ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಚಿತ್ರದುರ್ಗದ ಸರ್ಕಾರಿ ಕಲಾ ಕಾಲೇಜು ಹಿಂಭಾಗದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಬಾಬು ಜಗಜೀವನರಾಂ ಭವನದ ಕಾಮಗಾರಿಯ ಶೀಘ್ರ ಪೂರ್ಣಗೊಳಿಸಿ ಉದ್ಘಾಟನೆ ಕಾರ್ಯ ನೆರವೇರಿಸುವುಗಾಗಿ ಶಾಸಕ ವೀರೇಂದ್ರ ಪಪ್ಪಿ ಭರವಸೆ ನೀಡಿದರು.ಇಲ್ಲಿನ ಮಾದಾರ ಚೆನ್ನಯ್ಯ ಸಭಾಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಡಾ.ಬಾಬು ಜಗಜೀವನ್ ರಾಮ್ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಮಗಾರಿ ಪೂರ್ಣಗೊಳ್ಳಲು
3 ಕೋಟಿ ರು. ಅನುದಾನದ ಅವಶ್ಯಕತೆ ಇದೆ. ಸರ್ಕಾರದ ಜೊತೆ ಚರ್ಚಿಸಿ ಅನುದಾನ ಬಿಡುಗಡೆ ಮಾಡಿಸಲಾಗುವುದೆಂದು ಹೇಳಿದರು.ದೇಶದ ಪ್ರಗತಿಯಲ್ಲಿ ನಮ್ಮ ಪ್ರಗತಿಯಿದೆ. ದೇಶದ ಉದ್ದಾರದಲ್ಲೇ ನಮ್ಮ ಉದ್ದಾರವಿದೆ ಎಂಬ ಬಾಬೂಜಿಯವರ ಮಾತು ಸಾರ್ವಕಾಲಿಕ ಸತ್ಯ. ದೇಶದ ಪ್ರಗತಿಯ ಬಗ್ಗೆ ಯೋಚಿಸುವ ಮೊದಲು ಪ್ರತಿಯೊಬ್ಬರೂ ದೇಶಭಕ್ತಿ ಬೆಳೆಸಿಕೊಳ್ಳಬೇಕು. ನಾಡಗೀತೆ ಮತ್ತು ರಾಷ್ಟ್ರಗೀತೆಯನ್ನು ಹಾಡುವುದರಿಂದಲೇ ದೇಶಭಕ್ತಿ ಆರಂಭವಾಗುತ್ತದೆ ಎಂದು ಕಿವಿಮಾತು ಹೇಳಿದರು.
1971ರ ಯುದ್ಧದ ಸಮಯದಲ್ಲಿ ಬಾಬೂಜಿಯವರ ಸಮರ್ಥ ನಾಯಕತ್ವದಿಂದಾಗಿ ಕೇವಲ 13 ದಿನಗಳಲ್ಲಿ ಬಾಂಗ್ಲಾದೇಶ ಎಂಬ ಹೊಸ ರಾಷ್ಟ್ರ ಉದಯವಾಯಿತು. ಅವರು ತಮ್ಮ ಇಡೀ ಜೀವನವನ್ನು ದೇಶದ ಹಿತಕ್ಕಾಗಿ ಮುಡಿಪಾಗಿಟ್ಟಿದ್ದರು. ಸರ್ಕಾರದಿಂದ ನಿಗಮಗಳ ಮೂಲಕ ಸಿಗುವ ನೇರ ಸಾಲ ಸೌಲಭ್ಯಗಳನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಶಿವಶರಣ ಹರಳಯ್ಯ ಸ್ವಾಮೀಜಿ ಮಾತನಾಡಿ, ಮಾತು ಮತ್ತು ನಡವಳಿಕೆ ಒಂದೇ ಆಗಿರಬೇಕು. ಬಾಬು ಜಗಜೀವನ್ ರಾಮ್ ಅವರು ಕೇವಲ ಮಾತಿನ ವ್ಯಕ್ತಿಯಾಗಿರದೆ, ತಾವು ನಂಬಿದ ಸಿದ್ಧಾಂತಗಳನ್ನು ಬದುಕಿನಲ್ಲಿ ಸಂಪೂರ್ಣವಾಗಿ ಅಳವಡಿಸಿಕೊಂಡಿದ್ದರು. 1935ರಲ್ಲಿಯೇ ರಾಂಚಿಯಲ್ಲಿ ನಡೆದ ಅಮೆಂಡ್ ಕಮಿಷನ್ ಮುಂದೆ ಶೋಷಿತ ವರ್ಗಗಳ ಮತದಾನದ ಹಕ್ಕಿಗಾಗಿ ಬಾಬೂಜಿ ಅವರು ಹೋರಾಟ ಮಾಡಿದ್ದರು. ಅಂದು ಕೇವಲ ರಾಜ-ಮಹಾರಾಜರು ಮತ್ತು ಶ್ರೀಮಂತರಿಗೆ ಮಾತ್ರ ಇದ್ದ ಮತದಾನದ ಹಕ್ಕನ್ನು ಸಾಮಾನ್ಯರಿಗೂ ದೊರಕಿಸಿಕೊಡುವಲ್ಲಿ ಅವರ ಪಾತ್ರ ದೊಡ್ಡದಿದೆ ಎಂದರು.
