ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಕಾರ್ತಿಕ ಅಮಾವಾಸ್ಯೆ ಹಿನ್ನೆಲೆಯಲ್ಲಿ ಕುಲದೇವರಾದ ತಾಲೂಕಿನ ಕಾಪನಹಳ್ಳಿ ಗವೀಮಠದ ಸ್ವತಂತ್ರ ಸಿದ್ದಲಿಂಗೇಶ್ವರರ ಗದ್ದುಗೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶೇಷ ಪೂಜೆ ಸಲ್ಲಿಸಿದರು.ಗವೀಮಠಕ್ಕೆ ಆಗಮಿಸುವ ಮುನ್ನ ಹುಟ್ಟೂರು ಬೂಕನಕೆರೆಗೆ ಆಗಮಿಸಿದ ಬಿ.ಎಸ್.ಯಡಿಯೂರಪ್ಪ ಅವರನ್ನು ಗ್ರಾಮದ ಜನ ಪಕ್ಷಾತೀತವಾಗಿ ಸ್ವಾಗತಿಸಿದರು. ಮಾಜಿ ಸಿಎಂಗಳನ್ನು ಕಾಂಗ್ರೆಸ್ ಮುಖಂಡರಾದ ವಿಜಯರಾಮೇಗೌಡ, ಬಿ.ಟಿ.ವೆಂಕಟೇಶ್, ಬಿಜೆಪಿ ಮುಖಂಡ ಬಿ.ಜವರಾಯಿಗೌಡ ನೇತೃತ್ವದಲ್ಲಿ ನೂರಾರು ಜನ ಮಾಲಾರ್ಪಣೆ ಮಾಡಿ ಮನೆ ಮಗನನ್ನು ಗ್ರಾಮಕ್ಕೆ ಬರಮಾಡಿಕೊಂಡರು.
ಆ ನಂತರ ಸಮೀಪದ ಗವೀಮಠಕ್ಕೆ ತೆರಳಿ ಸ್ವತಂತ್ರ ಸಿದ್ದಲಿಂಗೇಶ್ವರರ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದರು. ಪುತ್ರಿಯರಾದ ಉಮಾದೇವಿ, ಪದ್ಮಾವತಿ ಅವರೊಂದಿಗೆ ಸಿದ್ದಲಿಂಗೇಶ್ವರ ಗದ್ದುಗೆಗೆ ಪೂಜೆ ಸಲ್ಲಿಸಿ ಪ್ರಾರ್ಥಿಸಿದ ಯಡಿಯೂರಪ್ಪ ಮನೆ ದೇವರ ದರ್ಶನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಯಾವುದೇ ರಾಜಕೀಯ ವಿಚಾರಗಳನ್ನು ಪ್ರಸ್ತಾಪಿಸಲು ನಿರಾಕರಿಸಿದರು.ಕುಲದೇವರ ದರ್ಶನದಿಂದ ನನಗೆ ಆತ್ಮ ಸಂತೋಷವಾಗಿದೆ. ಕುಲದೇವರ ಅನುಗ್ರಹದಿಂದಲೇ ತಾವು ಜೀವನದಲ್ಲಿ ಬೆಳೆಯಲು ಸಾಧ್ಯವಾಗಿದೆ. ಗವೀಮಠ ನನ್ನ ತಂದೆಯವರು ಪೂಜೆ ಮಾಡುತ್ತಿದ್ದ ದೇವಾಲಯ ಎಂದ ಯಡಿಯೂರಪ್ಪ ಸಕಾಲಕ್ಕೆ ಮಳೆ ಬೆಳೆ ಆಗಿ ನಾಡಿನ ರೈತರು ಸಂಮೃದ್ದಿಯಾಗಿರಲಿ ಎಂದು ಪ್ರಾರ್ಥಿಸಿದ್ದೇನೆ ಎಂದರು.
ಕಾರ್ತಿಕ ಅಮಾವಾಸ್ಯೆ ಅಂಗವಾಗಿ ಗವಿ ಮಠದಲ್ಲಿಂದು ವಿಶೇಷ ಪೂಜಾ ಕಾರ್ಯಗಳು ನಡೆದವು. ಮುಂಜಾನೆಯಿಂದಲೇ ಸಿದ್ದಲಿಂಗೇಶ್ವರರ ಗದ್ದುಗೆಗೆ ಸೇವಂತಿಗೆ ಹೂವು ಮತ್ತು ಸಾವಿರಾರು ಸೌತೆಕಾಯಿಗಳನ್ನು ಬಳಸಿ ವಿಶೇಷ ಅಲಂಕಾರ ಮಾಡಲಾಗಿತ್ತು. ಗವೀಮಠ ಸುತ್ತಮುತ್ತಲ ನೂರಾರು ಭಕ್ತರು ಪೂಜಾ ಕಾರ್ಯದಲ್ಲಿ ಭಾಗಿಯಾಗಿದ್ದರು.ಗವಿಮಠದ ಪೀಟಾಧಿಪತಿ ಸ್ವತ್ಯಂತ್ರ ಚನ್ನವೀರ ಶಿವಾಚಾರ್ಯ ಸ್ವಾಮೀಜಿ ಪೂಜಾ ಕೈಕರ್ಯಗಳ ನೇತೃತ್ವ ವಹಿಸಿದ್ದರು. ಸ್ವಗ್ರಾಮ ಬೂಕನಕೆರೆಗೆ ಆಗಮಿಸಿದ ಬಿ.ಎಸ್.ಯಡಿಯೂರಪ್ಪ ಗ್ರಾಮದೇವತೆ ಗೋಗಾಲಮ್ಮನಿಗೆ ವಿಶೇಷ ಪೂಜೆ ಸಲ್ಲಿಸಿದರು. ಆನಂತರ ಕುಲದೇವತೆ ಅಕ್ಕಮ್ಮ ಮತ್ತು ಚೌಡಮ್ಮ ತಾಯಿಯ ದರ್ಶನ ಪಡೆದರು.
ಮುಖಂಡರಾದ ಮೀನಾಕ್ಷಿ ಪುಟ್ಟರಾಜು, ಯಡಿಯೂರಪ್ಪ ಅಭಿಮಾನಿ ಸಂಘದ ಬೂಕನಕೆರೆ ಮಧು ಸೇರಿದಂತೆ ಹಲವರಿದ್ದರು.