ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಅಯೋಧ್ಯೆ ರಾಮಮಂದಿರದಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಪದಾಧಿಕಾರಿಗಳು ಕೃಷ್ಣಮೂರ್ತಿಪುರಂನಲ್ಲಿ ಮಂತ್ರಾಕ್ಷತೆ ಮತ್ತು ಆಮಂತ್ರಣ ಪತ್ರಿಕೆಯನ್ನು ಮನೆ ಮನೆಗೆ ವಿತರಿಸಿದರು.ಶ್ರೀರಾಮನ ಭಾವಚಿತ್ರವನ್ನು ಮನೆಮನೆಗೆ ತಲುಪಿಸಿದರು. ಈ ವೇಳೆ ಬ್ರಾಹ್ಮಣ ಸಮಾಜದ ಮುಖಂಡ ಕೆ. ರಘುರಾಂ ವಾಜಪೇಯಿ ಮಾತನಾಡಿ, ಇಡೀ ಜಗತ್ತು ಕಾತರದಿಂದ ಕಾಯುತ್ತಿರುವ ಈ ಐತಿಹಾಸಿಕ ಕಾರ್ಯಕ್ರಮ ಕೇವಲ ಹಿಂದೂಗಳು ಮಾತ್ರವಲ್ಲ, ದೇಶದ ಎಲ್ಲರೂ ಹೆಮ್ಮೆಪಡುವ ವಿಷಯ. ಸಾಧುಸಂತರ ನೂರಾರು ವರ್ಷಗಳ ತಪಸ್ಸಿನ ಫಲವಾಗಿ ರಾಮಮಂದಿರ ನಿರ್ಮಾಣವಾಗುತ್ತಿದೆ ಎಂದರು.
ಆಧುನಿಕ ಯುಗದ ಆಕರ್ಷಣೆಗೆ ಒಳಗಾಗಿ ಸಂಸ್ಕಾರ ಹೀನರಾಗುತ್ತಿರುವ ಯುವಕರಿಗೆ ಮರ್ಯಾದಾ ಪುರುಷ ರಾಮನ ಜೀವನವೇ ಸ್ಫೂರ್ತಿ. ಯುವಕರು ಆಧ್ಯಾತ್ಮದ ಆಸರೆ, ಸತತ ಪರಿಶ್ರಮದ ತಳಹದಿಯ ಮೇಲೆ ತಮ್ಮ ಜೀವನ ರೂಪಿಸಿಕೊಳ್ಳಬೇಕು. ಇದರಿಂದ ಸದೃಢ ಸಮಾಜದ ನಿರ್ಮಾಣ ಸಾಧ್ಯ ಎಂದು ಅವರು ಕಿವಿಮಾತು ಹೇಳಿದರು.ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ವಿಕ್ರಮ ಅಯ್ಯಂಗಾರ್ ಅಗಸ್ತ್ಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿರ್ದೇಶಕರಾದ ಎಂ.ಆರ್. ಬಾಲಕೃಷ್ಣ, ಕೆ.ಎನ್. ಅರುಣ್, ಸಂಘಟನಾ ಕಾರ್ಯದರ್ಶಿ ಅಜಯ್ ಶಾಸ್ತ್ರಿ, ವಿ.ಎನ್. ಕೃಷ್ಣ, ಪೇಪರ್ ಮುರಳಿ, ಮಹೇಶ್ ಕುಮಾರ್, ನಗರ ಮಾಜಿ ಪಾಲಿಕೆ ಸದಸ್ಯೆ ಯಮುನಾ, ಪುಟ್ಟಸ್ವಾಮಿ, ಕಡಕೊಳ ಜಗದೀಶ್, ಸುಚೇಂದ್ರ, ರಂಗನಾಥ್, ಜಯಸಿಂಹ, ವಿಜಯ್ ಕುಮಾರ್, ಚಕ್ರಪಾಣಿ, ಎಸ್.ಬಿ. ವಾಸುದೇವಮೂರ್ತಿ, ಅಪೂರ್ವ ಸುರೇಶ್, ಬೈರತಿ ಲಿಂಗರಾಜು, ಎಸ್.ಎನ್. ರಾಜೇಶ್, ರಾಕೇಶ್, ಡಿ.ಕೆ. ನಾಗಭೂಷಣ್, ನಾಗಶ್ರೀ ಸುಚಿಂದ್ರ ಇದ್ದರು.
ಕುಸಿದು ಬಿದ್ದ ಶಿವರಾಜ್:ಮಂತ್ರಾಕ್ಷತೆ ವಿತರಣೆ ವೇಳೆ ಬಿಜೆಪಿ ಕಾರ್ಯಕರ್ತ ಶಿವರಾಜ್ ಅವರು ಏಕಾಏಕಿ ಕುಸಿದು ಬಿದ್ದ ಘಟನೆ ನಡೆಯಿತು. ಸ್ಥಳದಲ್ಲಿದ್ದ ಕೆಲವರು ಕೆಲ ಕ್ಷಣ ಗಾಬರಿಯಿಂದ ಆತಂಕಕ್ಕೆ ಒಳಗಾದರು. ಅಸ್ವಸ್ಥಗೊಂಡಿದ್ದ ಶಿವರಾಜ್ ಅವರನ್ನು ಉಪಚರಿಸಿ ಕೂಡಲೇ ಆಸ್ಪತ್ರೆಗೆ ಕರೆದೊಯ್ದರು.