ಹಿರಿಯೂರು ನಗರದ ನೆಹರೂ ಮೈದಾನದಲ್ಲಿ ತಾಲೂಕು ಆಡಳಿತದ ವತಿಯಿಂದ ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನ್ ರಾo ಹಾಗೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರ ಜನ್ಮದಿನಾಚರಣೆ ಕಾರ್ಯಕ್ರಮವನ್ನು ತಹಸೀಲ್ದಾರ್ ಎಂ.ಸಿದ್ದೇಶ್ ಉದ್ಘಾಟನೆ ಮಾಡಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಹಿರಿಯೂರು
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನ್ ರಾಂ ರವರ ಚಿಂತನೆಗಳನ್ನು, ತತ್ವಾದರ್ಶಗಳನ್ನು ಇಂದಿನ ಯುವಜನತೆ ರೂಢಿಸಿಕೊಳ್ಳಬೇಕು ಎಂದು ತಹಸೀಲ್ದಾರ್ ಎಂ.ಸಿದ್ದೇಶ್ ಹೇಳಿದರು.ನಗರದ ನೆಹರೂ ಮೈದಾನದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ನಗರಸಭೆ ಹಾಗೂ ಪೊಲೀಸ್ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಡೆದ ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನ್ ರಾಂ ಹಾಗೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಡಾ.ಬಾಬು ಜಗಜೀವನ್ ರಾಂರವರು ಶೋಷಿತರ ಬದುಕಿಗಾಗಿ ತಮ್ಮ ಇಡೀ ಜೀವನವನ್ನೇ ಮುಡಿಪಿಟ್ಟು ದುಡಿದಿದ್ದಾರೆ. ಇವರ ಬದುಕು, ತ್ಯಾಗ ನಮಗೆಲ್ಲಾ ಆದರ್ಶವಾಗಬೇಕಿದೆ. ದೇಶದ ಪ್ರತಿಯೊಬ್ಬರಿಗೂ ಸ್ವಾತಂತ್ರ್ಯ, ಸಮಾನತೆ, ಸಾಮಾಜಿಕ ನ್ಯಾಯ, ರಾಜಕೀಯ ಬದುಕನ್ನ ಕಟ್ಟಿಕೊಟ್ಟವರು ಅಂಬೇಡ್ಕರ್ ಅವರು. ಅದಕ್ಕೆ ತಕ್ಕಂತೆ ಕಾನೂನಿನ ಎಲ್ಲಾ ಸಲಹೆಯನ್ನು ನೀಡಿದವರು ಡಾ.ಬಾಬು ಜಗಜೀವನ್ ರಾಂರವರು. ಇವರಿಬ್ಬರ ಬದುಕು ನಮಗೆ ದಾರಿದೀಪವಾಗಬೇಕು ಎಂದರು.ವಾಣಿ ಸಕ್ಕರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ಡಿ.ಧರಣೇಂದ್ರಯ್ಯ ಮಾತನಾಡಿ, ಡಾ.ಬಾಬು ಜಗಜೀವನ್ ರಾಂರವರು ಕಡು ಬಡತನದಲ್ಲಿ ಹುಟ್ಟಿ ಅಸ್ಪೃಶ್ಯತೆ ಅಸಮಾನತೆ ಅನುಭವಿಸಿ ಶಿಕ್ಷಣವನ್ನು ಕಲಿತು ರಾಜಕೀಯ ರಂಗದಲ್ಲಿ ಸುಮಾರು 50 ವರ್ಷಗಳ ಕಾಲ ಸಂಸದರಾಗಿ, ಕಾರ್ಮಿಕ, ರೈಲ್ವೆ, ರಕ್ಷಣೆ, ಪರಿಸರದಂತಹ ಪ್ರಮುಖ ಇಲಾಖೆಗಳ ಸಚಿವರಾಗಿ ದುಡಿದು ದೇಶದ ಜನರ ಬದುಕಿಗೆ ಚೇತನ ಶಕ್ತಿಯಾಗಿದ್ದಾರೆ. ದೇಶದಲ್ಲಿ ಕೃಷಿ ಪ್ರಗತಿಯಿಂದ ದೇಶದ ಪ್ರಗತಿ ಸಾಧ್ಯ ಎಂದು ಸಾರಿದ ಬಾಬೂಜಿ ಹೈಬ್ರಿಡ್ ಬೀಜಗಳನ್ನು ಪರಿಚಯಿಸಿ ರೈತರ ಉತ್ಪಾದನೆ ಹೆಚ್ಚಿಸಿದರು. ಅಂಚೆ ಇಲಾಖೆಯನ್ನು ಅಸ್ತಿತ್ವ ತಂದವರು ಅವರು. ಸಾರಿಗೆ, ರೈಲ್ವೆ, ರಕ್ಷಣಾ ಸಚಿವರಾಗಿ ಸದೃಢ ಭಾರತ ಕಟ್ಟಿದರು ಎಂದರು.
