ಸಾರಾಂಶ
ಬಳ್ಳಾರಿ: ಆಯುಧಪೂಜೆ ಹಾಗೂ ವಿಜಯದಶಮಿ ಹಿನ್ನೆಲೆಯಲ್ಲಿ ಗಣಿನಗರಿ ಬಳ್ಳಾರಿಯಲ್ಲಿ ಹಬ್ಬದ ಕಳೆಕಟ್ಟಿದ್ದು, ಪೂಜೆ ಸಾಮಗ್ರಿಗಳು, ಹೂವು, ಹಣ್ಣುಗಳ ಖರೀದಿ ಜೋರಾಗಿತ್ತು.
ನಗರದ ಶ್ರೀಕನಕ ದುರ್ಗಮ್ಮ ದೇವಸ್ಥಾನ ಬಯಲು, ಬೆಂಗಳೂರು ರಸ್ತೆ, ಗ್ರಹಂ ರಸ್ತೆ, ಬ್ರಾಹ್ಮಣಬೀದಿ, ಸಂಗಮ್ ವೃತ್ತ, ತೇರುಬೀದಿ, ಸಣ್ಣ ಮಾರ್ಕೆಟ್, ಹೂವಿನ ಬಜಾರ್, ಕಾಳಮ್ಮಬೀದಿ ಹಾಗೂ ಟ್ಯಾಂಕ್ ಬಂಡ್ ರಸ್ತೆಗಳಲ್ಲಿ ಸಾರ್ವಜನಿಕರು ಖರೀದಿಯಲ್ಲಿ ಗುರುವಾರ ತೊಡಗಿಸಿಕೊಂಡಿದ್ದರು.ಎಂದಿಗಿಂತಲೂ ಹೂವು, ಹಣ್ಣು ಹಾಗೂ ಪೂಜಾ ಸಾಮಗ್ರಿಗಳ ಬೆಲೆ ದುಬಾರಿಯಾಗಿದ್ದವು. ಬೂದು ಗುಂಬಳಕಾಯಿ, ಚೆಂಡುಹೂವು, ಮಲ್ಲಿಗೆಹೂವು, ಬಾಳೆದಿಂಡು ಬೆಲೆ ತೀವ್ರ ಏರಿಕೆಯಾಗಿದ್ದವು. ಆಯುಧಪೂಜೆಗೆ ಹೆಚ್ಚು ಬಳಕೆಯಾಗುವ ಬೂದು ಕುಂಬಳಕಾಯಿಗೆ ಹೆಚ್ಚಿನ ಬೇಡಿಕೆಯಿತ್ತು. ನೆರೆಯ ಆಂಧ್ರಪ್ರದೇಶದಿಂದ ನೂರಾರು ಬೂದು ಕುಂಬಳಕಾಯಿಯನ್ನು ಮಾರಾಟಕ್ಕೆ ತರಲಾಗಿತ್ತು.
ಆಯುಧ ಪೂಜೆಗಾಗಿ ವಾಹನಗಳಿಗೆ ಪೂಜೆ ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳುತ್ತಿರುವುದು ನಗರದಲ್ಲಿ ಕಂಡು ಬಂತು. ಬೈಕು, ಕಾರುಗಳು ಗ್ಯಾರೇಜ್‌ಗಳ ಬಳಿ ಸಾಲುಗಟ್ಟಿ ನಿಂತಿದ್ದವು. ಹಬ್ಬಕ್ಕಾಗಿ ಸಿಹಿ ತಿಂಡಿಗಳ ಖರೀದಿಗಾಗಿ ಬೇಕರಿಗಳ ಮುಂದೆ ಜನರು ಮುಗಿಬಿದ್ದಿದ್ದರು. ಸೋನ್ ಪಾಪಡಿ, ಮೈಸೂರು ಪಾಕ್, ಬೂಂದಿಲಾಡು, ಬೇಸನ್ ಲಾಡು, ಜಿಲೇಬಿ, ಖಾಜೂ ಬರ್ಫಿಯನ್ನು ಜನರು ಖರೀದಿಸಿದರು.ದಸರಾ ಹಿನ್ನೆಲೆಯಲ್ಲಿ ನಗರದ ಶ್ರೀಕನಕ ದುರ್ಗಮ್ಮ ಸೇರಿದಂತೆ ವಿವಿಧ ದೇವಸ್ಥಾನಗಳನ್ನು ವಿವಿಧ ಪುಷ್ಪ, ಪತ್ರೆಗಳಿಂದ ಅಲಂಕೃತಗೊಳಿಸಲಾಗಿದೆ. ನಗರದ ಅಧಿದೇವತೆ ಶ್ರೀಕನಕ ದುರ್ಗಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆಯುತ್ತಿದ್ದು, ನಿತ್ಯ ದೇವಿಮೂರ್ತಿಗೆ ಅಲಂಕಾರ ಮಾಡಲಾಗುತ್ತಿದೆ. ನಗರ ಸೇರಿದಂತೆ ಜಿಲ್ಲಾದ್ಯಂತ ಹಬ್ಬದ ಸಡಗರ ಕಂಡು ಬಂದಿದೆ. ಮಹಿಳೆಯರು ದೇವಿ ಪೂಜೆಯಲ್ಲಿ ತೊಡಗಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಶ್ರೀದೇವಿ ಪುರಾಣ ಪ್ರವಚನ ನಡೆಯುತ್ತಿದ್ದು, ವಿಜಯದಶಮಿ ದಿನದಂದು ಮಂಗಳವಾಗಲಿದೆ.