ಅರ್ಧದಲ್ಲೇ ಮುಗಿದ ಅಯ್ಯಪ್ಪ ವ್ರತ!

| Published : Dec 28 2024, 12:45 AM IST

ಸಾರಾಂಶ

ಕಳೆದ ಭಾನುವಾರ ರಾತ್ರಿ ಅಯ್ಯಪ್ಪಸ್ವಾಮಿ ಪೂಜೆ ಮಾಡಿ ಸನ್ನಿಧಾನದಲ್ಲಿ ನಿದ್ರೆಗೆ ಜಾರಿದ ಅಯ್ಯಪ್ಪ ಮಾಲಾಧಾರಿಗಳು ಮಧ್ಯರಾತ್ರಿ ಸಿಲಿಂಡರ್‌ ಗ್ಯಾಸ್‌ ಸೋರಿಕೆಯಾದ ಪರಿಣಾಮ ಸನ್ನಿಧಾನದಲ್ಲಿದ್ದ 9 ಜನರು ಗಾಯಗೊಂಡು ಆಸ್ಪತ್ರೆ ಸೇರಿದ್ದರು.

ಅಜೀಜಅಹ್ಮದ ಬಳಗಾನೂರ

ಹುಬ್ಬಳ್ಳಿ

ಅಂದುಕೊಂಡಂತೆ ಎಲ್ಲವೂ ಸರಿಯಾಗಿ ನಡೆದಿದ್ದರೆ ನಾಳೆ (ಡಿ. 28) ನಗರದಲ್ಲಿ 101 ಕುಂಭಗಳ ಮೆರವಣಿಗೆ, ಅಯ್ಯಪ್ಪಸ್ವಾಮಿ ಭಾವಚಿತ್ರ ಹೊತ್ತ ಜೋಡೆತ್ತುಗಳ ಅದ್ಧೂರಿ ಮೆರವಣಿಗೆ, ಡಿ. 29ರಂದು ಬೆಳಗ್ಗೆ ಮಹಾಪೂಜೆ, ಎರಡು ದಿನ ನಿರಂತರ ಅನ್ನಪ್ರಸಾದ, ಜ. 8ರಂದು ಇರುಮುಡಿ ಕಟ್ಟುವ ಕಾರ್ಯ ನಡೆಯಬೇಕಿತ್ತು. ಆದರೆ, ಆ ಬೆಂಕಿ ಅವಗಢ ಅರ್ಧದಲ್ಲೆ ಅಯ್ಯಪ್ಪನ ವೃತ ಮುಕ್ತಾಯಗೊಳ್ಳುವಂತೆ ಮಾಡಿದೆ!

ಅದುವೇ, ಕಳೆದ ಭಾನುವಾರ ರಾತ್ರಿ ಅಯ್ಯಪ್ಪಸ್ವಾಮಿ ಪೂಜೆ ಮಾಡಿ ಸನ್ನಿಧಾನದಲ್ಲಿ ನಿದ್ರೆಗೆ ಜಾರಿದ ಅಯ್ಯಪ್ಪ ಮಾಲಾಧಾರಿಗಳು ಮಧ್ಯರಾತ್ರಿ ಸಿಲಿಂಡರ್‌ ಗ್ಯಾಸ್‌ ಸೋರಿಕೆಯಾದ ಪರಿಣಾಮ ಸನ್ನಿಧಾನದಲ್ಲಿದ್ದ 9 ಜನರು ಗಾಯಗೊಂಡು ಆಸ್ಪತ್ರೆ ಸೇರಿದ್ದರು. ಇವರಲ್ಲಿ ಈಗಾಗಲೇ ನಾಲ್ವರು ಮೃತಪಟ್ಟಿದ್ದು, ಇನ್ನೂ ನಾಲ್ವರು ಜೀವನ್ಮರಣದ ಹೋರಾಟದಲ್ಲಿ ದಿನಗಳೆಯುತ್ತಿದ್ದಾರೆ.

