ರೋಣ ಪಟ್ಟಣದ ಆರ್‌ಜಿಇಎಸ್ ಸಂಸ್ಥೆಯ ರಾಜೀವಗಾಂಧಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಹಾಗೂ ಸ್ನಾತಕೋತ್ತರ ಸಂಶೋಧನಾ ಕೇಂದ್ರ ವತಿಯಿಂದ 2024-25ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳಿಗಾಗಿ ಜರುಗಿದ ಶಿಷ್ಯೋಪನಯನ ಸಂಸ್ಕಾರ ಕಾರ್ಯಕ್ರಮ ನಡೆಯಿತು.

ರೋಣ:

ಆಯುರ್ವೇದ ವಿಜ್ಞಾನ ಕಲಿಕೆಗೆ ಅಂತ್ಯ, ಆಳ, ಅಳತೆಯಿಲ್ಲ, ಇದೊಂದು ವಿಶಾಲವಾದ ಸಮುದ್ರದಂತಿದೆ. ವಿದ್ಯಾರ್ಥಿಗಳು ಶ್ರದ್ಧೆ, ನಿಷ್ಠೆ, ಪರಿಶ್ರಮದಿಂದ ಕಲಿಕೆಯಲ್ಲಿ ತೊಡಗಿದಲ್ಲಿ ಮಾತ್ರ ಯಶಸ್ಸು ಸುಲಭವಾಗುವುದು ಎಂದು ಗಂಗಾವತಿ ಸ್ಫೂರ್ತಿ ಆಯುರ್ವೇದಿಕ ಕಾಲೇಜ್ ನಿರ್ದೇಶಕ ಡಾ. ಉಮೇಶ ಪುರದ ಹೇಳಿದರು.

ಪಟ್ಟಣದ ಆರ್‌ಜಿಇಎಸ್ ಸಂಸ್ಥೆಯ ರಾಜೀವಗಾಂಧಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಹಾಗೂ ಸ್ನಾತಕೋತ್ತರ ಸಂಶೋಧನಾ ಕೇಂದ್ರ ವತಿಯಿಂದ 2024-25ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳಿಗಾಗಿ ಜರುಗಿದ ಶಿಷ್ಯೋಪನಯನ ಸಂಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಆಯುರ್ವೇದಕ್ಕೆ ಪುರಾತನ ಇತಿಹಾಸವಿದೆ. ಆಯುರ್ವೇದ ಕಲಿಕೆಯೂ ಪುರಾತನ ಕಾಲದಲ್ಲಿ ಗುರುಕುಲ ಮಾದರಿಯಲ್ಲಿ ಇತ್ತು. ಕಲಿಕೆಗೆ ತೆರಳುವ ವಿದ್ಯಾರ್ಥಿಗೆ ಶಿಷ್ಯೋಪನಯನ ಸಂಸ್ಕಾರ ಜರುಗುತ್ತಿತ್ತು. ಈ ಪದ್ಧತಿಯೂ ಇಂದಿಗೂ ಆಚರಣೆಯಲ್ಲಿದೆ ಎಂಬುದಕ್ಕೆ ರಾಜೀವ ಗಾಂಧಿ ಆಯುರ್ವೇದ ಕಾಲೇಜನಲ್ಲಿ ಜರುಗಿದ ಶಿಷ್ಯೋಪನಯನ ಸಂಸ್ಕಾರ ಕಾರ್ಯಕ್ರಮ ಸಾಕ್ಷಿಯಾಗಿದೆ. ವಿದ್ಯಾರ್ಥಿಗಳು ಸವಾಲುಗಳನ್ನು ಧೈರ್ಯವಾಗಿ, ಧನಾತ್ಮಕವಾಗಿ ಎದುರಿಸಿದಲ್ಲಿ ಯಶಸ್ಸು ಸುಲಭವಾಗುವುದು. ಶ್ರದ್ಧೆ, ನಿಷ್ಠೆ, ಭಕ್ತಿಯಿಂದ ಅಧ್ಯಯನ ಮಾಡುವುದು ಬಹು ಮುಖ್ಯವಾಗಿದೆ. ವೈದ್ಯಕೀಯವು ಸಮಾಜದಲ್ಲಿ ಪಾವಿತ್ರ್ಯ ಉಳಿಸಿಕೊಂಡಿದೆ. ವೈದ್ಯ ವೃತ್ತಿಯನ್ನು ಸಮಾಜ ಅತ್ಯಂತ ಗೌರವಯುತವಾಗಿ ನೋಡಿಕೊಳ್ಳುತ್ತಿದೆ. ಆಯುರ್ವೇದ ಬೆಳೆಸಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಶ್ರಮ, ಆಸಕ್ತಿ ಅತಿ ಮುಖ್ಯವಾಗಿದೆ ಎಂದರು.