ಶಿಕ್ಷಕ ಶಿವಶಂಕರ್ ಸೀಗೆಹಟ್ಟಿ ಉಪನ್ಯಾಸ ನೀಡಿ ಮಾತನಾಡಿ, ಅಂಬೇಡ್ಕರ್ ಭಾರತ ಮಾತೆಗೆ ಹೊಸ ಬಟ್ಟೆ ಹೊಲೆದ ಟೈಲರ್ ಎಂದು ಕವಿಯೊಬ್ಬರು ವರ್ಣಿಸಿದ್ದಾರೆ. ಬಾಬಾ ಸಾಹೇಬರು ಭಾರತದ ಶಕ್ತಿ ಹಾಗೂ ಅಸ್ತಿತ್ವ. ಜನ್ಮ ದಿನಾಚರಣೆಗಳು ವಾರ್ಷಿಕ ಕ್ರಿಯೆಗಳಾಗದೇ ಅದು ಸಂಬಂಧಿಸಿದವರ ಚಿಂತನೆಗಳ ಸಾಕಾರಕ್ಕೆ ಕಾರಣವಾಗಬೇಕು. ಅಂಬೇಡ್ಕರ್ ರವರ ಸ್ಥಿತಪ್ರಜ್ಞೆ ಮೆಚ್ಚುವಂತಹದು. ಅವರಿಗಾದ ಅವಮಾನಗಳಿಗೆ ಅವರೆಂದು ಕುಂದಲಿಲ್ಲ. ಅಗಾಧ ನೋವು ಅಪಮಾನಗಳಿಗೆ ಅವರು ಮುಖಾಮುಖಿಯಾದರು ಸಹ ಛಲ ಬಿಡದೇ ತಮ್ಮ ಸಕಾರಾತ್ಮಕ ಚಿಂತನೆಗಳಿಂದ ವಿಶ್ವಜ್ಞಾನಿಯಾದರು. ಬಾಬಾ ಸಾಹೇಬರಿಗೆ ದಲಿತ ನಾಯಕ ಎಂದು ಬೇಲಿ ಕಟ್ಟುವುದು ಬೇಡ. ಅವರನ್ನು ವಿಶ್ವಮಾನವರನ್ನಾಗಿ ನೋಡೋಣ. ಸಂವಿಧಾನದ ಆಶಯದಂತೆ ಭ್ರಾತೃತ್ವ ಭಾವನೆಯಿಂದ ಬದುಕೋಣ. ಜಾತಿ ವಿನಾಶ ಮಾಡಿ ಸಮ ಸಮಾಜ ಕಟ್ಟೋಣ ಎಂದರು.ಈ ವೇಳೆ ಪೌರಾಯುಕ್ತ ಎ.ವಾಸಿಂ, ತಾಪಂ ಇಒ ಡಾ.ಪ್ರಮೋದ್, ಸಿಡಿಪಿಒ ರಾಘವೇಂದ್ರ, ಡಿವೈಎಸ್‌ಪಿ ಶಿವಕುಮಾರ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಜೆ.ದಿನೇಶ್, ಬಿಇಒ ತಿಪ್ಪೇಸ್ವಾಮಿ, ನಗರಸಭೆ ಮಾಜಿ ಸದಸ್ಯ ಎಂ.ಡಿ.ಸಣ್ಣಪ್ಪ, ಸಿಪಿಐ ಆನಂದ್, ಮುಖಂಡರಾದ ಜೀವೇಶ್, ದಯಾನಂದ್, ಜ್ಞಾನೇಶ್, ಓoಕಾರಪ್ಪ, ಮಹಾಂತೇಶ್, ಚಂದ್ರಪ್ಪ, ಕಾಂತರಾಜ್, ಮಾರುತೇಶ್, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆರ್. ರಮೇಶ್, ಎಸ್.ಜಿ.ರಂಗಸ್ವಾಮಿ ಸಕ್ಕರ, ಮರಡಿಹಳ್ಳಿ ತಿಪ್ಪೇಸ್ವಾಮಿ, ಜೋಗಪ್ಪ ಮಸ್ಕಲ್, ಲೋಕೇಶ್ ಮಾಳಿಗೆ,ರಾಜು, ಕರ್ಣಕುಮಾರ್,ಪಿಟ್ಲಾಲಿ ತಿಪ್ಪೇಸ್ವಾಮಿ,ಗಾಂಧಿನಗರ ಮಹಾಂತೇಶ್,ಅಡವಪ್ಪ, ಶಿವಣ್ಣ,ನಂದಕುಮಾರ್,ಕದುರಪ್ಪ ಮುಂತಾದವರು ಉಪಸ್ಥಿತರಿದ್ದರು.