ಉಣಕಲ್ಲ ಗ್ರಾಮದ ಸಾಯಿನಗರದ ಅಚ್ಚವ್ವನ ಕಾಲನಿಯಲ್ಲಿ ಕಳೆದ 20 ವರ್ಷಗಳಿಂದ ಅಯ್ಯಪ್ಪ ಮಾಲಾಧಾರಿಗಳು ತಿಂಗಳುಗಳ ಕಾಲ ವ್ರತ ಆಚರಿಸಿ ಶಬರಿಮಲೆ ಯಾತ್ರೆ ಕೈಗೊಂಡಿದ್ದಾರೆ. 21ನೇ ವರ್ಷದ ಶಬರಿಮಲೆ ಯಾತ್ರೆಗೆ ಬೇಕಾದ ಎಲ್ಲ ಸಿದ್ಧತೆಗಳನ್ನೂ ಮಾಡಿಕೊಂಡಿದ್ದರು.

ಸಕಲ ಸಿದ್ಧತೆಯಾಗಿತ್ತು:

ಉಣಕಲ್ಲಿನಲ್ಲಿ ಸಂಕಣ್ಣವರ ಓಣಿಯಲ್ಲಿ 12 ಜನರನ್ನು ಹೊಂದಿರುವ ಸನ್ನಿಧಾನವಿದ್ದರೆ, ಅಚ್ಚವ್ವನ ಕಾಲನಿಯಲ್ಲಿ 14 ಅಯ್ಯಪ್ಪ ಮಾಲಾಧಾರಿಗಳನ್ನು ಹೊಂದಿದ ಸನ್ನಿಧಾನವಿತ್ತು. ಇರುಮುಡಿ ಹೊತ್ತು ಶಬರಿಮಲೆ ಯಾತ್ರೆ ಮಾಡಬೇಕಾಗಿದ್ದ ಅಯ್ಯಪ್ಪ ಮಾಲಾಧಾರಿಗಳು ಈ ದುರ್ಘಟನೆಯಿಂದ ಮಸಣದ ಯಾತ್ರೆ ಮಾಡುತ್ತಿದ್ದಾರೆ. ಇನ್ನು ಇವರೊಂದಿಗೆ ಮಾಲೆ ಹಾಕಿದ್ದ ಐವರು ಮಾಲಾಧಾರಿಗಳು ಈ ಘಟನೆಯಿಂದಾಗಿ ಮನನೊಂದು ತಮ್ಮ ಮಾಲೆಗಳನ್ನು ತ್ಯಜಿಸಿದ್ದಾರೆ.

ಕಳೆದ 20 ವರ್ಷಗಳಿಂದ ಇಲ್ಲಿ ಅಯ್ಯಪ್ಪನ ಸನ್ನಿಧಾನ ನಿರ್ಮಿಸಲಾಗಿದೆ. ನೂರಾರು ಜನರು ಮಾಲೆ ಹಾಕಿದ್ದಾರೆ. ಈ ರೀತಿ ಒಮ್ಮೆಯೂ ನಡೆದಿರಲಿಲ್ಲ ಎಂದು ಗಜಾನನ ಗುರುಸ್ವಾಮಿ ಹೇಳಿದರು.ನಾನು ಎಲ್ಲಿಯೇ ಹೋಗಲಿ ಎಲ್ಲ ಅಯ್ಯಪ್ಪ ಮಾಲಾಧಾರಿಗಳಿಗೆ ಅಗತ್ಯ ಜಾಗೃತಿ ವಹಿಸುವಂತೆ ಮನವಿ ಮಾಡಿಕೊಳ್ಳುತ್ತೇನೆ. ಈ ಘಟನೆ ಭಕ್ತರಲ್ಲಿ ತುಂಬಾ ನೋವು ತಂದಿದೆ ಎಂದು ಆನಂದ ಗುರುಸ್ವಾಮಿ ಹೇಳಿದರು.