ಸಾರಾಂಶ
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಹಸಿರು ಕ್ರಾಂತಿಯ ಹರಿಕಾರ ಬಾಬು ಜಗಜೀವನ್ ರಾಂ ಅವರ 118ನೇ ಜನ್ಮಜಯಂತಿ ಕಾರ್ಯಕ್ರಮವನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ ಅವರ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು.
ಕನ್ನಡಪ್ರಭ ವಾರ್ತೆ, ತುಮಕೂರುನಗರದ ಕಾಂಗ್ರೆಸ್ ಕಚೇರಿಯಲ್ಲಿ ಹಸಿರು ಕ್ರಾಂತಿಯ ಹರಿಕಾರ ಬಾಬು ಜಗಜೀವನ್ ರಾಂ ಅವರ 118ನೇ ಜನ್ಮಜಯಂತಿ ಕಾರ್ಯಕ್ರಮವನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ ಅವರ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ ಮಾತನಾಡಿ, ಕಾಂಗ್ರೆಸ್ ಪಕ್ಷ ತನ್ನ ಆಡಳಿತದ ಅವಧಿಯಲ್ಲಿ ಸರ್ವ ಜನಾಂಗಕ್ಕೂ ಅವಕಾಶಗಳನ್ನು ಕಲ್ಪಿಸಿತ್ತು. ಆದರೆ ಬಿಜೆಪಿ ವಕ್ಫ್ ಬಿಲ್ ತಿದ್ದುಪಡಿ ಮಸೂದೆ ಮೂಲಕ ಅಲ್ಪಸಂಖ್ಯಾತರನ್ನು ಎರಡನೇ ದರ್ಜೆಯ ಪ್ರಜೆಯಾಗಿಸಿದೆ. ಕಾಂಗ್ರೆಸ್ ಸೃಷ್ಟಿಸಿದ ಸರಕಾರಿ ಕಂಪನಿಗಳನ್ನು ಖಾಸಗೀಕರಣ ಮಾಡುವ ಮೂಲಕ ಸಂವಿಧಾನದ ಆಶಯವನ್ನೇ ಬುಡಮೇಲು ಮಾಡಲು ಹೊರಟಿದೆ.೧೬ ವಿಮಾನ ನಿಲ್ದಾಣಗಳನ್ನು ಖಾಸಗೀಕರಣ ಮಾಡಲಾಗಿದೆ. ಇದರ ವಿರುದ್ದ ಜನಸಾಮಾನ್ಯರು ದ್ವನಿ ಎತ್ತಬೇಕಾಗಿದೆ ಎಂದರು.ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಆರ್.ರಾಮಕೃಷ್ಣ ಮಾತನಾಡಿ, ಸ್ವಾತಂತ್ರ ಬಂದ ನಂತರದಲ್ಲಿ ಇದ್ದ 40 ಕೋಟಿ ಜನಸಂಖ್ಯೆಗೆ ಎರಡು ಹೊತ್ತಿನ ಊಟ ನೀಡುವುದು ಕಷ್ಟವಾಗಿದ್ದ ಕಾಲದಲ್ಲಿ ಕೃಷಿ ಇಲಾಖೆಯ ಜವಾಬ್ದಾರಿ ಹೊತ್ತು ಬಾಬೂಜಿ, ಹಲವು ದೇಶಗಳ ಪರ್ಯಾಟನೆ ಮಾಡಿ, ಅಲ್ಲಿನ ಕೃಷಿ ಪದ್ದತಿಗಳನ್ನು ಅವಲೋಕಿಸಿ, ಹೊಸ ತಳಿಗಳು, ಬೀಜೋತ್ಪಾದನೆ, ಹೆಚ್ಚು ಇಳುವರಿಗೆ ಬೇಕಾದ ಅಗತ್ಯ ಕ್ರಮ ಕೈಗೊಂಡ ಪರಿಣಾಮ ಇಂದು 150 ಕೋಟಿ ಜನಸಂಖ್ಯೆ ತಿಂದು ಉಳಿಯುವಷ್ಟು ಆಹಾರ ಪದಾರ್ಥಗಳ ಬೆಳೆಯಲು ಕಾರಣವಾಯಿತು ಎಂದರು.