ಸಾರಾಂಶ
ರಾಮನಗರ: ಅಯೋಧ್ಯೆಯಲ್ಲಿ ರಾಮಮಂದಿರದಲ್ಲಿ ರಾಮಲಲ್ಲನ ಮೂರ್ತಿ ಪ್ರತಿಷ್ಠಾಪನಾ ಕಾರ್ಯದಲ್ಲಿ ವಾದ್ಯ ನುಡಿಸಲು ಕರ್ನಾಟಕದಿಂದ ತೆರಳುತ್ತಿರುವ ಮಂಗಳವಾದ್ಯ ತಂಡದಲ್ಲಿ ರಾಮನಗರ ಜಿಲ್ಲೆಯ ವಿಜಿ ಕುಮಾರ್ ಮತ್ತವರ ವಾದ್ಯತಂಡವೂ ಸೇರಿದೆ.
ಅಯೋಧ್ಯೆಯಲ್ಲಿ ಜ.23ರಿಂದ ಮಾರ್ಚ್ 10ರವರೆಗೆ ಬರೋಬ್ಬರಿ 48 ದಿನಗಳ ಕಾಲ ವಿಜಿ ಕುಮಾರ್ ನೇತೃತ್ವದ ವಾದ್ಯ ತಂಡ ಬಾಲರಾಮನಿಗೆ ರಾಗ ಸೇವೆ ಸಲ್ಲಿಸಲಿದ್ದಾರೆ.ಅಯೋಧ್ಯೆ ರಾಮಜನ್ಮ ಭೂಮಿ ವತಿಯಿಂದ ವಿಜಿಕುಮಾರ್ ಅವರಿಗೆ ಮಂಗಳವಾದ್ಯ ನುಡಿಸುವ ಸಂಬಂಧ ಆಹ್ವಾನ ಬಂದಿದೆ. ಹಾಗಾಗಿ ಜ.19ರಂದು ಈ ಮಂಗಳವಾದ್ಯ ತಂಡವೂ ಅಯೋಧ್ಯೆಗೆ ಪ್ರಯಾಣ ಬೆಳೆಸಲಿದೆ. ಈ 10 ಮಂದಿ ತಂಡದಲ್ಲಿ ರಾಮನಗರ, ಮೈಸೂರು, ಶ್ರೀರಂಗಪಟ್ಟಣ ಹಾಗೂ ಮಂಡ್ಯದ ಆಯ್ದ ಕಲಾವಿದರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ತಂಡವೂ ರಾಮನಿಗೆ ಪ್ರಿಯವಾದ ರಾಗವನ್ನು ನುಡಿಸಲಿದ್ದು, ಆ ಮೂಲಕ ಅಳಿಲು ಸೇವೆ ಸಲ್ಲಿಸಲಿದೆ.
ರಾಮನಗರದಿಂದ ಅಯೋಧ್ಯೆಗೆ ನಂಟು:ಅಯೋಧ್ಯೆಯಲ್ಲಿ ತಮಿಳುನಾಡು ಮೂಲದ ಅಮ್ಮಾಜಿ ದೇವಾಲಯವಿದೆ. ಈ ದೇವಾಲಯದಲ್ಲಿ ವಿಜಿಕುಮಾರ್ ಮತ್ತವರ ತಂಡ ಕಳೆದ 10 ವರ್ಷದಿಂದ ಮಂಗಳವಾದ್ಯ ನುಡಿಸುತ್ತಿದೆ. ಇವರ ಮಂಗಳವಾದ್ಯವನ್ನು ವೀಕ್ಷಣೆ ಮಾಡಿದ ರಾಮ ಜನ್ಮ ಭೂಮಿ ಟ್ರಸ್ಟ್‌ನ ಚಂಪತ್ ರಾಯ್ ಹಾಗೂ ಗೋಪಾಲ್ ಜೀ ಅವರು ಪ್ರತಿ ವರ್ಷ ಶ್ರೀರಾಮನವಮಿಯಂದು ಅಯೋಧ್ಯೆಯಲ್ಲಿ ಕಾರ್ಯಕ್ರಮ ನೀಡುವಂತೆ ಸೂಚಿಸಿದ್ದರು. ಇವರ ಸೂಚನೆ ಮೇರೆಗೆ ಕಳೆದ ನಾಲ್ಕು ವರ್ಷದಿಂದ ವಿಜಿಕುಮಾರ್ ಅವರ ಮಂಗಳವಾದ್ಯ ತಂಡವೂ ಪ್ರತಿ ವರ್ಷ ರಾಮನವಮಿ ದಿನದಂದು ಮಂಗಳವಾದ್ಯ ನುಡಿಸಿಕೊಂಡು ಬಂದಿದೆ. ಈ ಹಿನ್ನೆಲೆಯಲ್ಲಿ ದೇವಾಲಯ ಉದ್ಘಾಟನೆಯಂದು ವಾದ್ಯ ನುಡಿಸಲು ಅವಕಾಶ ಲಭಿಸಿದೆ.
