ಅಯೋಧ್ಯೆ ಮಂದಿರ ಲೋಕಾರ್ಪಣೆ: ಕರಾವಳಿಯಲ್ಲಿ ಸಂಭ್ರಮ

| Published : Jan 23 2024, 01:46 AM IST

ಅಯೋಧ್ಯೆ ಮಂದಿರ ಲೋಕಾರ್ಪಣೆ: ಕರಾವಳಿಯಲ್ಲಿ ಸಂಭ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಅಯೋಧ್ಯೆಯಲ್ಲಿ ಶ್ರೀರಾಮಲಲ್ಲಾನ ಮಂದಿರ ಲೋಕಾರ್ಪಣೆ ಸಂದರ್ಭವನ್ನು ಕರಾವಳಿಯ ಜಿಲ್ಲೆಯಲ್ಲಿ ಸೋಮವಾರ ಭಕ್ತಿ, ಶ್ರದ್ಧೆ, ಸಡಗರದಿಂದ ಆಚರಿಸಲಾಯಿತು. ವಿಜಯೋತ್ಸವ ಮಾದರಿಯಲ್ಲಿ ಜಿಲ್ಲಾದ್ಯಂತ ಪಟಾಕಿ ಸಿಡಿಸಿ, ಸಿಹಿ ಹಂಚಿ ಶ್ರೀರಾಮನ ಪ್ರಾಣ ಪ್ರತಿಷ್ಠೆಯನ್ನು ಸಂಭ್ರಮಿಸಲಾಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ಅಯೋಧ್ಯೆಯಲ್ಲಿ ಶ್ರೀರಾಮಲಲ್ಲಾನ ಮಂದಿರ ಲೋಕಾರ್ಪಣೆ ಸಂದರ್ಭವನ್ನು ಕರಾವಳಿಯ ಜಿಲ್ಲೆಯಲ್ಲಿ ಸೋಮವಾರ ಭಕ್ತಿ, ಶ್ರದ್ಧೆ, ಸಡಗರದಿಂದ ಆಚರಿಸಲಾಯಿತು. ವಿಜಯೋತ್ಸವ ಮಾದರಿಯಲ್ಲಿ ಜಿಲ್ಲಾದ್ಯಂತ ಪಟಾಕಿ ಸಿಡಿಸಿ, ಸಿಹಿ ಹಂಚಿ ಶ್ರೀರಾಮನ ಪ್ರಾಣ ಪ್ರತಿಷ್ಠೆಯನ್ನು ಸಂಭ್ರಮಿಸಲಾಯಿತು.

ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್‌ ಕಾಮತ್‌ ಅವರು ಬಜಿಲಕೇರಿ ಮುಖ್ಯಪ್ರಾಣ ದೇವಸ್ಥಾನದಲ್ಲಿ ಉರುಳು ಸೇವೆ ನಡೆಸಿದರೆ, ದ.ಕ. ಸಂಸದ ನಳಿನ್ ಕುಮಾರ್ ಕಟೀಲ್‌ ಅವರು ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ರಾಮತಾರಕ ಯಜ್ಞದಲ್ಲಿ ಪಾಲ್ಗೊಂಡರು. ಇದೇ ರೀತಿ ಜಿಲ್ಲೆಯ ಬಿಜೆಪಿ ಶಾಸಕರು, ಮುಖಂಡರು, ಜನಸಾಮಾನ್ಯರು ದೇವಸ್ಥಾನ, ಮಠ, ಮಂದಿರಗಳಲ್ಲಿ ಪೂಜೆ, ಪ್ರಾರ್ಥನೆ ನೆರವೇರಿಸಿದರು. ಹೆಚ್ಚಿನ ದೇವಸ್ಥಾನಗಳಲ್ಲಿ ರಾಮತಾಕರ ಯಜ್ಞ ಹಾಗೂ ಪಾರಾಯಣ ನಡೆಯಿತು. ದೇವರಿಗೆ ವಿಶೇಷ ಸೇವೆಗಳೂ ನೆರವೇರಿದವು.

ಮಂಗಳೂರಿನ ತಣ್ಣೀರುಬಾವಿ ಬೀಚ್‌ನಲ್ಲಿ ಶ್ರೀರಾಮನ ಗಾಳಿಪಟ ಬಾನೆತ್ತರಕ್ಕೆ ಹಾರಿಸಿ ಗೌರವ ಸೂಚಿಸಿದರೆ, ನಗರದಲ್ಲಿ ಎರಡು ಖಾಸಗಿ ಬಸ್‌ ಹಾಗೂ ಕಿನ್ನಿಗೋಳಿಯಲ್ಲಿ ಆಟೋ ಚಾಲಕರೊಬ್ಬರು ದಿನವಿಡೀ ಉಚಿತ ಪ್ರಯಾಣ ಏರ್ಪಡಿಸಿ ರಾಮಭಕ್ತಿ ಮೆರೆದರು.

