ಸಾರಾಂಶ
ಪ್ರತಿ ಸುತ್ತಿನಲ್ಲೂ ಬಿ.ವೈ. ರಾಘವೇಂದ್ರ ತಮ್ಮ ಸಮೀಪ ಸ್ಪರ್ಧಿ ಗೀತಾರಿಗಿಂತ ಹೆಚ್ಚು ಮತಗಳ ಕಾಯ್ದುಕೊಂಡು ಗೆಲುವು ಸಾಧಿಸಿದರೆ. ಗೀತಾ 5 ಲಕ್ಷಕ್ಕೂ ಅಧಿಕ ಮತಗಳ ಪಡೆದು ಎರಡನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು. ಆದರೆ, ಬಿಜೆಪಿಯಿಂದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ರಾಜ್ಯದ ಗಮನಸೆಳೆದಿದ್ದ ಕೆ.ಎಸ್. ಈಶ್ವರಪ್ಪನವರಿಗೆ ಈ ಚುನಾವಣೆ ಭಾರಿ ಮುಖಭಂಗ ತಂದಿದೆ.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಲೋಕಸಭಾ ಚುನಾವಣೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಭರ್ಜರಿ ಗೆಲುವು ಸಾಧಿಸಿ ನಾಲ್ಕನೇ ಬಾರಿಗೆ ಸಂಸತ್ ಪ್ರವೇಶಿಸಲಿದ್ದಾರೆ. ರಾಘವೇಂದ್ರರಿಗೆ ನೇರ ಸ್ಪರ್ಧೆಯಾಗಿದ್ದ ಕಾಂಗ್ರೆಸ್ ಅಭ್ಯರ್ಥಿ ಗೀತಾರಿಗಿಂತ 2,43,715 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಮಂಗಳವಾರ ಬೆಳಗ್ಗೆ ಮತ ಎಣಿಕೆ ಆರಂಭದಲ್ಲೇ ಲೀಡ್ ಪಡೆದ ಬಿ.ವೈ.ರಾಘವೇಂದ್ರ ಅಂತಿಮ ಹಂತದ ಮತ ಎಣಿಕೆವರೆಗೂ ಮುನ್ನಡೆ ಕಾಯ್ದುಕೊಂಡು ಬಂದರು. ಅಂಚೆ ಮತಗಳಿಂದ ಮುನ್ನಡೆ ಪಡೆದ ರಾಘವೇಂದ್ರ ಇವಿಎಂಗಳ ಮತ ಎಣಿಕೆ ಆರಂಭವಾಗುತ್ತಿದ್ದಂತೆ ಪ್ರತಿ ಸುತ್ತಿನಲ್ಲಿಯೂ ಗೆಲುವಿನ ಅಂತರ ಹೆಚ್ಚಿಸುತ್ತಾ ಹೋದರು. ಬೆಳಗ್ಗೆ 11ಗಂಟೆಗೆ 11,380 ಮತಗಳಿಂದ ಮುಂದಿದ್ದರೆ ಮಧ್ಯಾಹ್ನ 12 ಗಂಟೆಗೆ 1 ಲಕ್ಷಕ್ಕೂ ಹೆಚ್ಚು ಮತಗಳ ಅಂತರ ಕಾಯ್ದುಕೊಂಡರು. 12.20ಕ್ಕೆ ಸುಮಾರು 5 ಲಕ್ಷ 20 ಸಾವಿರ ಮತಗಳ ಪಡೆದು 1.50 ಲಕ್ಷ ಮತಗಳ ಅಂತರ ಕಾಪಾಡಿಕೊಂಡರು. 1 ಗಂಟೆಗೆ 1.86 ಲಕ್ಷ ಮತಗಳ ಅಂತರ ಕಾಯ್ದುಕೊಂಡಿದ್ದರು. ಹೀಗೆ ಅಂತಿಮ ಸುತ್ತಿನವರೆಗೆ 7,78,721 ಮತಗಳನ್ನು ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ಗೀತಾ ಒಟ್ಟು 5,35,006 ಮತಗಳನ್ನು ಪಡೆದರು. ಇನ್ನೂ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಕೆ.ಎಸ್.ಈಶ್ವರಪ್ಪ ಒಟ್ಟು 30050 ಮತ ಪಡೆದಿದ್ದಾರೆ.ಪ್ರತಿ ಸುತ್ತಿನಲ್ಲೂ ಬಿ.