ಆಯುರ್ವೇದಗೆ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಹೆಚ್ಚು ಬೇಡಿಕೆ

| Published : Nov 06 2024, 11:51 PM IST / Updated: Nov 06 2024, 11:52 PM IST

ಆಯುರ್ವೇದಗೆ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಹೆಚ್ಚು ಬೇಡಿಕೆ
Share this Article
  • FB
  • TW
  • Linkdin
  • Email

ಸಾರಾಂಶ

Ayurveda is in high demand in western countries

-ಪ್ರತಿಜ್ಞಾವಿಧಿ ಸ್ವೀಕಾರ ಸಮಾರಂಭದಲ್ಲಿ ಶಾಸಕ ಎಂ.ಚಂದ್ರಪ್ಪ ಅಭಿಮತ

ಕನ್ನಡಪ್ರಭವಾರ್ತೆ, ಚಿತ್ರದುರ್ಗ

ಸಾವಿರಾರು ವರ್ಷಗಳಿಂದಲೂ ರೂಢಿಯಲ್ಲಿರುವ ಆಯುರ್ವೇದಿಕ್‍ಗೆ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಹೆಚ್ಚಿನ ಬೇಡಿಕೆಯಿದೆ ಎಂದು ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ, ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ಹೇಳಿದರು.

ದೇವರಾಜ್ ಅರಸ್ ಶಿಕ್ಷಣ ಸಂಸ್ಥೆ ಅಡಿಯಲ್ಲಿ ನಡೆಯುತ್ತಿರುವ ಪ್ರಕೃತಿ ಆಯುರ್ವೇದಿಕ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಪ್ರಥಮ ವರ್ಷದ ವಿದ್ಯಾರ್ಥಿಗಳ ಶಿಷ್ಯೋಪನಯನ ಸಂಸ್ಕಾರ ಮತ್ತು ಪ್ರತಿಜ್ಞಾ ವಿಧಿ ಸ್ವೀಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು ವೈದ್ಯಕೀಯ ಸೇವೆ ಅತ್ಯಂತ ಅಮೂಲ್ಯವಾದುದು. ಸಮಾಜಕ್ಕೆ ನಿಮ್ಮ ಸೇವೆ ಬೇಕು. ಹಳೆಯ ವೈದ್ಯಕೀಯ ಕಾಲೇಜುಗಳಲ್ಲಿ ಸಿಗುವಂತ ಮೂಲಭೂತ ಸೌಲಭ್ಯಗಳನ್ನು ಪ್ರಥಮ ವರ್ಷದಲ್ಲಿಯೇ ನಿಮಗೆ ಒದಗಿಸಿದ್ದೇವೆ. ಮನಸ್ಸನ್ನು ಬೇರೆ ಕಡೆ ಹರಿಸದೆ ಶ್ರದ್ದೆಯಿಂದ ವೈದ್ಯಕೀಯ ಶಿಕ್ಷಣ ಪಡೆದು ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಶಾಸಕ ಡಾ.ಎಂ.ಚಂದ್ರಪ್ಪ ಕರೆ ನೀಡಿದರು.

