ಲಿಂಗಸುಗೂರು ಪುರಸಭೆ ಅಧ್ಯಕ್ಷರಾಗಿ ಬಾಬುರೆಡ್ಡಿ ರಾಜಪ್ಪ

| Published : Oct 02 2024, 01:18 AM IST

ಸಾರಾಂಶ

ಲಿಂಗಸುಗೂರು ಪುರಸಭೆಗೆ ನೂತನ ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾದವರಿಗೆ ಸಂಸದ ಜಿ.ಕುಮಾರ ನಾಯಕ, ಮಾಜಿ ಶಾಸಕ ಡಿ.ಎಸ್ ಹೂಲಗೇರಿ ಸೇರಿದಂತೆ ಸನ್ಮಾನಿಸಿದರು.

ಕನ್ನಡಪ್ರಭ ವಾರ್ತೆ ಲಿಂಗಸುಗೂರು

ತೀವ್ರ ಕುತೂಹಲ ಮೂಡಿಸಿದ್ದ ಲಿಂಗಸುಗೂರು ಪಟ್ಟಣದ ಪುರಸಭೆ ಅಧ್ಯಕ್ಷ ಸ್ಥಾನಕ್ಕೆ 17ನೇ ವಾರ್ಡಿನ ಸದಸ್ಯ ಬಾಬುರೆಡ್ಡಿ ರಾಜಪ್ಪ ಮುನ್ನೂರು ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ 19ನೇ ವಾರ್ಡಿನ ಸದಸ್ಯೆ ಶರಣಮ್ಮ ಅವಿರೋಧ ಆಯ್ಕೆಯಾಗಿದ್ದಾರೆ.

ಪುರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗ ಹಾಗೂ ಉಪಾಧ್ಯಕ್ಷ ಸ್ಥಾನ ಬಿಸಿಎ ಗೆ ಮೀಸಲಾಗಿತ್ತು. ಒಟ್ಟು 23 ಸದಸ್ಯ ಬಲದ ಪುರಸಭೆಯ 10ನೇ ಅವದಿಯ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ 13 ಜನ ಸದಸ್ಯರು ಪಾಲ್ಗೊಂಡಿದ್ದರು.

ಅಧ್ಯಕ್ಷ ಸ್ಥಾನಕ್ಕೆ 17ನೇ ವಾರ್ಡಿನ ಸದಸ್ಯ ಬಾಬುರೆಡ್ಡಿ ಮುನ್ನೂರು ನಾಮಪತ್ರ ಸಲ್ಲಿಸಿದ್ದರು. ಇವರಿಗೆ ಹಿರಿಯ ಸದಸ್ಯ ರುದ್ರಪ್ಪ ಹನ್ಮಪ್ಪ ಬ್ಯಾಗಿ ಸೂಚರಾಗಿದ್ದರು, ಸದಸ್ಯ ರವೂಫ್ ನೂರುಲ್ ಹಸನ್ ಗ್ಯಾರಂಟಿ ಅನುಮೋಧಿಸಿದರು. ಬಿಸಿಎಗೆ ಮೀಸಲಾದ ಉಪಾಧ್ಯಕ್ಷ ಸ್ಥಾನಕ್ಕೆ 19ನೇ ವಾರ್ಡಿನ ಸದಸ್ಯ ಶರಣಮ್ಮ ಅಮರಪ್ಪ ಕೊಡ್ಲಿ ನಾಮಪತ್ರ ಸಲ್ಲಿಸಿದ್ದರು.

ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಒಂದೊಂದೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ತಹಸೀಲ್ದಾರ ಎನ್.ಶಂಶಾಲ ಅವರು ಅವಿರೋಧ ಆಯ್ಕೆಯನ್ನು ಘೋಷಿಸಿದರು.

*ಗಮನ ಸೆಳೆದ ಪುಟ್ಬಾಲ್ ಆಟ: ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆದ ಬಳಿಕ ಕಾಂಗ್ರೆಸ್ ಕಾರ್ಯಕರ್ತರು ಪರಸ್ಪರ ಗುಲಾಲು ಎರಚಿಕೊಂಡು ಸಂಭ್ರಮಿಸುವ ಜೊತೆಗೆ ಗಡಿಯಾರ ವೃತ್ತದಲ್ಲಿ ಪುಟ್ಬಾಲ್ ಆಡುವ ಮೂಲಕ ವಿಜಯೋತ್ಸವ ಸಂಭ್ರಮಿಸಿದ್ದು ಗಮನ ಸೆಳೆಯಿತು.

ಅದ್ಧೂರಿ ಸಂಭ್ರಮಾಚರಣೆ :

ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಬಾಬುರೆಡ್ಡಿ ಮುನ್ನೂರು, ಉಪಾಧ್ಯಕ್ಷ ಶರಣಮ್ಮ ಕೊಡ್ಲಿ ಅವಿರೋಧ ಆಯ್ಕೆಯಾಗುತ್ತಿದ್ದಂತೆ ಪುರಸಭೆ ಮುಂಭಾಗ ಮತ್ತು ಗಡಿಯಾರ ವೃತ್ತ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಸಂಸದ ಜಿ.ಕುಮಾರ ನಾಯಕ, ಮಾಜಿ ಶಾಸಕ ಡಿ.ಎಸ್ ಹೂಲಗೇರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯಕ, ಶಿವಶಂಕರಗೌಡ ಸೇರಿ ಅದ್ಧೂರಿ ಸಂಭ್ರಮಾಚರಣೆ ಮಾಡಿದರು.