ಅಯೋಧ್ಯೆ ಬಾಲರಾಮನ ಮಂಡಲೋತ್ಸವ ಸಂಪನ್ನ

| Published : Mar 11 2024, 01:20 AM IST

ಸಾರಾಂಶ

ಮಂಡಲೋತ್ಸವದ ಸಂದರ್ಭದಲ್ಲಿ, ರಾಮಮಂದಿರ ನಿರ್ಮಾಣದ ನಂತರ ರಾಮರಾಜ್ಯ ಸ್ಥಾಪನೆಯ ಆಶಯದೊಂದಿಗೆ ಶ್ರೀಗಳು ಸಮಾಜದಲ್ಲಿ ವಿವಿಧ ರೀತಿಯಲ್ಲಿ ದೀನದಲಿತರ, ಗೋವುಗಳ ಸೇವೆ ಮಾಡಿದ ಸಾಧಕರು ಮತ್ತು ಗಣ್ಯರು, ಜನಪ್ರನಿಧಿಗಳ ಪರವಾಗಿ ನಿತ್ಯವೂ ರಾಮನಿಗೆ ರಜತ ಕಲಶ ಅಭಿಷೇಕ ನಡೆಸಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿ

ಅಯೋಧ್ಯೆಯಲ್ಲಿ ಜ.22ರಂದು ರಾಮಮಂದಿರ ಲೋಕಾರ್ಪಣೆ, ಬಾಲರಾಮನ ಪ್ರತಿಷ್ಠೆಯ ನಂತರ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ನೇತೃತ್ವದಲ್ಲಿ ನಿರಂತರ 48 ದಿನಗಳ ಕಾಲ ನಡೆದ ಮಂಡಲ ಪೂಜೆ ಭಾನುವಾರ ಬ್ರಹ್ಮಕಲಶಾಭಿಷೇಕದೊಂದಿಗೆ ಪರಿಪೂರ್ಣಗೊಂಡಿತು.

ಈ ಮಂಡಲೋತ್ಸವದ ಸಂದರ್ಭದಲ್ಲಿ, ರಾಮಮಂದಿರ ನಿರ್ಮಾಣದ ನಂತರ ರಾಮರಾಜ್ಯ ಸ್ಥಾಪನೆಯ ಆಶಯದೊಂದಿಗೆ ಶ್ರೀಗಳು ಸಮಾಜದಲ್ಲಿ ವಿವಿಧ ರೀತಿಯಲ್ಲಿ ದೀನದಲಿತರ, ಗೋವುಗಳ ಸೇವೆ ಮಾಡಿದ ಸಾಧಕರು ಮತ್ತು ಗಣ್ಯರು, ಜನಪ್ರನಿಧಿಗಳ ಪರವಾಗಿ ನಿತ್ಯವೂ ರಾಮನಿಗೆ ರಜತ ಕಲಶ ಅಭಿಷೇಕ ನಡೆಸಿದ್ದಾರೆ. ದಕ್ಷಿಣ ಭಾರತ ಅದರಲ್ಲೂ ಕರಾವಳಿಯ ಧಾರ್ಮಿಕ ಸಂಪ್ರದಾಯದಂತೆ ಭಾನುವಾರ ಬಾಲರಾಮನಿಗೆ 1008 ಕಲಶಾಭಿಷೇಕ ಸಹಿತ ಬ್ರಹ್ಮಕಲಶೋತ್ಸವವನ್ನೂ ನಡೆಸಲಾಯಿತು. ಅದಕ್ಕಾಗಿ ಸರಯೂ, ಗಂಗಾ, ಅಲಕಾನಂದ ಸಹಿತ ಅನೇಕ ಪವಿತ್ರ ನದಿಗಳ ಜಲವನ್ನು ಬಳಸಲಾಯಿತು. ಇದಕ್ಕೆ ಮೊದಲು ನೂರಾರು ಋತ್ವಿಜರಿಂದ ತತ್ವ ಹೋಮ ಸಹಿತ ವಿವಿಧ ಹವನಾದಿಗಳನ್ನು ನಡೆಸಿದರು. ಬ್ರಹ್ಮಕಲಶೋತ್ಸವ ನಿಮಿತ್ತ ಬಾಲರಾಮನಿಗೆ ಆಕರ್ಷಕವಾಗಿ ವಿವಿಧ ಪುಷ್ಪಗಳಿಂದ ಶ್ರೀಗಳು ಅಲಂಕಾರ ಮಾಡಿದ್ದರು. ಈ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಶ್ರದ್ಧಾಭಕ್ತಿಯಿಂದ ಭಾಗಿಗಳಾಗಿದ್ದರು.