ಸಾರಾಂಶ
ಶಿವಮೊಗ್ಗ : ನೈರುತ್ಯ ಪದವೀಧರರ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ತಮ್ಮ ಹೆಸರು ಘೋಷಣೆಯಾಗಿದ್ದು, ವಿಧಾನ ಪರಿಷತ್ ಚುನಾವಣೆಗೆ ಕೇವಲ 12 ದಿನಗಳು ಮಾತ್ರ ಬಾಕಿ ಉಳಿದಿವೆ. ಇದು ನಿಜಕ್ಕೂ ಒತ್ತಡದ ಸಮಯವಾಗಿದೆ. ಈಗಾಗಲೇ ನಾನು ಪ್ರಚಾರ ಕಾರ್ಯ ಕೈಗೊಂಡಿದ್ದು, ಮತದಾರರನ್ನು ತಲುಪುವ ಪ್ರಯತ್ನ ಮಾಡಿತ್ತಿದ್ದತ್ತಿದ್ದೇನೆ ಎಂದು ಆಯನೂರು ಮಂಜುನಾಥ್ ಹೇಳಿದರು.
ಸದ್ಯ ಒಳ್ಳೆಯ ವಾತಾವರಣವಿದೆ. ಹೋರಾಟದ ಆಧಾರದ ಮೇಲೆ ಮತ ಕೇಳುತ್ತೇನೆಯೇ ಹೊರತೂ ಯಾವುದೇ ಜಾತಿ, ಹಣದ ಆಧಾರದ ಮೇಲೆ ಮತ ಕೇಳುವುದಿಲ್ಲ. ಕಳೆದ 42 ವರ್ಷಗಳಿಂದ ಕಾರ್ಮಿಕರ, ನೌಕರರ ಪರವಾಗಿ ಹೋರಾಟ ಮಾಡುತ್ತಾ ಬಂದಿದ್ದೇನೆ. ಅದು ನನ್ನ ಕೈ ಹಿಡಿಯುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಳೆದ 5 ವರ್ಷದಲ್ಲಿ ಸರ್ಕಾರಿ ನೌಕರರ ಪರವಾಗಿ ಕೆಲಸ ಮಾಡಿದ್ದೇನೆ. ಯಾವ ಸರ್ಕಾರವಿದ್ದರೂ ಕೂಡ ಧ್ವನಿ ಎತ್ತಿದ್ದೇನೆ. ಪ್ರಮುಖವಾಗಿ ಸರ್ಕಾರಿ ನೌಕರರಿಗೆ ಹಳೆ ಪಿಂಚಣಿ ವ್ಯವಸ್ಥೆಯನ್ನೇ ಜಾರಿಗೊಳಿಸುವುದು ನನ್ನ ಮೊದಲ ಆದ್ಯತೆಯಾಗಿದೆ ಎಂದರು.
ರಾಜ್ಯದಲ್ಲಿ 2006ರ ನಂತರ ಸುಮಾರು 2.5 ಲಕ್ಷ ಸರ್ಕಾರಿ ನೌಕರರು ಹೊಸ ಪಿಂಚಣಿ ವ್ಯವಸ್ಥೆಯಲ್ಲಿದ್ದಾರೆ. ಅವರು ಪಿಂಚಣಿ ವ್ಯವಸ್ಥೆಯಿಂದ ವಂಚಿತರಾಗಿದ್ದಾರೆ. ಬಿಜೆಪಿ ಆಡಳಿತದ ಸರ್ಕಾರದಲ್ಲಿ ಸದಸ್ಯನಾಗಿದ್ದರೂ ಕೂಡ ಸರ್ಕಾರದ ವಿರುದ್ಧವೇ ಧ್ವನಿ ಎತ್ತಿದ್ದೇನೆ. ನನ್ನ ಹೋರಾಟಕ್ಕೆ ಖಂಡಿತ ಜಯ ಸಿಗುತ್ತದೆ. ಈ ಬಾರಿ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದೆ. ಹಾಗಾಗಿ ಹಳೆ ಪಿಂಚಣಿ ವ್ಯವಸ್ಥೆ ಜಾರಿಯಾಗುವ ಖಚಿತ ವಿಶ್ವಾಸವಿದೆ. ಹೀಗಾಗಿ ಸರ್ಕಾರಿ ನೌಕರರ ಬೆಂಬಲ ಸಂಪೂರ್ಣವಾಗಿ ನನಗೆ ಸಿಗಲಿದೆ ಎಂದು ಹೇಳಿದರು.
