ನಾನು ವಿದ್ಯಾರ್ಥಿಯಾಗಿದ್ದ ವೇಳೆ ಅವರು ತಾಲೂಕಿಗೆ ಬಂದಾಗ ಅವರನ್ನು ನೋಡಲೆಂದೇ ಓಡೋಡಿ ಹೋಗಿದ್ದು ಇಂದು ನೆನಪಾಗುತ್ತದೆ. ಡಾ. ರಾಜ್‌ಕುಮಾರ್, ಕಲ್ಯಾಣ್‌ಕುಮಾರ್, ಉದಯ್‌ಕುಮಾರ್ ಸೇರಿದಂತೆ ದಿಗ್ಗಜ ನಟರ ಜೊತೆ ಅಭಿನಯಿಸಿದರ ಅವರನ್ನು ಕಳೆದುಕೊಂಡಿರುವುದು ನೋವಿನ ಸಂಗತಿಯಾಗಿದೆ.

ಕನ್ನಡಪ್ರಭವಾರ್ತೆ ಚನ್ನಪಟ್ಟಣ

ಕನ್ನಡ ಸಿನಿಮಾ ಕ್ಷೇತ್ರಕ್ಕೆ ಬಹುಭಾಷಾ ನಟಿ ತಾಲೂಕಿನ ಬಿ. ಸರೋಜಾದೇವಿ ಅವರ ಕೊಡುಗೆ ಅಪಾರವಾಗಿದ್ದು, ಅವರು ನಿಧನದಿಂದ ಕಲಾ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಾಜ್ಯಾಧ್ಯಕ್ಷ ರಮೇಶ್‌ಗೌಡ ವಿಷಾದ ವ್ಯಕ್ತಪಡಿಸಿದರು.

ನಟಿ ಬಿ. ಸರೋಜಾದೇವಿ ಅವರ ನಿಧನಕ್ಕೆ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯಿಂದ ಶ್ರದ್ಧಾಂಜಲಿ ಅರ್ಪಿಸಿ ಮಾತನಾಡಿದ ಅವರು, ತಾಲೂಕಿನ ದಶವಾರ ಗ್ರಾಮದಲ್ಲಿ ಹುಟ್ಟಿದ ಬಿ. ಸರೋಜಾದೇವಿ ಅವರು ಕನ್ನಡ, ತಮಿಳು, ತೆಲುಗು, ಹಿಂದಿ ಸಿನಿಮಾಗಳಲ್ಲಿ ಪೌರಾಣಿಕ ಮತ್ತು ಸಾಮಾಜಿಕ, ಕಲಾತ್ಮಕ ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ಪಂಚಭಾಷಾನಟಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿ ಬೊಂಬೆನಾಡಿಗೆ ಮತ್ತೊಂದು ಗರಿಮೆ ಆಗಿದ್ದರು. ಇಂತಹ ಮಹಾನ್ ನಟಿಯ ನಿಧನದಿಂದ ಸಿನಿಮಾ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಬಿ. ಸರೋಜಾದೇವಿ ಅವರು ಖ್ಯಾತ ನಟಿಯಾದರೂ ಸಹ ಯಾವುದೇ ಹಮ್ಮು ಬಿಮ್ಮು ಇಲ್ಲದವರಾಗಿದ್ದರು. ಅವರ ಹುಟ್ಟೂರು ತಾಲೂಕಿನ ದಶವಾರ ಗ್ರಾಮವನ್ನು ಚಿರಸ್ಥಾಯಿ ಆಗಿ ಉಳಿಸುವ ನಿಟ್ಟಿನಲ್ಲಿ ದಶವಾರ ಗ್ರಾಮದ ವೃತ್ತಕ್ಕೆ ಅವರ ಹೆಸರಿಡುವುದು ಹಾಗೂ ಅವರ ಹೆಸರಲ್ಲಿ ಶಾಲೆ, ಆಸ್ಪತ್ರೆ ನಿರ್ಮಾಣಕ್ಕೆ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.

