ನಿತ್ಯಾನಂದ ಒಳಕಾಡು, ವಿಶು ಶೆಟ್ಟಿಗೆ ಅಯೋಧ್ಯಾ ಮಂಡಲೋತ್ಸವ ಪುರಸ್ಕಾರ

| Published : Mar 02 2024, 01:53 AM IST

ನಿತ್ಯಾನಂದ ಒಳಕಾಡು, ವಿಶು ಶೆಟ್ಟಿಗೆ ಅಯೋಧ್ಯಾ ಮಂಡಲೋತ್ಸವ ಪುರಸ್ಕಾರ
Share this Article
  • FB
  • TW
  • Linkdin
  • Email

ಸಾರಾಂಶ

ರಾಮಮಂದಿರದಲ್ಲಿ ನಡೆಯುತ್ತಿರುವ ಅಖಂಡ 48 ದಿನಗಳ ಮಂಡಲೋತ್ಸವದ ಸಂದರ್ಭದಲ್ಲಿ ಪೇಜಾವರ ಶ್ರೀಗಳು ಶ್ರೀರಾಮ ದೇವರಿಗೆ ಅಭಿಷೇಕ ಮಾಡಿದ ತಲಾ 1 ಕೆ.ಜಿ. ತೂಕದ 1 ಲಕ್ಷ ರು. ಮೌಲ್ಯದ ರಜತ ಕಲಶಗಳನ್ನು ಈ ಇಬ್ಬರು ಸಾಮಾಜಿಕ ಕಾರ್ಯಕರ್ತರಿಗೆ ನೀಡಿ ಅವರ ನಿಸ್ವಾರ್ಥ ಕೆಲಸಗಳನ್ನು ಅಭಿನಂದಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿದೀನದಲಿತರ, ಅನಾಥ - ಅಸಹಾಯಕರ, ಪಶುಪಕ್ಷಿಗಳ ಶುಶ್ರೂಷೆಗಾಗಿ ಜೀವನವನ್ನೇ ಮುಡಿಪಾಗಿಟ್ಟ ಉಡುಪಿಯ ಇಬ್ಬರು ಸಾಮಾಜ ಸೇವಕರಿಗೆ ಅಯೋಧ್ಯೆಯ ಶ್ರೀ ರಾಮಂದಿರದಲ್ಲಿ ಮಂಡಲೋತ್ಸವ ಪುರಸ್ಕಾರ ಪ್ರಾಪ್ತಿಯಾಗಿದೆ.

ಉಡುಪಿಯ ನಿತ್ಯಾನಂದ ಒಳಕಾಡು ಮತ್ತು ಅಂಬಲಪಾಡಿಯ ವಿಶು ಶೆಟ್ಟಿ ಅಂಬಲಪಾಡಿ ಅವರಿಗೆ ಅಯೋಧ್ಯೆ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಟ್ರಸ್ಟಿಗಳಾದ, ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಶುಕ್ರವಾರ ಈ ಶ್ರೇಷ್ಟ ಗೌರವವನ್ನು ಪ್ರದಾನ ಮಾಡಿದರು.ರಾಮಮಂದಿರದಲ್ಲಿ ನಡೆಯುತ್ತಿರುವ ಅಖಂಡ 48 ದಿನಗಳ ಮಂಡಲೋತ್ಸವದ ಸಂದರ್ಭದಲ್ಲಿ ಪೇಜಾವರ ಶ್ರೀಗಳು ಶ್ರೀರಾಮ ದೇವರಿಗೆ ಅಭಿಷೇಕ ಮಾಡಿದ ತಲಾ 1 ಕೆ.ಜಿ. ತೂಕದ 1 ಲಕ್ಷ ರು. ಮೌಲ್ಯದ ರಜತ ಕಲಶಗಳನ್ನು ಈ ಇಬ್ಬರು ಸಾಮಾಜಿಕ ಕಾರ್ಯಕರ್ತರಿಗೆ ನೀಡಿ ಅವರ ನಿಸ್ವಾರ್ಥ ಕೆಲಸಗಳನ್ನು ಅಭಿನಂದಿಸಿದ್ದಾರೆ.