ಜ.23ರಿಂದ ದೇವಾಯದಲ್ಲಿ ಅಭಿಷೇಕ ಹಾಗೂ ಪೂಜೆಯ ವೇಳೆ ಮಂಗಳವಾದ್ಯ ನುಡಿಸುವರು. ಜ.22ರಂದು ಪ್ರಧಾನಿ ನರೇಂದ್ರ ಮೋದಿ ಅವರು ದೇವಾಲಯ ಉದ್ಘಾಟನೆ ನೆರವೇರಿಸಲಿದ್ದಾರೆ. ಅಂದು ಶಿಷ್ಟಾಚಾರ ಇರುವುದರಿಂದ ಮಂಗಳವಾದ್ಯ ನುಡಿಸಲು ಅವಕಾಶ ಸಿಗುವುದು ಕಷ್ಟ. ಹಾಗಾಗಿ ಜ.23ರಿಂದ 48ದಿನಗಳ ಕಾಲ ಕರ್ನಾಟಕ ತಂಡದಿಂದ ಮಂಗಳವಾದ್ಯ ಮೊಳಗಲಿದೆ. ಕೋಟ್....ಅಯೋಧ್ಯೆಯ ಅಮ್ಮಾಜಿ ದೇವಾಲಯದಲ್ಲಿ ಕಳೆದ 10 ವರ್ಷದಿಂದ ಮಂಗಳವಾದ್ಯ ನುಡಿಸುತ್ತಿದ್ದೇವೆ. ಇದನ್ನು ಗಮನಿಸಿದ ಅಯೋಧ್ಯೆ ರಾಮಜನ್ಮ ಭೂಮಿ ಟ್ರಸ್ಟ್‌ನ ಚಂಪತ್ ರಾಯ್ ಹಾಗೂ ಗೋಪಾಲ್ ಜೀ ಅವರು ಪ್ರತಿ ವರ್ಷ ರಾಮನವಮಿಯಂದು ಅಯೋಧ್ಯೆಯಲ್ಲಿ ಮಂಗಳವಾದ್ಯ ನುಡಿಸುವಂತೆ ತಿಳಿಸಿದ್ದರು. ಕಳೆದ 4 ವರ್ಷದಿಂದ ಈ ಕಾರ್ಯ ಮಾಡುತ್ತಿದ್ದೇವೆ. ಜತೆಗೆ, ದೇವಾಲಯ ಉದ್ಘಾಟನೆಗೆ ಸಂಬಂಧ ಟ್ರಸ್ಟ್ ವತಿಯಿಂದ 48 ದಿನಗಳ ಕಾಲ ಮಂಗಳವಾದ್ಯ ನುಡಿಸಲು ಆಹ್ವಾನ ಬಂದಿದೆ.
-ವಿಜಿಕುಮಾರ್, ಅಯೋಧ್ಯೆಯಲ್ಲಿ ಮಂಗಳವಾದ್ಯ ನುಡಿಸಲಿರುವ ರಾಮನಗರ ಜಿಲ್ಲೆ ಕಲಾವಿದ.17ಕೆಆರ್ ಎಂಎನ್ 4,5,6.ಜೆಪಿಜಿ4.ಅಯೋಧ್ಯೆಯಲ್ಲಿ ಮಂಗಳವಾದ್ಯ ಪ್ರದರ್ಶನ ನೀಡಿದ್ದ ರಾಮನಗರದ ವಿಜಿಕುಮಾರ್ ತಂಡ.