ಧಾರ್ಮಿಕ ವಿಧಿವಿಧಾನಗಳೊಂದಿಗೆ ಶ್ರೀಮಠದಲ್ಲಿ ನಡೆದ ಆಯುಧ ಪೂಜೆ

| Published : Oct 13 2024, 01:10 AM IST

ಧಾರ್ಮಿಕ ವಿಧಿವಿಧಾನಗಳೊಂದಿಗೆ ಶ್ರೀಮಠದಲ್ಲಿ ನಡೆದ ಆಯುಧ ಪೂಜೆ
Share this Article
  • FB
  • TW
  • Linkdin
  • Email

ಸಾರಾಂಶ

ಬಳಿಕ ಚಿನ್ನದ ಕಿರೀಟಧಾರಣೆ ಮತ್ತು ಕಂಠಿ ಹಾರದೊಂದಿಗೆ ಸರ್ವಾಲಂಕೃತಗೊಂಡಿದ್ದ ಶ್ರೀಗಳು, ಸಿದ್ಧಸಿಂಹಾಸನ ಪೂಜೆ ಹಾಗೂ ಷೋಡಶೋಪಚಾರ ಪೂಜೆ ನೆರವೇರಿಸಿದರು. ನಂತರ ಆಗಮಿಸಿದ ಭಕ್ತರಿಗೆ ಸಿದ್ಧಸಿಂಹಾಸನದ ಮೇಲೆ ಕುಳಿತು ದರ್ಶನಾಶೀರ್ವಾದ ನೀಡಿದರು.

ಕನ್ನಡಪ್ರಭ ವಾರ್ತೆ ನಾಗಮಂಗಲ

ತಾಲೂಕಿನ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಆಯುಧ ಪೂಜಾ ಕಾರ್ಯಕ್ರಮಗಳು ಧಾರ್ಮಿಕ ವಿಧಿ, ವಿಧಾನಗಳೊಂದಿಗೆ ಶುಕ್ರವಾರ ನೆರವೇರಿದವು.

ಶ್ರೀಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥಸ್ವಾಮೀಜಿ ಅವರು ಶ್ರೀಮಠದ ಕ್ಷೇತ್ರಾಧಿದೇವತೆಗಳಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಗೋ ಪೂಜೆ ಮತ್ತು ಶ್ರೀಮಠದ ವಾಹನಗಳಿಗೆ ಪೂಜೆ ನೆರವೇರಿಸಿದರು. ಬಳಿಕ ನೆರೆದಿದ್ದ ಭಕ್ತರಿಗೆ ಸ್ವತಃ ಶ್ರೀಗಳು ಪ್ರಸಾದ ನೀಡಿ ಆಶೀರ್ವದಿಸಿದರು.

ಶರನ್ನವರಾತ್ರಿ ಪೂಜೆ :

ಶರನ್ನವರಾತ್ರಿಯ ಪೂಜಾ ಕೈಂಕರ್ಯಗಳು ಸಹಸ್ರಾರು ಮಂದಿ ಭಕ್ತರ ಸಮ್ಮುಖದಲ್ಲಿ ಬಹಳ ವಿಜೃಂಭಣೆಯಿಂದ ನೆರವೇರಿದವು. ಕ್ಷೇತ್ರದ ಅಧಿದೇವತೆ ಶ್ರೀ ಕಾಲಭೈರವೇಶ್ವರಸ್ವಾಮಿ ಸೇರಿದಂತೆ ಶ್ರೀಮಠದ ಎಲ್ಲಾ ದೇವತೆಗಳಿಗೆ ವಿಶೇಷ ಪೂಜೆ ಸಲ್ಲಿಸಿದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಶ್ರೀಗಳು, ಜ್ವಾಲಾಪೀಠ ಪೂಜೆ ಮತ್ತು ಹೋಮ- ಹವನಾದಿ ಕಾರ್ಯಗಳನ್ನು ನೆರವೇರಿಸಿದರು.

ಬಳಿಕ ಚಿನ್ನದ ಕಿರೀಟಧಾರಣೆ ಮತ್ತು ಕಂಠಿ ಹಾರದೊಂದಿಗೆ ಸರ್ವಾಲಂಕೃತಗೊಂಡಿದ್ದ ಶ್ರೀಗಳು, ಸಿದ್ಧಸಿಂಹಾಸನ ಪೂಜೆ ಹಾಗೂ ಷೋಡಶೋಪಚಾರ ಪೂಜೆ ನೆರವೇರಿಸಿದರು. ನಂತರ ಆಗಮಿಸಿದ ಭಕ್ತರಿಗೆ ಸಿದ್ಧಸಿಂಹಾಸನದ ಮೇಲೆ ಕುಳಿತು ದರ್ಶನಾಶೀರ್ವಾದ ನೀಡಿದರು.

ಚಿಕ್ಕಬಳ್ಳಾಪುರ ಮತ್ತು ಕೋಲಾರ ಶಾಖಾಮಠದ ವತಿಯಿಂದ ಪೂಜಾ ಕಾರ್ಯಕ್ರಗಳು ನೆರವೇರಿದವು. ತಮಿಳುನಾಡು ಸೇರಿದಂತೆ ತಾಲೂಕಿನ ಚುಂಚನಹಳ್ಳಿ, ಚುಂಚನಹಳ್ಳಿ ಪಾಳ್ಯ, ಗಂಗಾಧರನಗರ, ಅಂಬಲಜೀರಹಳ್ಳಿ, ಭಕ್ತನಾಥಪುರ, ಇಂದಿರಾನಗರ, ಯಲಚಿಕೆರೆ, ಮುದಿಗೆರೆ ಗ್ರಾಮಸ್ಥರು ಪಾಲ್ಗೊಂಡಿದ್ದರು.