ಮೊಳಗಿದ ಜೈಶ್ರೀರಾಮ್‌ ಘೋಷಣೆ:

ಮಧ್ಯಾಹ್ನ 12.25ರ ವೇಳೆಗೆ ಅಯೋಧ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಪೂರ್ಣಗೊಳಿಸುತ್ತಿದ್ದಂತೆ ಜಿಲ್ಲೆಯ ಎಲ್ಲ ಕಡೆಗಳಲ್ಲೂ ‘ಜೈಶ್ರೀರಾಮ್’ ಜಯಘೋಷ ಮುಗಿಲು ಮುಟ್ಟಿತ್ತು. ಶಂಖನಾದ, ಮಂಗಳ ವಾದ್ಯ ನಿನಾದ ಹಾಗೂ ಭಾರಿ ಪ್ರಮಾಣದಲ್ಲಿ ಸುಡುಮದ್ದು ಸಿಡಿಸಿ ಸಂಭ್ರಮಿಸಲಾಯಿತು. ಪೇಟೆಗಳಲ್ಲಿ, ಅಂಗಡಿ ಮುಂಗಟ್ಟುಗಳಲ್ಲಿ ಜನತೆ ಸಿಹಿ ಹಂಚಿ ಸಂತಸಪಟ್ಟಿತು.

ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳನ್ನು ಕೇಸರಿ ಧ್ವಜಗಳಿಂದ ಅಲಂಕರಿಸಿದ್ದರೆ, ಮನೆ ಮನೆಗಳಲ್ಲಿ ತೋರಣ ಕಟ್ಟಿ, ರಂಗೋಲಿ ಬಳಿದು, ಶ್ರೀರಾಮನ ಫೋಟೋಗೆ ಹೂಹಾರ, ಆರತಿ ಬೆಳಗಿ ಉತ್ಸವ ನಡೆಸಲಾಯಿತು. ಬಳಿಕ ಹಿಂದು ಸಂಘಟನೆಗಳು ಹಂಚಿದ ಮಂತ್ರಾಕ್ಷತೆಯನ್ನು ಆಶೀರ್ವಾದ ಪೂರಕ ಸ್ವೀಕರಿಸಿ, ಅದರಿಂದ ಸಿಹಿ ಮಾಡಿ ಶ್ರೀರಾಮ ನೈವೇದ್ಯ ಎಂದು ಉಣಬಡಿಸಲಾಯಿತು.

ನೇರ ಪ್ರಸಾರ ವೀಕ್ಷಣೆ:

ಜಿಲ್ಲೆಯಾದ್ಯಂತ ಸರ್ಕಾರಿ ಶಾಲೆಗಳಲ್ಲಿ ತರಗತಿ ನಡೆದಿದೆ. ಆದರೆ ಬಹುತೇಕ ಖಾಸಗಿ ಶಾಲೆಗಳಿಗೆ ರಜೆ ಸಾರಲಾಗಿತ್ತು. ಖಾಸಗಿ ಶಾಲಾ ಹಾಸ್ಟೆಲ್‌ಗಳಲ್ಲಿ ಕೂಡ ಶ್ರೀರಾಮನ ಪ್ರಾಣ ಪ್ರತಿಷ್ಠೆಯ ನೇರ ಪ್ರಸಾರ ಏರ್ಪಡಿಸಲಾಗಿತ್ತು. ಕೆಲವು ಶಾಲೆಗಳಲ್ಲಿ ಪುಟಾಣಿಗಳು ಶ್ರೀರಾಮನ ವೇಷ ಧರಿಸಿ ಗಮನ ಸೆಳೆದರು. ಇಡೀ ಜಿಲ್ಲೆಯಲ್ಲಿ ರಾಮೋತ್ಸವದ ವಾತಾವರಣ ಕಂಡುಬಂದಿತ್ತು. ದೇವಸ್ಥಾನ, ಮಠ, ಮಂದಿರಗಳಲ್ಲಿ ಕೂಡ ಎಲ್‌ಇಡಿ ಪರದೆ ಮೂಲಕ ನೇರ ಪ್ರಸಾರದ ವ್ಯವಸ್ಥೆಗೊಳಿಸಲಾಗಿತ್ತು.

ವಾಹನಗಳ ಉಚಿತ ಸೇವೆ:

ವಾಹನಗಳಲ್ಲಿ ಕೂಡ ಪ್ರಾಣಪ್ರತಿಷ್ಠೆ ಸಂಭ್ರಮವಾಗಿ ಆಚರಿಸಿದ್ದು, ರಾಮನ ಸ್ಟಿಕ್ಕರ್‌, ಪೋಸ್ಟರ್‌, ಪತಾಕೆಗಳೊಂದಿಗೆ ಓಡಾಡುತ್ತಿದ್ದವು. ಮಂಗಳೂರಿನಲ್ಲಿ ಎರಡು ಖಾಸಗಿ ಬಸ್‌ ಹಾಗೂ ಕಿನ್ನಿಗೋಳಿಯಲ್ಲಿ ಆಟೋರಿಕ್ಷಾ ರಾಮನ ಹೆಸರಿನಲ್ಲಿ ಪ್ರಯಾಣಿಕರಿಗೆ ಉಚಿತ ಸೇವೆ ನೀಡಿದವು. ಹೆಚ್ಚಿನ ಹೊಟೇಲ್‌ಗಳಲ್ಲಿ ಕೂಡ ಗ್ರಾಹಕರಿಗೆ ಮಧ್ಯಾಹ್ನ ಉಚಿತ ಸಿಹಿ ಊಟ ನೀಡಲಾಯಿತು.

