ರೇಷ್ಮೆ ಮಂಡಳಿಗೆ 20ರಂದು ಅಮೃತ ಮಹೋತ್ಸವ

| Published : Sep 18 2024, 01:46 AM IST

ಸಾರಾಂಶ

1945ರಲ್ಲಿ ಆರಂಭವಾದ ಕೇಂದ್ರ ರೇಷ್ಮೆ ಮಂಡಳಿ ದೇಶದಲ್ಲಿ 159 ಘಟಕ ಹೊಂದಿದ್ದು,

ಕನ್ನಡಪ್ರಭ ವಾರ್ತೆ ಮೈಸೂರುನಗರದ ಪ್ರತಿಷ್ಠಿತ ರೇಷ್ಮೆ ಮಂಡಳಿ 75 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಸೆ. 20 ರಂದು ಅಮೃತ ಮಹೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ.ಮುಕ್ತ ವಿವಿಯ ಘಟಿಕೋತ್ಸವ ಭವನದಲ್ಲಿ ಅಂದು ಬೆಳಗ್ಗೆ 11ಕ್ಕೆ ಕಾರ್ಯಕ್ರಮ ನಡೆಯಲಿದ್ದು, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು. ವಿದೇಶಾಂಗ ವ್ಯವಹಾರ, ಜವಳಿ ಖಾತೆ ರಾಜ್ಯ ಸಚಿವೆ ಪಬಿತ್ರಾ ಮಾರ್ಗರಿಟ, ರೈಲ್ವೆ, ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಪಶುಸಂಗೋಪನ ಸಚಿವ ಕೆ. ವೆಂಕಟೇಶ್, ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕರಾದ ಜಿ.ಟಿ. ದೇವೇಗೌಡ, ಟಿ.ಎಸ್. ಶ್ರೀವತ್ಸ, ಕೆ. ಹರೀಶ್ ಗೌಡ ಅತಿಥಿಯಾಗಿ ಪಾಲ್ಗೊಳ್ಳುವುದಾಗಿ ರೇಷ್ಮೆ ಮಂಡಳಿಯ ಸದಸ್ಯ ಕಾರ್ಯದರ್ಶಿ ಪಿ. ಶಿವಕುಮಾರ್ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ತಿಳಿಸಿದರು.1945ರಲ್ಲಿ ಆರಂಭವಾದ ಕೇಂದ್ರ ರೇಷ್ಮೆ ಮಂಡಳಿ ದೇಶದಲ್ಲಿ 159 ಘಟಕ ಹೊಂದಿದ್ದು, ವಿವಿಧ ರಾಜ್ಯಗಳಲ್ಲಿ 9 ಸಂಶೋಧನಾ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ. ದೇಶದ 27 ರಾಜ್ಯಗಳಲ್ಲಿ ರೇಷ್ಮೆ ಉತ್ಪಾದನೆಯಾಗುತ್ತಿದೆ. ಪ್ರಸ್ತುತ ರೇಷ್ಮೆ ಉತ್ಪಾದನೆಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ ಎಂದರು.ರೇಷ್ಮೆ ಕೇವಲ ಬಟ್ಟೆ ತಯಾರಿಕೆಗೆ ಮಾತ್ರವಲ್ಲದೆ ಆಹಾರ, ಔಷಧ, ಸೌಂದರ್ಯವರ್ಧಕಗಳ ತಯಾರಿಕೆಗೂ ಬಳಕೆಯಾಗುತ್ತಿದೆ. ಹಿಪ್ಪು ನೇರಳೆ ಎಲೆಯನ್ನು ಸಕ್ಕರೆ ಕಾಯಿಲೆಗೆ ಔಷಧಿ ತಯಾರಿಕೆಗೆ ಬಳಸಲಾಗುತ್ತದೆ. ಇದರಿಂದಾಗಿ ರೈತರಿಗೆ ಹೆಚ್ಚು ಲಾಭವಾಗುತ್ತದೆ. ರೇಷ್ಮೆ ಬೆಳೆಗಾರರಿಗೆ ಈ ನಿಟ್ಟಿನಲ್ಲಿ ಅಗತ್ಯ ತರಬೇತಿ ನೀಡಲಾಗುತ್ತಿದ್ದು, ರೇಷ್ಮೆ ಉಪ ಉತ್ಪನ್ನ ಮಾಡುವವರಿಗೆ ಸ್ಟಾರ್ಟ್ ಅಪ್ ಆರಂಭಿಸಲು ಉತ್ತೇಜನ ನೀಡಲಾಗುತ್ತಿದೆ ಎಂದರು.2023- 24ರಲ್ಲಿ ವಿಶ್ವದ ರೇಷ್ಮೆ ಉತ್ಪಾದನೆಯಲ್ಲಿ ಭಾರತ ಶೇ. 42ರಷ್ಟು ಪಾಲು ಹೊಂದಿದೆ. 2023-24ರಲ್ಲಿ 2028 ಕೋಟಿ ಮೌಲ್ಯದ ರೇಷ್ಮೆ ರಫ್ತು ಮಾಡಲಾಗಿದೆ. 2.63 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹಿಪ್ಪು ನೇರಳೆ ಬೆಳೆಯಲಾಗುತ್ತಿದ್ದು, ಕಚ್ಚಾ ರೇಷ್ಮೆ ಪ್ರಮಾಣವೂ ಏರಿಕೆಯಾಗಿದೆ. 2047ರ ವೇಳೆಗೆ ಮೊದಲ ಸ್ಥಾನಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಶ್ರಮಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.ಚೀನಾದಿಂದ ಕಚ್ಚಾ ರೇಷ್ಮೆ ಆಮದು ಮಾಡಿಕೊಳ್ಳಲಾಗುತ್ತಿತ್ತು. ಆದರೆ ಈಗ ಆಮದು ಪ್ರಮಾಣ ಇಳಿಕೆಯಾಗಿದೆ. 2022-23ನ್ನು ಹೊರತುಪಡಿಸಿದರೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಆಮದು ಮಾಡಿಕೊಂಡಿಲ್ಲ. ಭಾರತದಿಂದಲೇ ಸುಮಾರು 950 ಮೆಟ್ರಿಕ್ ಟನ್ ರೇಷ್ಮೆ ಗೂಡನ್ನು ರಫ್ತು ಮಾಡಲಾಗಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಬಿಟಿಎಸ್ಎಸ್ಒ ನಿರ್ದೇಶಕ ಡಾ. ಸೆಲ್ವಕುಮಾರ್, ಸಿ.ಟಿ.ಆರ್.ಟಿ.ಐ ನಿರ್ದೇಶಕ ಎನ್.ಬಿ. ಚೌಧರಿ, ಎಂ.ಇ.ಎಸ್.ಎಸ್.ಒ ನಿರ್ದೇಶಕ ಡಾ.ಎನ್.ಕೆ. ಭಾಟಿಯ, ಸಿ.ಎಸ್.ಆರ್.ಟಿ.ಐ ನಿರ್ದೇಶಕ ಡಾ. ಗಾಂಧಿ ದಾಸ್ ಇದ್ದರು.