ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕಿನ ಬೇಬಿಬೆಟ್ಟದಲ್ಲಿ 9 ದಿನಗಳಿಂದ ನಡೆದ ಭಾರಿ ದನಗಳ ಜಾತ್ರಾ ಮಹೋತ್ಸವಕ್ಕೆ ಶನಿವಾರ ಉತ್ತಮ ರಾಸುಗಳಿಗೆ ಬಹುಮಾನ ವಿತರಣೆ ಮಾಡುವ ಮೂಲಕ ತೆರೆ ಎಳೆಯಲಾಯಿತು.ಶಾಸಕ ದರ್ಶನ್ ಪುಟ್ಟಣ್ಣಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಉತ್ತಮ ರಾಸುಗಳ ಮಾಲೀಕರಿಗೆ ಬಹುಮಾನ ವಿತರಿಸಿದರು.
ಬಳಿಕ ಮಾತನಾಡಿದ ಸಚಿವರು, ಬೇಬಿಬೆಟ್ಟದಲ್ಲಿ ಪ್ರತಿವರ್ಷ ಜಾತ್ರಾ ಮಹೋತ್ಸವವು ವಿಜೃಂಭಣೆಯಿಂದ ನಡೆಯುತ್ತದೆ. ರಾಜ್ಯದ ವಿವಿಧ ಮೂಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ರಾಸುಗಳು ಆಗಮಿಸಿ ಜಾತ್ರೆಗೆ ಮೆರಗು ನೀಡುತ್ತಿವೆ. ಶಾಸಕ ದರ್ಶನ್ ಪುಟ್ಟಣ್ಣಯ್ಯ ವಿಜೃಂಭಣೆಯಿಂದ ಜಾತ್ರೆಯನ್ನು ನಡೆಸಿ ಉತ್ತಮ ರಾಸುಗಳಿಗೆ ಬಹುಮಾನ ವಿತಸಿರುವುದು ಶ್ಲಾಘನೀಯ ಎಂದರು.ಸಾರಿಗೆ ಸಚಿವನಾಗಿದ್ದಾಗ ಬೇಬಿಬೆಟ್ಟದ ದನಗಳ ಜಾತ್ರೆಯಲ್ಲಿ ಪಾಲ್ಗೊಂಡಿದ್ದೆ. ಇದೀಗ ಮತ್ತೊಮ್ಮೆ ಭಾಗವಹಿಸಿ ರಾಸುಗಳಿಗೆ ಬಹುಮಾನ ವಿತರಣೆ ಮಾಡುತ್ತಿರುವುದು ಖುಷಿಯಾಗಿದೆ. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ಕೇವಲ ೧೦ ತಿಂಗಳಾಗಿದೆ. ರೈತರ ಅನೇಕ ಸಮಸ್ಯೆಗಳನ್ನು ಬಗೆಹರಿಸುವ ಕೆಲಸ ಮಾಡಿದ್ದೇವೆ. ಸಾರ್ವಜನಿಕರ ಸಮಸ್ಯೆಗಳಿಗೆ ಬಹಳ ಹತ್ತಿರದಿಂದ ಸ್ಪಂದಿಸುವ ಕೆಲಸ ಮಾಡಿದ್ದೇವೆ ಎಂದು ಹೇಳಿದರು.
ಸರಕಾರ ಗ್ಯಾರಂಟಿಗಳು ಓಟಿಗಾಗಿ ಅಲ್ಲ ಅಥವಾ ಗಿಮಿಕ್ ಮಾಡಬೇಕೆಂದಲ್ಲ. ಜನರು, ರೈತರ ಸಮಸ್ಯೆಗಳನ್ನು ಗಮನದಲ್ಲಿ ಇಟ್ಟುಕೊಂಡು ಗ್ಯಾರಂಟಿ ನೀಡಿದ್ದೇವೆ. ಗ್ಯಾರಂಟಿ ಯೋಜನೆಗಳನ್ನು ಕೆಲವರು ವಿಧಾನಸೌಧದಲ್ಲಿ ಟೀಕಿಸಿದರು. ಆದರೆ,ಈ ಯೋಜನೆಗಳಿಂದ ಲಕ್ಷಾಂತರ ಕುಟುಂಬಗಳಿಗೆ ಅನುಕೂಲವಾಗಿದೆ. ಬರಗಾಲದಲ್ಲಿ ಜನರ ಬದುಕು ನಿರ್ವಹಣೆಗೆ ಇವು ಸಹಕಾರಿಯಾಗಿವೆ ಎಂದು ತಿಳಿಸಿದರು.ಶಾಸಕ ದರ್ಶನ್ ಪುಟ್ಟಣ್ಣಯ್ಯ ಕ್ಷೇತ್ರದಲ್ಲಿ ಸಕ್ರಿಯ, ಕ್ರೀಯಾಶೀಲತೆಯಿಂದ ಕೆಲಸ ಮಾಡುತ್ತಿದ್ದಾರೆ. ಸ್ವಚ್ಛ ರಾಜಕೀಯ ಮಾಡಲು ರೂಪಿಸಿಕೊಂಡಿದ್ದಾರೆ. ಆದರೆ, ಇದು ಕೆಲವರಿಗೆ ಇಷ್ಟವಾಗುತ್ತದೆ, ಕೆಲವರಿಗೆ ಇಷ್ಟ ಆಗೋದಿಲ್ಲ. ಆದರೆ, ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಪ್ರಾಮಾಣಿಕವಾಗಿ ಸ್ಪಂದಿಸಿ ಕೆಲಸ ಮಾಡುತ್ತಿದ್ದಾರೆ ಎಂದರು.