ಇಂದಿರಾಗಾಂಧಿಯವರು ಪ್ರಧಾನಿಯಾಗಿದ್ದ ಕಾಲದಲ್ಲಿ ದೇಶವು ಆಹಾರದ ಕೊರತೆಯನ್ನು ಎದುರಿಸುತ್ತಿದ್ದಾಗ, ಹಸಿರು ಕ್ರಾಂತಿಯ ಮೂಲಕ ದೇಶಕ್ಕೆ ಅನ್ನ ನೀಡಿದ ಕೀರ್ತಿ ಬಾಬೂಜಿಯವರಿಗೆ ಸಲ್ಲುತ್ತದೆ. ರಕ್ಷಣಾ ಸಚಿವರಾಗಿದ್ದ ಬಾಬೂಜಿಯವರು ಕೇವಲ 13 ದಿನಗಳಲ್ಲಿ ಪಾಕಿಸ್ತಾನವನ್ನು ಯುದ್ದದಲ್ಲಿ ಸೊಲಿಸುವ ಮೂಲಕ ಪಾಠ ಕಲಿಸಿದರು. ಸಮಾಜದಲ್ಲಿರುವ ಭೂ ಹಂಚಿಕೆಯ ಅಸಮಾನತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಶ್ರೀಗಳು, ಶ್ರೀಮಂತರ ಬಳಿ ನೂರಾರು ಎಕರೆ ಭೂಮಿ ಇದೆ, ಆದರೆ ಕಷ್ಟಪಡುವ ಬಡವರ ಬಳಿ ಅಲ್ಪ ಭೂಮಿಯೂ ಇಲ್ಲ. ಈ ದಬ್ಬಾಳಿಕೆಯನ್ನು ಹೋಗಲಾಡಿಸಿ ಸಮಾನತೆಯನ್ನು ತರುವ ಕನಸನ್ನು ಬಾಬೂಜಿ ಅವರು ಕಂಡಿದ್ದರು ಎಂದು ಹೇಳಿದರು.ಇಂಗ್ಲಿಷ್ ಪ್ರಾಧ್ಯಾಪಕ ಡಿ.ಎಚ್.ನಟರಾಜ್, ಡಾ.ಬಾಬು ಜಗಜೀವನ್ ರಾಮ್ ಅವರ ಕುರಿತು ಉಪನ್ಯಾಸ ನೀಡಿದರು. ಇದೇ ವೇಳೆ ನಾಲ್ಕು ಮಂದಿ ಪೌರ ಕಾರ್ಮಿಕರಿಗೆ ಸನ್ಮಾನಿಸಲಾಯಿತು. ಸಂವಿಧಾನ ಪೀಠಿಕೆ ವಾಚಿಸಲಾಯಿತು. ಜಯಂತಿ ಅಂಗವಾಗಿ ನಗರದ ವಿವಿಧ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಜರುಗಿದ ಕ್ರೀಡಾಕೂಟದಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು.
ಕಂಠೀರವ ಸ್ಟುಡಿಯೋ ಅಧ್ಯಕ್ಷ ಮೆಹಬೂಬ್ ಪಾಷಾ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜ್‌ಪೀರ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ, ಪೌರಾಯಕ್ತೆ ಲಕ್ಷ್ಮಿ, ದಲಿತ ಮುಖಂಡರಾದ ಅವಿನಾಶ್, ಜೆ.ಜೆ.ಹಟ್ಟಿ ರಾಜಣ್ಣ, ಪ್ರಶಾಂತ್, ತಿಪ್ಪೇಸ್ವಾಮಿ, ನೇಹಾ, ಹುಲ್ಲೂರು ಕುಮಾರಸ್ವಾಮಿ, ಪ್ರಕಾಶ್, ಕಾವ್ಯ, ರವಿ ಉಪಸ್ಥಿತರಿದ್ದರು.ಜನ್ಮ ದಿನಾಚರಣೆ ಅಂಗವಾಗಿ ಡಾ.ಬಾಬು ಜಗಜೀವನ್‌ರಾಮ್ ಅವರ ಭಾವಚಿತ್ರದ ಅದ್ಧೂರಿ ಮೆರವಣಿಗೆ ನಡೆಸಲಾಯಿತು. ನಗರದ ಹೊಳಲ್ಕೆರೆ ರಸ್ತೆಯ ಸಂಪಿಗೆ ಸಿದ್ದೇಶ್ವರ ಶಾಲೆಯ ಮುಂಭಾಗದಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಪುಷ್ಪ ನಮನ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆ ಮಹಾತ್ಮ ಗಾಂಧಿ ಸರ್ಕಲ್, ಮಾರ್ಗವಾಗಿ ಪ್ರವಾಸಿ ಮಂದಿರದಿಂದ ಲಿಡ್ಕರ್ ಭವನದವರಗೆ ನಡೆಯಿತು.