ಎಂಬಿಬಿಎಸ್ ಸೀಟು ಪಡೆಯಲು ಕನಿಷ್ಠ ಎರಡು ಕೋಟಿ ರು.ಪಾವತಿಸಬೇಕು. ಆದರೆ, ಆಯುರ್ವೇದಿಕ್ ವೈದ್ಯಕೀಯ ಪದ್ಧತಿಯಲ್ಲಿ ನೀವುಗಳು ಅಷ್ಟೊಂದು ಶುಲ್ಕ ವಾವತಿಸಬೇಕಿಲ್ಲ. ಸಿಕ್ಕಿರುವ ಅವಕಾಶವನ್ನು ಸದುಪಯೋಗಪಡಿಸಿಕೊಂಡು ತಂದೆ-ತಾಯಿ, ಗುರು-ಹಿರಿಯರು, ಓದಿದ ಶಿಕ್ಷಣ ಸಂಸ್ಥೆಗೆ ಕೀರ್ತಿ ತನ್ನಿ ಎಂದು ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ಸಿಇಒ ಎಂ.ಸಿ.ರಘುಚಂದನ್ ಮಾತನಾಡಿ, ನಲವತ್ತು ವರ್ಷಗಳ ಹಿಂದೆ ಚಿಕ್ಕದಾಗಿ ಆರಂಭಗೊಂಡ ದೇವರಾಜ್ ಅರಸ್ ಶಿಕ್ಷಣ ಸಂಸ್ಥೆ ಈಗ ದೊಡ್ಡ ಹೆಮ್ಮರವಾಗಿ ಬೆಳೆದಿರುವುದರ ಹಿಂದೆ ಸಂಸ್ಥಾಪಕ ಡಾ.ಎಂ.ಚಂದ್ರಪ್ಪನವರ ಪರಿಶ್ರಮವಿದೆ. ಈ ಸಂಸ್ಥೆಯಲ್ಲಿ ಬಿಇಡಿ. ನರ್ಸಿಂಗ್, ಬಿಕಾಂ, ಬಿಸಿಎಂ. ಎಂಬಿಎ, ಫಾರ್ಮಸಿ ಶಿಕ್ಷಣ ನೀಡಲಾಗುತ್ತಿದೆ. ಆಯುರ್ವೇದಿಕ್ ಅತ್ಯಂತ ಪುರಾತನ ಪದ್ಧತಿ. ಶಿಕ್ಷಣದ ನಂತರ ವೈದ್ಯರುಗಳಾದ ಮೇಲೆ ಸಮಾಜಕ್ಕೆ ನಿಮ್ಮ ಸೇವೆ ಅತ್ಯವಶ್ಯಕ ಎಂದು ಹೇಳಿದರು.

ಜಿಲ್ಲಾ ಆಯುಷ್ ವಿಭಾಗದ ಡಿಎಒ ಡಾ.ಚಂದ್ರಕಾಂತ್ ಮಾತನಾಡಿ, ಆಯುರ್ವೇದಿಕ್ ಕಾಲೇಜಿಗೆ ದಾಖಲಾತಿ ಪಡೆದಾಕ್ಷಣ ವೈದ್ಯರುಗಳಾಗಿದ್ದೇವೆಂದುಕೊಳ್ಳಬೇಡಿ. ಐದು ವರ್ಷಗಳ ನಂತರ ನಿಮಗೆ ಮತ್ತೆ ಯಾರು ಹೇಳಿಕೊಡುವುದಿಲ್ಲ. ಮುಂದೆ ಪಿಜಿ ಶಿಕ್ಷಣ ಪಡೆಯಬೇಕಾಗುತ್ತದೆ. ಹಾಗಾಗಿ, ಆಯುರ್ವೇದಿಕ್ ಶಿಕ್ಷಣವನ್ನು ಚೆನ್ನಾಗಿ ಪಡೆದು ಈ ಪದ್ಧತಿಯನ್ನು ಉಳಿಸಿ ಬೆಳೆಸುವಂತೆ ವಿದ್ಯಾರ್ಥಿಗಳಿಗೆ ತಿಳಿಸಿದರು.

ಪ್ರಾಂಶುಪಾಲ ಡಾ.ಎಸ್.ಬಿ.ನವಾಝ್, ಸಂಸ್ಥೆಯ ವಿವಿಧ ವಿಭಾಗಗಳ ಪ್ರಾಂಶುಪಾಲರು ಹಾಗೂ ಸಿಬ್ಬಂದಿಯವರು ಪ್ರತಿಜ್ಞಾ ವಿಧಿ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿದ್ದರು.

------------

ಪೋಟೋ: ಪ್ರಕೃತಿ ಆಯುರ್ವೇದಿಕ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಪ್ರಥಮ ವರ್ಷದ ವಿದ್ಯಾರ್ಥಿಗಳ ಶಿಷ್ಯೋಪನಯನ ಸಂಸ್ಕಾರ ಮತ್ತು ಪ್ರತಿಜ್ಞಾ ವಿಧಿ ಸ್ವೀಕಾರ ಸಮಾರಂಭವನ್ನು ಶಾಸಕ ಡಾ.ಎಂ.ಚಂದ್ರಪ್ಪ ಉದ್ಘಾಟಿಸಿದರು.

--------

ಫೋಟೋ ಫೈಲ್ ನೇಮ್- 6 ಸಿಟಿಡಿ5