ಶರನ್ನವರಾತ್ರಿ ಉತ್ಸವಕ್ಕೆ ತೆರೆ :

ವಿಜಯದಶಮಿ ಮತ್ತು ಶಮಿ ಪೂಜೆಯೊಂದಿಗೆ ಕ್ಷೇತ್ರದಲ್ಲಿ ನಡೆದ ಶರನ್ನವರಾತ್ರಿ ಉತ್ಸವಕ್ಕೆ ಶನಿವಾರ ಸಂಜೆ ವಿಜೃಂಭಣೆಯ ತೆರೆಬಿದ್ದಿದ್ದು, ಈ ಧಾರ್ಮಿಕ ಕೈಂಕರ್ಯಕ್ಕೆ ಸಹಸ್ರಾರು ಮಂದಿ ಭಕ್ತರು ಸಾಕ್ಷಿಯಾದರು.

ವಿಜಯದಶಮಿ ಪ್ರಯುಕ್ತ ಶ್ರೀಮಠದ ಪೀಠಾಧ್ಯಕ್ಷ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ಸಾನಿಧ್ಯದಲ್ಲಿ ಶ್ರೀ ಕ್ಷೇತ್ರಾಧಿ ದೇವತೆಗಳಿಗೆ ಪೂಜೆ ಸಲ್ಲಿಸಲಾಯಿತು. ಕ್ಷೇತ್ರದಲ್ಲಿ ಮಠದ ಸಂಪ್ರದಾಯದಂತೆ ಹೋಮ- ಹವನಗಳು ಶ್ರೀಮಠದ ವಿವಿಧ ಶಾಖಾಮಠದ ಸ್ವಾಮೀಜಿಗಳ ಸಮ್ಮುಖದಲ್ಲಿ ನಡೆದವು. ನಂತರ ವಿಜಯದಶಮಿ ಪ್ರಯುಕ್ತ ಶ್ರೀ ಕಾಲಭೈರವೇಶ್ವರ ದೇವಾಲಯದ ಆವರಣದಲ್ಲಿ ಸ್ಥಾಪಿಸಲಾಗಿದ್ದ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸುವ ಮೂಲಕ ವಿಜಯದಶಮಿಯನ್ನು ಆಚರಿಸಲಾಯಿತು. ಶ್ರೀಮಠಕ್ಕೆ ಆಗಮಿಸಿದ ಭಕ್ತಾದಿಗಳಿಗೆ ಶ್ರೀಗಳು ಆಶೀರ್ವಚನ ನೀಡಿದರು.

ಶನಿವಾರ ಸಂಜೆ ಮಠದ ಆವರಣದಲ್ಲಿ ನಡೆದ ಶಮಿ ಪೂಜೆಗೂ ಮುನ್ನ ಚಿನ್ನದ ಕಿರೀಟ, ಕಂಠಿ ಹಾರ ಧರಿಸಿ ಸರ್ವಾಲಂಕೃತರಾಗಿದ್ದ ನಿರ್ಮಲಾನಂದನಾಥಶ್ರೀಗಳನ್ನು ಭಕ್ತರು ಪಲ್ಲಕ್ಕಿಯಲ್ಲಿ ಹೊತ್ತೊಯ್ದು ಬನ್ನಿಮರದವರೆಗೆ ಕರೆತಂದರು.

ಬಳಿಕ ಬನ್ನಿ ಮರಕ್ಕೆ ಪೂಜೆ ಸಲ್ಲಿಸಿದ ಶ್ರೀಗಳು ಬಾಳೆಕಂಬವನ್ನು ಕತ್ತರಿಸುವ ಮೂಲಕ ಶಮಿ ಪೂಜೆ ನೆರವೇರಿಸಿದರು. ಕಳೆದ ಒಂಭತ್ತು ದಿನಗಳಿಂದ ಶ್ರೀಮಠದಲ್ಲಿದ್ದ ನಡೆದ ಶರನ್ನಾವರಾತ್ರಿ ಉತ್ಸವ, ಅಕ್ಷರಾಭ್ಯಾಸ, ಜ್ವಾಲಾಪೀಠರೋಹಣ, ಷೋಡಶೋಪಚಾರ, ಆಯುಧಪೂಜೆ ಸೇರಿದಂತೆ ನವರಾತ್ರಿ ಉತ್ಸವದ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ತೆರೆ ಎಳೆಯಲಾಯಿತು.

ಕಾರ್ಯಕ್ರಮದಲ್ಲಿ ಮಠದ ಕಾರ್ಯದರ್ಶಿ ಪ್ರಸನ್ನನಾಥಸ್ವಾಮೀಜಿ ಸೇರಿದಂತೆ ನಾಡಿನ ವಿವಿಧ ಶಾಖಾ ಮಠಗಳ ಶ್ರೀಗಳು ಹಾಗೂ ಸಹಸ್ರಾರುಮಂದಿ ಭಕ್ತರು ಪಾಲ್ಗೊಂಡಿದ್ದರು.