ಇದಲ್ಲದೇ ಪೊಲೀಸರ ಸಮಸ್ಯೆಗಳು ಸಾಕಷ್ಟಿವೆ. ಔರಾದ್ಕರ್ ವರದಿ ಜಾರಿಯಾಗಬೇಕಾಗಿದೆ. ಹಾಗೆಯೇ ಅರಣ್ಯ ಮತ್ತು ಆರೋಗ್ಯ ನೌಕರರ ಸಮಸ್ಯೆಗಳಿವೆ. ಅತಿಥಿ ಉಪನ್ಯಾಸಕರ ಕಷ್ಟಗಳು ಇವೆ. ಅನುದಾನಿತ ಶಾಲಾ, ಕಾಲೇಜುಗಳ ನೌಕರರ ಸಮಸ್ಯೆಗಳು ಸಾಕಷ್ಟಿವೆ. 7ನೇ ವೇತನ ಆಯೋಗ ವರದಿ ಜಾರಿಯಾಗಬೇಕಾಗಿದೆ. ಇವುಗಳ ಬಗ್ಗೆ ನಾನು ಖಂಡಿತ ಧ್ವನಿ ಎತ್ತುತ್ತೇನೆ ಎಂದರು.
ಅನೇಕ ಪದವೀಧರರು ಉನ್ನತ ಶಿಕ್ಷಣಕ್ಕಾಗಿ ಬ್ಯಾಂಕ್ ಮತ್ತು ಇತರೆ ಸಂಸ್ಥೆಗಳಿಂದ ಶೈಕ್ಷಣಿಕ ಸಾಲ ಪಡೆದುಕೊಂಡಿದ್ದಾರೆ. ಅದನ್ನು ತೀರಿಸಲಾಗದೇ ಇತ್ತ ಉದ್ಯೋಗವೂ ಇಲ್ಲದೇ ಸಂಕಷ್ಟದಲ್ಲಿದ್ದಾರೆ. ಈ ಶೈಕ್ಷಣಿಕ ಸಾಲವನ್ನು ಮನ್ನಾ ಮಾಡುವ ಬಗ್ಗೆ ವಿಧಾನ ಪರಿಷತ್‌ನಲ್ಲಿ ಧ್ವನಿ ಎತ್ತುತ್ತೇನೆ ಎಂದರು.
ದಿನೇಶ್ ತಪ್ಪು ಮಾಡುವುದಿಲ್ಲ:
ಎಸ್.ಪಿ.ದಿನೇಶ್ ಅವರು ಬಂಡಾಯ ಸ್ಪರ್ಧೆ ಕುರಿತು ಮಾತನಾಡಿದ ಆಯನೂರು ಮಂಜುನಾಥ್ ನಾನು ಮತ್ತು ಪಕ್ಷದ ಮುಖಂಡರು ಅವರ ಜೊತೆ ಮಾತನಾಡಿದ್ದೇವೆ. ಇಷ್ಟಾಗಿಯೂ ಅವರು ನಾಮಪತ್ರ ಸಲ್ಲಿಸಿದರೆ ವಾಪಸ್ ತೆಗೆದುಕೊಳ್ಳುವ ನಂಬಿಕೆ ಇದೆ. ಅವರು ಪಕ್ಷ ನಿಷ್ಠರು. ಪಕ್ಷದ ಮಾತನ್ನು ಪಾಲಿಸಿಯೇ ಪಾಲಿಸುತ್ತಾರೆ. ಅವರು ಆ ಕಳಂಕ ಅಂಟಿಸಿ ಕೊಳ್ಳುವುದಿಲ್ಲ ಎಂಬ ನಂಬಿಕೆ ನನ್ನದು ಎಂದು ಹೇಳಿದರು.
ಗೋಷ್ಠಿಯಲ್ಲಿ ಕೆಪಿಸಿಸಿ ಸದಸ್ಯ ವೈ.ಎಚ್. ನಾಗರಾಜ್, ಪ್ರಮುಖರಾದ ಶಿ.ಜು. ಪಾಶ, ಸೈಯದ್ ವಾಹಿದ್ ಅಡ್ಡು, ಧೀರರಾಜ್ ಹೊನ್ನವಿಲೆ, ಕೃಷ್ಣ, ಹಿರಣ್ಣಯ್ಯ, ಲಕ್ಷ್ಮಣಪ್ಪ ಉಪಸ್ಥಿತರಿದ್ದರು.