ಶ್ರೀಗಳು ಇವರೀರ್ವರನ್ನೂ ಶ್ರೀಮಠದ ವೆಚ್ಚದಲ್ಲೇ ವಿಮಾನದಲ್ಲಿ ಅಯೋಧ್ಯೆಗೆ ಬರಮಾಡಿಕೊಂಡು ಪುರಸ್ಕರಿಸಿ ಅವರ ಸಮಾಜಕಾರ್ಯಗಳನ್ನು ಕೊಂಡಾಡಿದ್ದಾರೆ.ರಾಮಮಂದಿರ ನಿರ್ಮಾಣವಾಗಿದೆ, ಇನ್ನು ರಾಮರಾಜ್ಯವಾಗಬೇಕು. ದೀನ ಜನರ ಉದ್ಧಾರ, ಗೋವುಗಳ ರಕ್ಷಣೆಯಾದರೆ ಮಾತ್ರ ಇದು ಸಾಧ್ಯ. ಎಲ್ಲರೂ ಇದರಲ್ಲಿ ತೊಡಗಿಕೊಳ್ಳಬೇಕು ಎಂದು ಎಲ್ಲೆಡೆ ಕರೆನೀಡುತ್ತಿರುವ ಶ್ರೀಗಳು, ಆ ಕಾರ್ಯಗಳನ್ನೇ ದಶಕಗಳಿಂದ ನಿಸ್ಮೃಹವಾಗಿ ನಡೆಸುತ್ತಿರುವ ನಿತ್ಯಾನಂದ ಮತ್ತು ವಿಶು ಶೆಟ್ಟರನ್ನು ಸಂಮಾನಿಸಿ, ಸಮಾಜಕ್ಕೆ ಸ್ಫೂರ್ತಿ ತುಂಬಿದ್ದಾರೆ. ಅಯೋಧ್ಯೆಯಲ್ಲಿ ಪುರಸ್ಕಾರ ದೊರೆತಿರುವುದು ಉಡುಪಿಗೇ ಸಂದ ಗೌರವವೂ ಆಗಿದೆ.

ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್, ಅಂತಾರಾಷ್ಟ್ರೀಯ ಖ್ಯಾತಿಯ ವಯಲಿನ್ ಮಾಂತ್ರಿಕ ಡಾ. ಎಲ್.ಸುಬ್ರಮಣಿಯಮ್, ಸುಬ್ರಹ್ಮಣ್ಯ ಭಟ್ ಸಗ್ರಿ, ಶ್ರೀಗಳ ಆಪ್ತ ಸಹಾಯಕರಾದ ವಾಸುದೇವ ಭಟ್ ಪೆರಂಪಳ್ಳಿ, ಶ್ರೀನಿವಾಸ ಪ್ರಸಾದ್, ಕಾರ್ಯದರ್ಶಿಗಳಾದ ವಿಷ್ಣುಮೂರ್ತಿ ಆಚಾರ್ಯ, ಕೃಷ್ಣಭಟ್ ಮೊದಲಾದವರು ಉಪಸ್ಥಿತರಿದ್ದರು.* ಮರೆಯಲಾಗದ ದಿನ: ನಿತ್ಯಾನಂದಪುರಸ್ಕಾರವನ್ನು ಸ್ವೀಕರಿಸಿದ ನಿತ್ಯಾನಂದ ಒಳಕಾಡು, ಇದು ತಮ್ಮ ಜೀವನಮಾನದಲ್ಲಿಯೇ ಮರೆಯಲಾಗದ ದಿನ, ಆಯೋಧ್ಯೆಯಲ್ಲಿ ಈ ಸನ್ಮಾನ ಸ್ವೀಕರಿಸುತ್ತಿರುವುದು ತಮ್ಮ ಅದೃಷ್ಟ ಎಂದು ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ.* ಜೀವನದ ಸಾರ್ಥಕ ಕ್ಷಣ: ವಿಶು ಶೆಟ್ಟಿತಮ್ಮ ತಾಯಿಯೊಂದಿಗೆ ತೆರಳಿ ಪುರಸ್ಕಾರವನ್ನು ಸ್ವೀಕರಿಸಿದ ವಿಶು ಶೆಟ್ಟಿ, ಇಡೀ ವಿಶ್ವವೇ ಬೆರಗಿನಿಂದ ನೋಡುತ್ತಿರುವ ರಾಮಮಂದಿರದಲ್ಲಿ ಪೇಜಾವರ ಶ್ರೀಗಳಿಂದ ಈ ಸನ್ಮಾನ ಪಡೆಯುತ್ತಿರುವುದು ಜೀವನದ ಸಾರ್ಥಕ ಕ್ಷಣ ಎಂದು ಹೇಳಿದ್ದಾರೆ.