ಮುಖಂಡರಾದ ವಾಲೆ ಚಂದ್ರಯ್ಯ ಮಾತನಾಡಿ, ತಮ್ಮ ಐವತ್ತು ವರ್ಷಗಳ ರಾಜಕೀಯ ಜೀವನದಲ್ಲಿ ಕೇಂದ್ರದ ಸಚಿವರಾಗಿ ಕೃಷಿ, ಕಾರ್ಮಿಕ, ರಕ್ಷಣೆ ಸೇರಿದಂತೆ ಐದು ಖಾತೆಗಳನ್ನು ನಿರ್ವಹಣೆ ಮಾಡಿದ ಬಾಬೂಜಿ, ಹಲವಾರು ಸುಧಾರಣೆಗಳನ್ನು ತಂದರು. ಆದರೆ ಬಿಜೆಪಿಯವರ ಬಾಬೂಜಿ ಅವರನ್ನು ಪ್ರಧಾನಿ ಮಾಡಲಿಲ್ಲ ಎಂದು ಅಪಪ್ರಚಾರ ಮಾಡುತ್ತಿದೆ. ಆದರೆ ಜಗಜೀವನ್ ರಾಂ ಅವರನ್ನು ಗುರುತಿಸಿ, ಅವರಿಗೆ ವಿವಿಧ ಸ್ಥಾನಮಾನಗಳನ್ನು ನೀಡಿದ್ದು ಕಾಂಗ್ರೆಸ್ ಪಕ್ಷ, ಇಂದಿಗೂ ತಳ ಸಮುದಾಯಗಳಿಗೆ ಅಧಿಕಾರ ನೀಡಿರುವ ಪಕ್ಷ ಎಂದರೆ ಅದು ಕಾಂಗ್ರೆಸ್ ಪಕ್ಷ ಮಾತ್ರ ಎಂದರು.ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್.ಡಿ.ಶ್ರೀನಿವಾಸ್ ಮಾತನಾಡಿ, ಈ ದೇಶದ ಆಹಿಂದ ವರ್ಗದ ದ್ವನಿಯಾಗಿ ತಾವು ನಿರ್ವಹಿಸುವ ಖಾತೆಗಳಲ್ಲಿ ಹಲವಾರು ಸುಧಾರಣೆಗಳನ್ನು ತಂದ ಬಾಬು ಜಗಜೀವನ್‌ರಾಂ ಅವರು,ಸ್ವಾತಂತ್ರೋತ್ತರ ಭಾರತಕ್ಕೆ ಭದ್ರ ಬುನಾದಿ ಹಾಕಿದವರಲ್ಲಿ ಒಬ್ಬರು. ಆವರ ಆದರ್ಶಗಳನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕಿದೆ ಎಂದರು. ಜಿಲ್ಲಾ ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ಬಿ.ಜಿ.ಲಿಂಗರಾಜು, ಗ್ಯಾರಂಟಿ ಅನುಷ್ಟಾನ ಸಮಿತಿ ಉಪಾಧ್ಯಕ್ಷ ಪಂಚಾಕ್ಷರಯ್ಯ , ಜಿಲ್ಲಾ ಕಾಂಗ್ರೆಸ್ ವಕ್ತಾರರಾದ ಸುಜಾತ ಮಾತನಾಡಿದರು ಕಾರ್ಯಕ್ರಮದಲ್ಲಿ ಟೂಡಾ ಮಾಜಿ ಅಧ್ಯಕ್ಷ ಸಿದ್ದಲಿಂಗೇಗೌಡ, ಜಿಲ್ಲಾ ಪ್ರಚಾರ ಸಮಿತಿ ಕಾರ್ಯದರ್ಶಿ ಶಿವಾಜಿ, ಸಿಮೆಂಟ್ ಮಂಜಣ್ಣ, ಮಾಜಿ ಮೇಯರ್ ಗೀತಾ ರುದ್ರೇಶ್ ಅವರುಗಳು ಮಾತನಾಡಿದರು.