮಾಡಲು ಮುಂದೆ ಬಂದಾಗಲೂ ಗ್ರಾಪಂ ಇದೇ ಹಿರಿಯ ಸದಸ್ಯರು ಇಲ್ಲೊಂದು ಡಿಪೋ ಆಗುತ್ತದೆ. ಆಲ್ಲೊಂದು ಕೆರೆಯಿದೆ ಎನ್ನುವುದಕ್ಕೆ ಯಾವುದೇ ದಾಖಲೆ ಇಲ್ಲ, ಹಾಗಾಗಿ ಅದನ್ನು ಒಡೆದು ಹಾಕಲಾಗಿದೆ ಎಂದು ಹೇಳಿ ಜನರ ಪ್ರತಿಭಟನೆಗೆ ತಣ್ಣೀರು ಹಾಕಿದರು.

ಮೈದಾನದ ಪಕ್ಕದ ರಸ್ತೆಯಲಿದ್ದ ಮರಗಳನ್ನು ಕಡಿದಾದ ನಂತರ ಅರಣ್ಯ ಇಲಾಖೆ ಅಧಿಕಾರಿಗಳು ಬಂದು ಮರಗಳನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡರು. ಮರಕಡಿದವರನ್ನು ಹುಡುಕಿ ಅವರ ಮೇಲೆ ಕೇಸು ದಾಖಲು ಮಾಡಲಾಗುತ್ತದೆ ಎಂದು ಹೇಳಿ ಹೋದರು.

ಕೋಟ್ ..............

ಮೈದಾನದಲ್ಲಿರುವ ಮರಗಳು ಕಡಿಯಬಾರದು ಎಂದು ಈ ಮೊದಲೇ ತಾಲೂಕು ಆಡಳಿತ, ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಹಾಗೂ ಅರಣ್ಯ ಸಚಿವರಿಗೆ ಮನವಿ ಸಲ್ಲಿಸಲಾಗಿತ್ತು. ಆದರೂ ನಮ್ಮ ಮನವಿ ಪರಿಗಣಿಸದೆ ಜಾಣ ಕುರುಡುತನ ಪ್ರದರ್ಶಿಸಿ ಮರಗಳನ್ನು ಕಡಿಯಲು ಪರೋಕ್ಷವಾಗಿ ಅನುಮತಿ ನೀಡಿದ್ದಾರೆ ಎನಿಸುತ್ತಿದೆ. ಇದರ ನಡುವೆ ನಮ್ಮ ಹೋರಾಟಕ್ಕೆ ಪೋನಿನಲ್ಲಿ ಧಮಕಿ ಹಾಕಿ ಹೆದರಿಸುತ್ತಿದ್ದಾರೆ. ಆದರೆ ಇದ್ಯಾವುದಕ್ಕು ಹೆದರದೆ ಗ್ರಾಮದ ಪರಿಸರ ಸಂರಕ್ಷಣೆಗೆ ಹೋರಾಡುತ್ತಲೇ ಇರುತ್ತೇವೆ. ಮರ ಕಡಿಯಲು ಕಾರಣರಾದವರಿಗೂ ಕಾನೂನಿನ ಶಿಕ್ಷೆ ಆಗಬೇಕು.

-ನರಸಿಂಹಮೂರ್ತಿ, ಸಾಮಾಜಿಕ ಹೋರಾಟಗಾರರು

17ಕೆಆರ್ ಎಂಎನ್ 7,8.ಜೆಪಿಜಿ

7.ಕುದೂರು ಗ್ರಾಮದ ರಾಮಲೀಲಾ ಮೈದಾನದ ಪಕ್ಕದ ರಸ್ತೆಯಲ್ಲಿ ಬೆಳೆದಿದ್ದ ಸಾಲು ಮರಗಳನ್ನು ಮೈದಾನದ ಅಭಿವೃದ್ದಿ ಎಂಬ ಹೆಸರಿನಲ್ಲಿ ಅರಣ್ಯ ಇಲಾಖೆಯ ಅನುಮತಿಯನ್ನು ಪಡೆಯದೇ ಕಡಿದುರುಳಿಸಿರುವುದು.

8.ನರಸಿಂಹಮೂರ್ತಿ ಸಾಮಾಜಿಕ ಕಾರ್ಯಕರ್ತ.