ಅಯ್ಯಪ್ಪನ ಅಪ್ಪಣೆಯಂತೆ ಮಾಲೆ ಧರಿಸಿದ ಬೆಳ್ಳಿಗನೂಡು ಶಫೀವುಲ್ಲಾ!

| Published : Jan 11 2025, 12:48 AM IST

ಅಯ್ಯಪ್ಪನ ಅಪ್ಪಣೆಯಂತೆ ಮಾಲೆ ಧರಿಸಿದ ಬೆಳ್ಳಿಗನೂಡು ಶಫೀವುಲ್ಲಾ!
Share this Article
  • FB
  • TW
  • Linkdin
  • Email

ಸಾರಾಂಶ

ತನ್ನ ಆಸೆಯಂತೆ ಹೊತ್ತ ಹರಕೆಗಳು ಈಡೇರಿವೆ ಎಂದು ಮುಸ್ಲಿಂ ಸಮುದಾಯದ ವ್ಯಕ್ತಿಯೊಬ್ಬರು ಮಾಲೆ ಧರಿಸಿ ಹರಕೆ ತೀರಿಸುವ ಮೂಲಕ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತರಾಗಿ ಜಿಲ್ಲೆಯಲ್ಲಿ ಗಮನ ಸೆಳೆದಿದ್ದಾರೆ.

ದಾವಣಗೆರೆ: ತನ್ನ ಆಸೆಯಂತೆ ಹೊತ್ತ ಹರಕೆಗಳು ಈಡೇರಿವೆ ಎಂದು ಮುಸ್ಲಿಂ ಸಮುದಾಯದ ವ್ಯಕ್ತಿಯೊಬ್ಬರು ಮಾಲೆ ಧರಿಸಿ ಹರಕೆ ತೀರಿಸುವ ಮೂಲಕ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತರಾಗಿ ಜಿಲ್ಲೆಯಲ್ಲಿ ಗಮನ ಸೆಳೆದಿದ್ದಾರೆ.

ಚನ್ನಗಿರಿ ತಾಲೂಕಿನ ಬೆಳ್ಳಿಗನೂಡು ಗ್ರಾಮದ ವಾಸಿ, ಗ್ರಾಪಂ ಗ್ರಂಥಾಲಯ ಮೇಲ್ವಿಚಾರಕ ಶಫೀವುಲ್ಲಾ ಅಯ್ಯಪ್ಪಸ್ವಾಮಿ ಭಕ್ತರಾಗಿರುವ ವ್ಯಕ್ತಿ. ಅನೇಕ ವರ್ಷಗಳಿಂದಲೂ ಶ್ರೀ ಅಯ್ಯಪ್ಪ ಸ್ವಾಮಿ ಪರಮ ಭಕ್ತರಾಗಿ ಭಾವೈಕ್ಯತೆ ಸಂದೇಶ ಸಾರುತ್ತಿದ್ದಾರೆ. ಆ ಮೂಲಕ ಇತರರಿಗೂ ಪ್ರೇರಣೆ ಆಗಿದ್ದಾರೆ.

ಶಫೀವುಲ್ಲಾ ಬೆಳ್ಳಿಗನೂಡು ಗ್ರಾಪಂನಲ್ಲಿ ಗ್ರಂಥಾಲಯದ ಮೇಲ್ವಿಚಾರಕರಾಗಿ 18 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಅಯ್ಯಪ್ಪ ಸ್ವಾಮಿ ಮೇಲೆ ಅಪಾರ ಭಕ್ತಿ ಹೊಂದಿ, ಅನೇಕ ವರ್ಷದಿಂದ ಮಾಲೆ ಧರಿಸಿ, ಹರಕೆ ತೀರಿಸುತ್ತಿದ್ದಾರೆ. ಸಾಮರಸ್ಯದ ಬಗ್ಗೆ ಮಾತಾಡುವುದಲ್ಲ, ಅದನ್ನು ಕೃತಿಗೆ ತರಬೇಕು ಎಂಬುದಕ್ಕೆ ಸಾಕ್ಷಿಯೂ ಆಗಿದ್ದಾರೆ.

ಮಾಲೆ ಏಕೆ?:

ಕನಸಿನಲ್ಲಿ ಪದೇಪದೇ ಅಯ್ಯಪ್ಪ ಸ್ವಾಮಿ ದರ್ಶನ ನೀಡಿ, ಶಬರಿಮಲೈಗೆ ಬರುವಂತೆ ಶಫೀವುಲ್ಲಾಗೆ ಅಪ್ಪಣೆ ನೀಡಿದ್ದರಂತೆ. ಆರ್ಥಿಕವಾಗಿ ಕುಗ್ಗಿದ್ದ ನನಗೆ ಆರಂಭದಲ್ಲಿ ಸ್ನೇಹಿತರು ಹಣ ಹೊಂದಿಸಿ, ಶಬರಿಮಲೈಗೆ ಕರೆದುಕೊಂಡು ಹೋಗಿದ್ದರು. ಆಗಿನಿಂದಲೂ ಅವರು ಅಯ್ಯಪ್ಪ ಭಕ್ತನಾಗಿದ್ದೇನೆ ಎಂದು ಶಫೀವುಲ್ಲಾ ಹೇಳುತ್ತಾರೆ. ಜೀವನದಲ್ಲಿ ಉತ್ತಮ ಬೆಳವಣಿಗೆಗಳಾದ ಪರಿಣಾಮ ತಮ್ಮ ಸ್ನೇಹಿತರೊಂದಿಗೆ ಮಾಲೆಧರಿಸಿ ಶಬರಿಮಲೈಗೆ ತೆರಳಿ ತಪ್ಪದೇ ದರ್ಶನ ಪಡೆಯುವ ಭಕ್ತರಾಗಿದ್ದಾರೆ.

ಪ್ರತಿ ವರ್ಷ ಶಫೀವುಲ್ಲಾ ಮಾಲೆ ಧರಿಸಿ, ಸ್ನೇಹಿತರೊಂದಿಗೆ ಶಬರಿಮಲೈಗೆ ತೆರಳುತ್ತಾರೆ. ಜಾತಿ, ಧರ್ಮಬೇಧ ಮರೆತು ಸರದಿ ಸಾಲಿನಲ್ಲಿ ನಿಂತು ದರ್ಶನ ಪಡೆದು, ಭಕ್ತಿ ಸಮರ್ಪಿಸುತ್ತಿದ್ದಾರೆ. ಅಯ್ಯಪ್ಪ ಸ್ವಾಮಿ ಮೇಲೆ ಶಫೀವುಲ್ಲಾ ಭಕ್ತಿಭಾವಕ್ಕೆ ಸಾರ್ವಜನಿಕರಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

- - - -10ಕೆಡಿವಿಜಿ42, 43: