ಕನ್ನಡ ನಾಮಫಲಕ ಅಳವಡಿಕೆಗೆ ಆಗ್ರಹಿಸಿ ಕರವೇ ಪ್ರತಿಭಟನೆ

| Published : Mar 06 2024, 02:19 AM IST

ಸಾರಾಂಶ

ಅಂಗಡಿ ಮುಗ್ಗಟ್ಟುಗಳ ನಾಮಫಲಕಗಳನ್ನು ಸರ್ಕಾರದ ಆಧ್ಯತೆಯ ಆದೇಶದಂತೆ ಕನ್ನಡದಲ್ಲಿ ಅಳವಡಿಸಲು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು. ಶೇ. 60ರಷ್ಟು ಕನ್ನಡ ಬಳಸದ ನಾಮಫಲಕಗಳನ್ನು ಕಿತ್ತೊಗೆಯುವುದಾಗಿ ಈ ಹಿಂದೆ ಎಚ್ಚರಿಕೆ ನೀಡಿದ್ದರು.

ಬೀದರ್‌: ಅಂಗಡಿ ಮುಗ್ಗಟ್ಟುಗಳ ನಾಮಫಲಕಗಳನ್ನು ಸರ್ಕಾರದ ಆಧ್ಯತೆಯ ಆದೇಶದಂತೆ ಕನ್ನಡದಲ್ಲಿ ಅಳವಡಿಸಲು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.ಶೇ. 60ರಷ್ಟು ಕನ್ನಡ ಬಳಸದ ನಾಮಫಲಕಗಳನ್ನು ಕಿತ್ತೊಗೆಯುವುದಾಗಿ ಈ ಹಿಂದೆ ಎಚ್ಚರಿಕೆ ನೀಡಿದ್ದ ಕಾರ್ಯಕರ್ತರು, ಕನ್ನಡ ಬಾವುಟದ ಬಣ್ಣ ಬಳಿದಿದ್ದ ಬಡಿಗೆಗಳಿಂದ ಹೊಡೆದು ವಾಣಿಜ್ಯ ಮಳಿಗೆಗಳ ಅನ್ಯ ಭಾಷೆ ನಾಮಫಲಕಗಳನ್ನು ಪುಡಿಗೊಳಿಸಿದ ಘಟನೆ ನಡೆಯಿತು.

ಗಣೇಶ ಮೈದಾನದಿಂದ ಮೋಹನ್‌ ಮಾರ್ಕೆಟ್‌ ವರೆಗಿನ ಮಾರ್ಗದಲ್ಲಿ ಅನ್ಯ ಭಾಷೆಯಲ್ಲಿ ಹಾಕಲಾಗಿದ್ದ ನಾಮಫಲಕಗಳನ್ನು ಒಡೆದು ಆಕ್ರೋಶ ಹೊರ ಹಾಕಿದರಲ್ಲದೆ ಜಿ.ವಿ ಮಾಲ್‌ನ ನಾಮಫಲಕವನ್ನು ಕೂಡ ಕೈಯಿಂದಲೇ ಒಡೆದು ಹಾಕಿದರು.ಮೋಹನ್ ಮಾರ್ಕೆಟ್‌ ಎದುರಿನ ಮುಖ್ಯರಸ್ತೆ ಮಧ್ಯೆ ಕುಳಿತು ಕೆಲ ಕಾಲ ರಸ್ತೆ ತಡೆ ನಡೆಸಿ ಆಡಳಿತ ಹಾಗೂ ಕನ್ನಡ ನಾಮಫಲಕ ಅಳವಡಿಸದ ವಾಣಿಜ್ಯ ಮಳಿಗೆಯವರ ವಿರುದ್ಧ ಘೋಷಣೆ ಕೂಗಿ ಅಲ್ಲಿಂದ ಜಿ.ವಿ. ಮಾಲ್‌ವರೆಗೆ ಮೆರವಣಿಗೆ ನಡೆಸಿದರು.