ನಿವೃತ್ತ ಪ್ರಾಂಶುಪಾಲರಾದ ನಿಂಗೇಗೌಡರು ಮಾತನಾಡಿ, ನಟಿ ಬಿ.ಸರೋಜಾದೇವಿ ತಾಲೂಕಿನ ಮಗಳಾಗಿ ದಕ್ಷಿಣ ಭಾರತದ ಖ್ಯಾತ ನಟಿಯಾಗಿ ಹೆಸರು ಮಾಡಿದ್ದಾರೆ. ಅಲ್ಲದೆ ಅವರು ಅಭಿನಯಿಸಿರುವ ಕಿತ್ತೂರ ರಾಣಿ ಚನ್ನಮ್ಮ ಸಿನಿಮಾದಲ್ಲಿ ಅವರು ಬ್ರಿಟೀಷ್ ದಬ್ಬಾಳಿಕೆ ವಿರುದ್ಧ ಹೋರಾಟ ಮಾಡಿದ ಸಂದರ್ಭದಲ್ಲಿ ಕಪ್ಪ ಯಾರಿಗೆ ಕೊಡಬೇಕು ಕಪ್ಪ ಎಂಬ ಸಂಭಾಷಣೆ ೫೦ ದಶಕ ಕಳೆದರೂ ಇಂದಿಗೂ ಮಕ್ಕಳ ನಾಟಕಗಳಾಗಿ ಅಭಿನಯ ಆಗುತ್ತಾ ಕಲೆ ಮತ್ತು ಇತಿಹಾಸಕ್ಕೆ ಮರೆಯದ ಸಂಭಾಷಣೆಯಾಗಿ ಉಳಿದಿದೆ. ಇಂತಹ ನಟಿಯನ್ನು ಕಳೆದುಕೊಂಡಿರುವುದು ನೋವಿನ ಸಂಗತಿಯಾಗಿದೆ ಎಂದರು.

ಗಾಯಕ ಚೌ.ಪು. ಸ್ವಾಮಿಯವರು ಮಾತನಾಡಿ, ಬಿ. ಸರೋಜಾದೇವಿ ಅವರು ನಮ್ಮ ತಾಲೂಕಿನವರು ಎಂಬುದು ನಮ್ಮೆಲ್ಲರ ಹೆಮ್ಮೆಯಾಗಿದೆ. ನಾನು ವಿದ್ಯಾರ್ಥಿಯಾಗಿದ್ದ ವೇಳೆ ಅವರು ತಾಲೂಕಿಗೆ ಬಂದಾಗ ಅವರನ್ನು ನೋಡಲೆಂದೇ ಓಡೋಡಿ ಹೋಗಿದ್ದು ಇಂದು ನೆನಪಾಗುತ್ತದೆ. ಡಾ. ರಾಜ್‌ಕುಮಾರ್, ಕಲ್ಯಾಣ್‌ಕುಮಾರ್, ಉದಯ್‌ಕುಮಾರ್ ಸೇರಿದಂತೆ ದಿಗ್ಗಜ ನಟರ ಜೊತೆ ಅಭಿನಯಿಸಿದರ ಅವರನ್ನು ಕಳೆದುಕೊಂಡಿರುವುದು ನೋವಿನ ಸಂಗತಿಯಾಗಿದೆ ಎಂದರು.

ವೇದಿಕೆಯ ಜಿಲ್ಲಾಧ್ಯಕ್ಷ ಬೇವೂರು ಯೋಗೇಶ್‌ಗೌಡ, ನಿವೃತ್ತ ಸಿಡಿಪಿಒ ಪುಟ್ಟಸ್ವಾಮಿ, ಬೈರಾಪಟ್ಟಣ ಮಂಜು, ನಿವೃತ್ತ ಶಿಕ್ಷಕ ಪುಟ್ಟಪ್ಪಾಜಿ, ಮರಿಅಂಕೇಗೌಡ, ರ್‍ಯಾಂಬೋ ಸೂರಿ, ಮೆಣಸಿಗನಹಳ್ಳಿ ರಾಮಕೃಷ್ಣಪ್ಪ. ಮಂಗಳವಾರಪೇಟೆ ತಿಮ್ಮರಾಜು(ಎಂಟಿಆರ್), ಮಂಗಳವಾರಪೇಟೆ ಕೃಷ್ಣಪ್ರಸಾದ್, ಶ್ರೀನಿವಾಸ್, ಸೈಯದ್, ರಾಜು, ಪುನೀತ್, ಇತರರು ಇದ್ದರು.