ಮಾನವ ಜೀವನ ಚಕ್ರದ ವಿವಿಧ ಹಂತಗಳನ್ನು ಗುರುತಿಸಲು ಒಬ್ಬ ವ್ಯಕ್ತಿಯು ತನ್ನ ಇಡೀ ಜೀವನದಲ್ಲಿ ಅಳವಸಿಕೊಳ್ಳಬೇಕಾದ ಸಂಸ್ಕಾರಗಳಲ್ಲಿ ಗರ್ಭದಾನ, ಪಂಸವನ, ಸೀಮಂತ ಸಂಸ್ಕಾರ, ಜಾತಕರ್ಮ ಸಂಸ್ಕಾರ, ನಾಮಕರಣ, ನಿಷ್ಕ್ರಮಣ ಸಂಸ್ಕಾರ, ಅನ್ನಪ್ರಾಶನ, ಚೂಡಾಕರ್ಮ, ಕರ್ಣ ವೇದ, ವಿದ್ಯಾನಂದ ಸಂಸ್ಕಾರ, ಉಪನಯನ, ಸಮಾವರ್ದ ಸಂಸ್ಕಾರ, ವಿವಾಹ ಸಂಸ್ಕಾರ, ವಾನಪ್ರಸ್ತ, ಪಂಚಯಜ್ಞ, ಅಂತ್ಯಾದ ಸಂಸ್ಕಾರ ಹೀಗೆ 16 ಸಂಸ್ಕಾರಗಳನ್ನು ಜೀವನದಲ್ಲಿ ಪಾಲಿಸಬೇಕಾಗಿದೆ ಎಂದು ಹೇಳಿದರು. ಸಂಸ್ಕಾರವು ಒಂದು ಮಹತ್ವದ ತಿರುವಿನಂತೆ ಕಾರ್ಯನಿರ್ವಹಿಸುತ್ತದೆ. ಇದನ್ನು ಮಂಗಳಕರ ಸಂದರ್ಭದಂತೆ ಆಚರಿಸಲಾಗುತ್ತದೆ. ಈ ಸಂಸ್ಕಾರಗಳನ್ನು ಅಭ್ಯಾಸ ಮಾಡುವುದರಿಂದ ಪರಿಣಾಮಕಾರಿತ್ವದೊಂದಿಗೆ ಶ್ರೇಷ್ಠ ವ್ಯಕ್ತಿತ್ವ ವೃದ್ಧಿಯಾಗುವುದು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗ ಶಿಷ್ಯೋಪನಯನ ಸಂಸ್ಕಾರ ಅತಿ ಮುಖ್ಯವಾಗಿದೆ ಎಂದರು.

ಮಿಥುನ ಜಿ. ಪಾಟೀಲ ಮಾತನಾಡಿ, ಸಾಧಕರನ್ನು ಮಾದರಿಯನ್ನಾಗಿ ತೆಗೆದುಕೊಂಡು, ಸಾಧಕರ ಬದುಕು, ಸಾಧನೆ, ಶ್ರಮ, ಯಶಸ್ಸು ಅರಿತು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಸಾಧನೆ ಸುಲಭವಾಗುತ್ತದೆ. ವಿದ್ಯಾರ್ಥಿ ದಿಸೆಯಲ್ಲಿ ಪರಿಶ್ರಮದಿಂದ ಜ್ಞಾನಾರ್ಜನೆ ಮಾಡಬೇಕು. ವಿದ್ಯಾರ್ಥಿಗಳ ಚಿತ್ತವು ಸದಾ ಅಭ್ಯಾಸದ ಕಡೆಗೆ ಇರಬೇಕು ಎಂದರು.

ಕಾರ್ಯಕ್ರಮದಲ್ಲಿ ಡಾ. ಕೆ.ಬಿ. ದನ್ನೂರ, ಪ್ರಾಚಾರ್ಯ ಡಾ. ಐ.ಬಿ. ಕೊಟ್ಟೂರಶೆಟ್ಟರ, ಡಾ. ಪರಶುರಾಮ ತುರಬಿನ ಉಪಸ್ಥಿತರಿದ್ದರು. ಡಾ. ಶಾರ್ವರಿ ಕುಷ್ಟಗಿ ಕಾರ್ಯಕ್ರಮ ನಿರೂಪಿಸಿದರು. ಡಾ. ಶಶಿಕಲಾ ಬಾನಿ ಸ್ವಾಗತಿಸಿದರು. ರಿಯಾಜ ಅಹ್ಮದ ಕಣವಿ ವಂದಿಸಿದರು.