ಪ್ರತಿಭಟನೆ ನೇತೃತ್ವ ವಹಿಸಿದ್ದ ವೇದಿಕೆಯ ಜಿಲ್ಲಾಧ್ಯಕ್ಷ ಸೋಮನಾಥ ಮುಧೋಳ, ರಾಜ್ಯ ಕಾರ್ಯದರ್ಶಿ ಜಗದೀಶ ಬಿರಾದಾರ, ಜಿಲ್ಲಾ ಉಪಾಧ್ಯಕ್ಷ ಸೋಮಶೇಖರ ಸಜ್ಜನ್‌, ಬೀದರ್ ದಕ್ಷಿಣ ಅಧ್ಯಕ್ಷ ವೀರಶೆಟ್ಟಿ ಗೌಸಪುರ, ಬೀದರ್‌ ಉತ್ತರ ಘಟಕದ ಅಧ್ಯಕ್ಷ ಸಚಿನ್‌ ಬೆನಕನಳ್ಳಿ, ಔರಾದ್‌ ತಾಲೂಕು ಅಧ್ಯಕ್ಷ ಅನೀಲ್‌ ಹೇಡೆ, ಪ್ರಮುಖರಾದ ಉದಯಕುಮಾರ ಅಷ್ಟೂರೆ ಸೇರಿದಂತೆ 20ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು ಅನಂತರ ಬಿಡುಗಡೆ ಮಾಡಿದರು.

2ನೇ ಹಂತದ ಹೋರಾಟ:ಕನ್ನಡದಲ್ಲಿ ಶೇ 60ರಷ್ಟು ನಾಮಫಲಕ ಅಳವಡಿಕೆಗೆ ಸರ್ಕಾರ ಕಾನೂನು ರಚಿಸಿ ಆದೇಶಿಸಿದೆ.

ಅದಾಗ್ಯೂ ವಾಣಿಜ್ಯ ಮಳಿಗೆ, ಶಿಕ್ಷಣ ಸಂಸ್ಥೆ, ಮಾಲ್‌, ಆಸ್ಪತ್ರೆ ಮೊದಲಾದವರು ಎಚ್ಚುತ್ತುಕೊಳ್ಳದ ಕಾರಣ ಎರಡನೇ ಹಂತದ ಹೋರಾಟ ಆರಂಭಿಸಲಾಗಿದೆ ಎಂದು ಸೋಮನಾಥ ಮುಧೋಳ ಹೇಳಿದರು.ಜಿಲ್ಲಾಡಳಿತ ಹಾಗೂ ನಗರಸಭೆ ಕನ್ನಡ ನಾಮಫಲಕ ಕಡ್ಡಾಯ ಆದೇಶ ಜಾರಿಗೊಳಿಸುವಲ್ಲಿ ವಿಫಲವಾಗಿವೆ. ಈ ಸಂಬಂಧ ವ್ಯಾಪಾರಿಗಳು, ಸಾಹಿತಿಗಳು ಹಾಗೂ ಕನ್ನಡಪರ ಹೋರಾಟಗಾರರ ಒಂದೇ ಒಂದು ಸಭೆ ನಡೆಸಿಲ್ಲ ಎಂದು ಆರೋಪಿಸಿ ಕನ್ನಡ ನಾಮಫಲಕ ಅಳವಡಿಕೆಗೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಬೇಕು ಎಂದು ಒತ್ತಾಯಿಸಿದರುಕನ್ನಡ ನೆಲದಲ್ಲಿ ಕನ್ನಡ ಭಾಷೆ ಕಡೆಗಣನೆಯನ್ನು ಸಹಿಸಲಾಗದು. ಜಿಲ್ಲೆಯಾದ್ಯಂತ ಕನ್ನಡಕ್ಕೆ ಶೇ.60ರಷ್ಟು ಆಧ್ಯತೆಯಲ್ಲಿ ನಾಮಫಲಕ ಅಳವಡಿಕೆ ಆದೇಶ ಪಾಲನೆ ಆಗುವವರೆಗೂ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು.ಅಮಿತ್‌ ಶಿವಪೂಜೆ, ವಿನಾಯಕ ರೆಡ್ಡಿ ಬುಧೇರಾ, ಪ್ರಭು ಯಾಕತಪುರ, ವಿಶ್ವನಾಥ ಗೌಡ, ಮಹೇಶ ಕಾಪಸೆ, ಅಲ್ಲಾಬಕ್ಷ ಸೋನಾಡಿ, ಗೋಪಾಲ್‌ ಕುಲಕರ್ಣಿ, ಸುಭಾಷ ಗಾಯಕವಾಡ, ಸಾಯಿನಾಥ ಕಾಂಬಳೆ ಸೇರಿದಂತೆ ವೇದಿಕೆಯ ಜಿಲ್ಲೆಯ ವಿವಿಧೆಡೆಯ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.