ಕೃಷಿ ವಿವಿಯಲ್ಲಿ ರಾತ್ರೋರಾತ್ರಿ ಅಯ್ಯಪ್ಪಸ್ವಾಮಿ ಮೂರ್ತಿ ಪ್ರತಿಷ್ಠಾಪನೆ

| Published : Jan 03 2025, 12:33 AM IST

ಕೃಷಿ ವಿವಿಯಲ್ಲಿ ರಾತ್ರೋರಾತ್ರಿ ಅಯ್ಯಪ್ಪಸ್ವಾಮಿ ಮೂರ್ತಿ ಪ್ರತಿಷ್ಠಾಪನೆ
Share this Article
  • FB
  • TW
  • Linkdin
  • Email

ಸಾರಾಂಶ

ಕೃಷಿ ವಿವಿಯ ಆವರಣದಲ್ಲಿರುವ ಮಾವಿನ ತೋಟದ ಒಂದು ಮೂಲೆಯಲ್ಲಿ ಅಪರಿಚಿತರು ಮಂಗಳವಾರ ರಾತ್ರಿ ಅಯ್ಯಪ್ಪಸ್ವಾಮಿ ಮತ್ತು ನಾಗದೇವರ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದಾರೆ.‌ ಇದು ಬುಧವಾರ ಬೆಳಕಿಗೆ ಬಂದಿದೆ.

ಧಾರವಾಡ: ಇಲ್ಲಿಯ ಕೃಷಿ ವಿವಿ ಆವರಣದಲ್ಲಿ ರಾತ್ರೋ ರಾತ್ರಿ ಅಪರಿಚಿತರಿಂದ ಅಯ್ಯಪ್ಪಸ್ವಾಮಿ ಮೂರ್ತಿ ಪ್ರತಿಷ್ಠಾಪನೆಯಿಂದ ಗೊಂದಲ ಸೃಷ್ಟಿಯಾಗಿದೆ. ಕೃಷಿ ವಿವಿಯ ಆವರಣದಲ್ಲಿರುವ ಮಾವಿನ ತೋಟದ ಒಂದು ಮೂಲೆಯಲ್ಲಿ ಅಪರಿಚಿತರು ಮಂಗಳವಾರ ರಾತ್ರಿ ಅಯ್ಯಪ್ಪಸ್ವಾಮಿ ಮತ್ತು ನಾಗದೇವರ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದಾರೆ.‌ ಇದು ಬುಧವಾರ ಬೆಳಕಿಗೆ ಬಂದಿದೆ. ಈ ಸುದ್ದಿ ಹರಡುತ್ತಿದ್ದಂತೆಯೇ ನೂರಾರು ಅಯ್ಯಪ್ಪ ಭಕ್ತರು, ಮಾಲಾಧಾರಿಗಳು ನೋಡಲು ಬರುತ್ತಿದ್ದಾರೆ. ಬುಧವಾರ ಸಂಜೆ ಜೆಸಿಬಿ ಮೂಲಕ ತೆರವು ಮಾಡಲು ವಿವಿ ಪ್ರಯತ್ನ ಮಾಡಿತು. ಆದರೆ, ಅಲ್ಲಿದ್ದವರು ಮರಳಿ ಕಳುಹಿಸಿದರು. ಕೊನೆಗೆ ಅನಿವಾರ್ಯವಾಗಿ ಈಗ ಕೃಷಿ ವಿವಿ ಧಾರವಾಡ ಉಪನಗರ ಠಾಣೆಯಲ್ಲಿ ದೂರು ದಾಖಲಿಸಿದೆ.

ಇಲ್ಲಿ ಯಾರು ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದಾರೆ ಗೊತ್ತಿಲ್ಲ. ಆದರೆ, ಈಗ ಪ್ರತಿಷ್ಠಾಪನೆ ಆಗಿರುವ ಮೂರ್ತಿಗಳನ್ನು ತೆರವು ಮಾಡಬಾರದು ಎನ್ನುವುದು ಮಾಲಾಧಾರಿಗಳ ಹಾಗೂ ಸ್ಥಳೀಯರ ಆಗ್ರಹವಾಗಿದೆ‌. ಹೀಗಾಗಿ ಏನು ಮಾಡಬೇಕು ಅನ್ನೋ ಗೊಂದಲ್ಲಿ ಕೃಷಿ ವಿವಿ ಇದೆ.‌ ಇನ್ನು ಅಯ್ಯಪ್ಪಸ್ವಾಮಿ ದೇವರು ಬಯಲಿನಲ್ಲಿ ಇರುವ ಕಾರಣಕ್ಕೆ ಕೆಲವು ಮಾಲಾಧಾರಿಗಳು ಶಾಮೀಯಾನ ಹಾಕಲು ಮುಂದಾಗಿದ್ದರು. ಆದರೆ, ವಿವಾದ ಆಗಿರುವ ಕಾರಣಕ್ಕೆ ಶಾಮೀಯಾನ ಹಾಕಲು ಪೊಲೀಸರು ಅನುಮತಿ ನೀಡಿಲ್ಲ.‌ ಇನ್ನು ಇವತ್ತು ಕೆಲ ಮಾಲಾಧಾರಿಗಳು ಕೃಷಿ ವಿವಿ ಕುಲಪತಿ ಜೊತೆ ಸಭೆ ಮಾಡಲು ಮುಂದಾಗಿದ್ದರು. ಆದರೆ ಫಲಪ್ರದವಾಗಿಲ್ಲ.ಸದ್ಯ ಕೃಷಿ ವಿವಿಯವರು ಅಯ್ಯಪ್ಪಸ್ವಾಮಿ ಮೂರ್ತಿ ವಿಷಯದಲ್ಲಿ ಯಥಾಸ್ಥಿತಿ ಕಾಯ್ದುಕೊಂಡು ಹೊರಟಿದ್ದು, ವಿವಿಯಿಂದ ಜಿಲ್ಲಾಧಿಕಾರಿ ಹಾಗೂ ಉಪ ನಗರ ಪೋಲಿಸರಿಗೆ ದೂರು ಸಲ್ಲಿಸಿದ್ದೇನೆ. ಕಾದು ನೋಡೋಣ ಎಂದು ಕುಲಪತಿ ಡಾ.ಪಿ.ಎಲ್. ಪಾಟೀಲ್ ಕನ್ನಡಪ್ರಭಕ್ಕೆ ಪ್ರತಿಕ್ರಿಯೆ ನೀಡಿದರು.