ಕ್ಷೇತ್ರದ ಕೆಲಸದ ವಿಚಾರದಲ್ಲಿ ಸರಕಾರ, ಮಂತ್ರಿಗಳು, ಅಧಿಕಾರಿಗಳ ಜತೆಗೆ ಸಂಪರ್ಕದಲ್ಲಿದ್ದಾರೆ. ಸಾರ್ವಜನಿಕ ಸಮಸ್ಯೆಗಳಿಗೆ ಬಹಳ ಹತ್ತಿರದಿಂದ ಸ್ಪಂದಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.ಕೇಂದ್ರದಿಂದ ರಾಜ್ಯಕ್ಕೆ ಆಗಿರುವ ಅನ್ಯಾಯದ ವಿರುದ್ಧ ಜಿಲ್ಲೆ, ರಾಜ್ಯದ ರೈತರು, ಕನ್ನಡಿಗರ ಒಗ್ಗಟ್ಟು ಪ್ರದರ್ಶಿಸಬೇಕು. ಬರಗಾಲದಲ್ಲಿ ಕೇಂದ್ರ ಎನ್‌ಡಿಆರ್‌ಎಫ್ ಫಂಡ್‌ನಿಂದ ನೀಡಬೇಕಿದ್ದ ಪರಿಹಾರದ ಹಣ ನೀಡಿಲ್ಲ. ನರೇಗಾದಲ್ಲಿ 4 ತಿಂಗಳಿಂದ ಪೇಮೆಂಟ್ ನೀಡಿಲ್ಲ, ಹಾಗಾಗಿ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು.
ಶಾಸಕ ದರ್ಶನ್ ಪುಟ್ಟಣ್ಣಯ್ಯ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಪಿ.ರವಿಕುಮಾರ್ ಮಾತನಾಡಿದರು. ಇದೇ ವೇಳೆ ಆಯ್ಕೆಯಾದಂತಹ ಉತ್ತಮ ರಾಸುಗಳಿಗೆ ಚಿನ್ನದ ಬಹುಮಾನ ವಿತರಿಸಲಾಯಿತು. ಶ್ರೀರಾಮಯೋಗೀಶ್ವರ ಮಠದ ಪೀಠಾಧ್ಯಕ್ಷ ಶಿವಬಸವ ಸ್ವಾಮೀಜಿ, ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ, ರೈತಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಜಿಲ್ಲಾಧ್ಯಕ್ಷ ಕೆಂಪೂಗೌಡ, ಕೆಪಿಸಿಸಿ ಸದಸ್ಯ ಎಚ್.ತ್ಯಾಗರಾಜು, ಕಾಂಗ್ರೆಸ್ ಮುಖಂಡ ಬಿ.ರೇವಣ್ಣ, ಸುನಿತ ಪುಟ್ಟಣ್ಣಯ್ಯ, ಪಿ.ನಾಗರಾಜು, ಯುವ ಮುಖಂಡ ಎಸ್‌ಎಸ್‌ಎಸ್ ಸತೀಶ್ ಶಿಂಢಬೋಗನಹಳ್ಳಿ, ಬಿ.ಕೆ.ಶ್ರೀನಿವಾಸ್ ಸೇರಿ ಅನೇಕ ಮುಖಂಡರು ಹಾಜರಿದ್ದರು.---------------
16ಕೆಎಂಎನ್ ಡಿ27ಪಾಂಡವಪುರ ತಾಲೂಕಿ ಬೇಬಿಬೆಟ್ಟದಲ್ಲಿ ನಡೆದ ಭಾರಿ ದನಗಳ ಜಾತ್ರಾ ಮಹೋತ್ಸವದಲ್ಲಿ ಉತ್ತಮರಾಸುಗಳಿಗೆ ಸಚಿವ ಎನ್.ಚಲುವರಾಯಸ್ವಾಮಿ ಬಹುಮಾನ ವಿತರಿಸಿದರು.