ಈಶ್ವರ್ ಮಲ್ಪೆ, ರವಿ ಕಟಪಾಡಿಗೆ ಅಯೋಧ್ಯಾ ಮಂಡಲೋತ್ಸವ ಪುರಸ್ಕಾರ

| Published : Mar 06 2024, 02:19 AM IST

ಈಶ್ವರ್ ಮಲ್ಪೆ, ರವಿ ಕಟಪಾಡಿಗೆ ಅಯೋಧ್ಯಾ ಮಂಡಲೋತ್ಸವ ಪುರಸ್ಕಾರ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀ ರಾಮದೇವರಿಗೆ ನಡೆಸಲಾದ ಕಲಶಾಭಿಷೇಕದಲ್ಲಿ ತಲಾ 1 ಕೆ.ಜಿ. ತೂಕದ ಹಾಗೂ ತಲಾ 1 ಲಕ್ಷ ರು. ಮೌಲ್ಯದ ರಜತ ಕಲಶವನ್ನು ಶ್ರೀರಾಮನ ಅನುಗ್ರಹ ಪ್ರಸಾದ ರೂಪದಲ್ಲಿ ನೀಡಿ ಅಭಿನಂದಿಸಲಾಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ರಾಮರಾಜ್ಯದ ಪರಿಕಲ್ಪನೆಯಲ್ಲಿ ದೇಶದ ಒಳಿತಿನ ಕಾಯಕಕ್ಕೆ ತಮ್ಮನ್ನು ಅರ್ಪಿಸಿಕೊಂಡ ಉಡುಪಿಯ ಮತ್ತಿಬ್ಬರು ಸಾಮಾಜಿಕ ಧುರೀಣರಿಗೆ ಮಂಗಳವಾರ ಅಯೋಧ್ಯೆಯಲ್ಲಿ ಮಂಡಲೋತ್ಸವ ಪುರಸ್ಕಾರದೊಂದಿಗೆ ರಾಮನ ಪ್ರಸಾದವಿತ್ತು ಅಭಿನಂದಿಸಲಾಗಿದೆ.

ನದಿ, ಸಮುದ್ರಗಳಲ್ಲಿ ನೀರಿನ‌ ಸೆಳೆತಕ್ಕೆ ಸಿಲುಕಿ ಪ್ರಾಣಾಪಾಯ ಸ್ಥಿತಿಯಲ್ಲಿದ್ದ ಸುಮಾರು ಒಂದು ಸಾವಿರದಕ್ಕೂ ಹೆಚ್ಚು ಜನರನ್ನು ಪ್ರಾಣಾಪಾಯದಿಂದ ಪಾರು ಮಾಡಿದ ಜೀವರಕ್ಷಕ ಉಡುಪಿ ಮಲ್ಪೆಯ ಈಶ್ವರ್ ಹಾಗೂ ಶ್ರೀ ಕೃಷ್ಣಾಷ್ಟಮಿ ಗಣೇಶಚತುರ್ಥಿ ಮೊದಲಾದ ಪರ್ವ ಸಂದರ್ಭಗಳಲ್ಲಿ ಆಕರ್ಷಕ ವೇಷ ತೊಟ್ಟು ಉತ್ಸವದ ವೈಭವಕ್ಕೆ ಮೆರುಗು ತುಂಬಿ ಅದರಲ್ಲಿ ಸಂಗ್ರಹವಾದ ಸುಮಾರು ಒಂದೂವರೆ ಕೋಟಿಗೂ ಮಿಗಿಲಾದ ಮೊತ್ತವನ್ನು ಬಡವರ ಚಿಕಿತ್ಸೆಗೆ ವೆಚ್ಚ ಮಾಡಿದ ದೀನಬಂಧು ರವಿ ಕಟಪಾಡಿ ಅವರಿಗೆ ಶ್ರೀ ರಾಮದೇವರಿಗೆ ನಡೆಸಲಾದ ಕಲಶಾಭಿಷೇಕದಲ್ಲಿ ತಲಾ 1 ಕೆ.ಜಿ. ತೂಕದ ಹಾಗೂ ತಲಾ 1 ಲಕ್ಷ ರು. ಮೌಲ್ಯದ ರಜತ ಕಲಶವನ್ನು ಶ್ರೀರಾಮನ ಅನುಗ್ರಹ ಪ್ರಸಾದ ರೂಪದಲ್ಲಿ ನೀಡಿ ಅಭಿನಂದಿಸಲಾಯಿತು.

ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಸ್ವತಃ ಮುತುವರ್ಜಿ ವಹಿಸಿ ಈ ಇಬ್ಬರನ್ನು ವಿಮಾನದ ಮೂಲಕ ಅಯೋಧ್ಯೆಗೆ ಕರೆಸಿ ಈ ವಿಶೇಷ ಪುರಸ್ಕಾರ ನೀಡಿದ್ದಾರೆ.ಅಲ್ಲದೆ ಸಂಜೆ ನಡೆದ ಪಲ್ಲಕ್ಕಿ ಉತ್ಸವದಲ್ಲೂ ಇಬ್ಬರಿಗೂ ಶ್ರೀರಾಮದೇವರ ಪ್ರಸಾದ ನೀಡಿ, ಇಬ್ಬರೂ ನಡೆಸಿದ ಲೋಕೋತ್ತರ ಕಾರ್ಯವನ್ನು ಕೊಂಡಾಡಿದರು.ಈ ಸಂದರ್ಭ ಮಾಜಿ ಶಾಸಕ ಕೆ.ರಘುಪತಿ ಭಟ್, ಶ್ರೀಗಳ ಆಪ್ತರಾದ ವಿಷ್ಣು ಆಚಾರ್ಯ, ಕೃಷ್ಣ ಭಟ್ ಶ್ರೀನಿವಾಸ ಪ್ರಸಾದ್ ಮೈಸೂರು, ವಾಸುದೇವ ಭಟ್ ಪೆರಂಪಳ್ಳಿ, ಮಾಜಿ ನಗರಸಭಾ ಸದಸ್ಯ ಮಹೇಶ್ ಠಾಕೂರ್, ಸುವರ್ಧನ್ ನಾಯಕ್ ಉಪಸ್ಥಿತರಿದ್ದರು.ಸಂಜೆ ಉತ್ಸವದಲ್ಲಿ ಭಾಗವಹಿಸಿದ ಕುಕ್ಕೆ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥರು, ಸಂಸದ ನಳಿನ್ ಕುಮಾರ್ ಕಟೀಲ್, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿಯವರೂ ಈ ಇಬ್ಬರಿಗೂ ಶುಭಕೋರಿದರು.