ಯಕ್ಷಗಾನಗಳಲ್ಲೂ ರಾಮನ ಕಥೆ ಪ್ರದರ್ಶನ:

ಕರಾವಳಿಯಲ್ಲಿ ಸುಮಾರು 30ಕ್ಕೂ ಅಧಿಕ ಯಕ್ಷಗಾನ ಮೇಳಗಳು ಯಕ್ಷಗಾನ ಪ್ರದರ್ಶನ ನೀಡುತ್ತಿವೆ. ಅಯೋಧ್ಯೆ ಮಂದಿರ ಲೋಕಾರ್ಪಣೆಯ ಸಡಗರಕ್ಕೆ ಮೇಳಗಳೂ ಕೈಜೋಡಿಸಿದ್ದು, ಸುಮಾರು 15ಕ್ಕೂ ಅಧಿಕ ಮೇಳಗಳಲ್ಲಿ ಸೋಮವಾರ ಶ್ರೀರಾಮನ ಕುರಿತ ಯಕ್ಷಗಾನ ಪ್ರಸಂಗ ಪ್ರದರ್ಶನಗೊಂಡಿದೆ.

20ಕ್ಕೂ ಅಧಿಕ ಹೆರಿಗೆ:

ಶ್ರೀರಾಮನ ಪ್ರಾಣ ಪ್ರತಿಷ್ಠೆ ದಿನಕ್ಕಾಗಿ ಹೆರಿಗೆಗೆ ಆಗ್ರಹಿಸದಿದ್ದರೂ ದ.ಕ.ಜಿಲ್ಲೆಯಲ್ಲೂ ಸೋಮವಾರ 20ಕ್ಕೂ ಅಧಿಕ ಗರ್ಭಿಣಿಯರ ಹೆರಿಗೆ ನಡೆದಿದೆ. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಹೆರಿಗೆ ನಡೆದಿದ್ದು, ಇದು ಕಾಕತಾಳಿಯವಾಗಿ ರಾಮನ ಪ್ರಾಣಪ್ರತಿಷ್ಠೆ ದಿನ ಹೆರಿಗೆಯಾದ ಕಾರಣ ಕೆಲವು ಬಾಣಂತಿಯರು ಸಂಭ್ರಮ ಪಡುವಂತಾಯಿತು. ನಗರದ ಲೇಡಿಗೋಷನ್‌ ಸರ್ಕಾರಿ ಆಸ್ಪತ್ರೆಯಲ್ಲಿ ಸೇರಿದಂತೆ ಖಾಸಗಿ ಆಸ್ಪತ್ರೆಗಳಲ್ಲಿ ಮಾಮೂಲಿಯಂತೆ ಹೆರಿಗೆ ನಡೆದಿದೆ.

ರಾತ್ರಿ ದೀಪೋತ್ಸವ ಸಡಗರ:

ರಾಮಮಂದಿರ ಲೋಕಾರ್ಪಣೆ ಸಲುವಾಗಿ ರಾತ್ರಿ ಜಿಲ್ಲೆಯಾದ್ಯಂತ ದೀಪಾವಳಿ ಮಾದರಿಯಲ್ಲಿ ದೀಪೋತ್ಸವ ಸಡಗರ ಕಂಡುಬಂತು. ಮನೆಗಳ ಮುಂದೆ ಹಣತೆ, ದೀಪಗಳನ್ನು ಬೆಳಗಿಸಿ ಶ್ರೀರಾಮಲಲ್ಲಾನಿಗೆ ಭಕ್ತಿ ನಮನ ಸಲ್ಲಿಸಿದರು. ಇದೇ ವೇಳೆ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಮನೆಗಳನ್ನು ವಿದ್ಯುತ್‌ ದೀಪಗಳಿಂದ ಅಲಂಕರಿಸಿ ಶ್ರೀರಾಮಸ್ತೋತ್ರ, ರಾಮಸಂಕೀರ್ತನೆ ನಡೆಸಿದರು. ದೇವಾಲಯಗಳಲ್ಲೂ ರಾತ್ರಿ ಪೂಜೆ, ಭಜನಾ ಮಂದಿರಗಳಲ್ಲಿ ಕೂಡ ರಾಮ ಭಜನೆ ಏರ್ಪಟ್ಟಿತು. ದಿನಪೂರ್ತಿ ಕೇಸರಿ ಶಾಲು, ಶ್ರೀರಾಮನ ಚಿತ್ರದ ಪತಾಕೆ, ಶಲ್ಯಗಳಿಂದ ಇಡೀ ಜಿಲ್ಲೆ ಕೇಸರಿಮಯದಂತೆ ಕಂಡುಬಂತು.