ವೈ. ರಾಘವೇಂದ್ರ ತಮ್ಮ ಸಮೀಪ ಸ್ಪರ್ಧಿ ಗೀತಾರಿಗಿಂತ ಹೆಚ್ಚು ಮತಗಳ ಕಾಯ್ದುಕೊಂಡು ಗೆಲುವು ಸಾಧಿಸಿದರೆ. ಗೀತಾ 5 ಲಕ್ಷಕ್ಕೂ ಅಧಿಕ ಮತಗಳ ಪಡೆದು ಎರಡನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು. ಆದರೆ, ಬಿಜೆಪಿಯಿಂದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ರಾಜ್ಯದ ಗಮನಸೆಳೆದಿದ್ದ ಕೆ.ಎಸ್. ಈಶ್ವರಪ್ಪನವರಿಗೆ ಈ ಚುನಾವಣೆ ಭಾರಿ ಮುಖಭಂಗ ತಂದಿದೆ. ಪ್ರತಿ ಸುತ್ತಿನಲ್ಲಿಯೂ ಅವರು ಅತ್ಯಂತ ಅಲ್ಪ ಮತಗಳನ್ನು ಪಡೆದು ಹಿನ್ನಡೆ ಸಾಧಿಸುತ್ತಲೇ ಹೋದ ಅವರು ಅಂತಿಮವಾಗಿ 30 ಸಾವಿರ ಮತ ಪಡೆದು ಮೂರನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು.ಮುಗಿಲು ಮುಟ್ಟಿದ ಬಿಜೆಪಿ ಕಾರ್ಯಕರ್ತ ಸಂಭ್ರಮ:
ಮತ ಎಣಿಕೆ ಆರಂಭದಿಂದಲೇ ಮುನ್ನಡೆ ಕಾಯ್ದುಕೊಂಡಿದ್ದ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರ ಲೀಡ್ ಒಂದು ಲಕ್ಷ ಡಾಟುತ್ತಿದ್ದಂತೆ ಮತ ಎಣಿಕೆ ಕೇಂದ್ರಗಳ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿತ್ತು. ಪ್ರತಿ ಸುತ್ತಿನ ಮತ ಎಣಿಕೆ ಬಳಿಕ ಪಡೆದ ಮತಗಳನ್ನು ಘೋಷಣೆ ಮಾಡುತ್ತಿದ್ದಂತೆ ಜೋರಾಗಿ ಜೈ ಕಾರ ಹಾಕುತ್ತಿದ್ದ ಬಿಜೆಪಿ ಕಾರ್ಯಕರ್ತರು ರಾಘವೇಂದ್ರ ಪರ ಹಾಗೂ ಜೈ ಶ್ರೀರಾಮ್, ಮೋದಿ, ಮೋದಿ ಘೋಷಣೆ ಹಾಕುತ್ತಾ ಸಂಭ್ರಮಿಸುತ್ತಿದ್ದ ದೃಶ್ಯ ಕಂಡು ಬಂತು. ಪ್ರತಿ ಸುತ್ತಿನ ಮತ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರ ಸಂಭ್ರಮ ಜೋರಾಗುತ್ತಿತ್ತು.ಈ ವೇಳೆ ಮತಎಣಿಕೆ ಕೇಂದ್ರದತ್ತ ಆಗಮಿಸಿದ ಸಂಸದ ಬಿ.ವೈ.ರಾಘವೇಂದ್ರ ಅವರನ್ನು ಹೆಗಲ ಎತ್ತಿಕೊಂಡು ಸಂಭ್ರಮಿಸಿದರು. ಈ ವೇಳೆ ರಾಘವೇಂದ್ರ ಅವರಿಗೆ ಬೃಹತಾಕಾರದ ಒಣಕೊಬ್ಬರಿ ಹಾರವನ್ನು ಹಾಕಲಾಯಿತು.
ಬಿಜೆಪಿ ಕಚೇರಿಯಲ್ಲಿ ವಿಜಯೋತ್ಸವ :ಅಭ್ಯರ್ಥಿ ಬಿ.ವೈ.ರಾಘವೇಂದ್ರ ಗೆಲುವು ಖಚಿತವಾಗುತ್ತಿದ್ದಂತೆ ಬಿಜೆಪಿ ಕಚೇರಿಯಲ್ಲಿ ವಿಜಯೋತ್ಸವ ಆಚರಿಸಿದರು. ರಾಘವೇಂದ್ರ ಕಚೇರಿ ಬಳಿ ಆಗಮಿಸುತ್ತಿದ್ದಂತೆ ಅವರನ್ನು ಎತ್ತಿ ಸಂಭ್ರಮಿಸಿದ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.