ಹಿಂದುಳಿದ ವರ್ಗದ ಮಕ್ಕಳು ಶಿಕ್ಷಿತರಾಗಬೇಕು: ಎ.ಎನ್‌. ಮಹೇಶ್‌

| Published : Sep 03 2024, 01:30 AM IST

ಸಾರಾಂಶ

ಚಿಕ್ಕಮಗಳೂರುಹಿಂದುಳಿದ ಮತ್ತು ಕೆಳ ವರ್ಗದವರು ಸಮಾಜದ ಮುಖ್ಯವಾಹಿನಿಗೆ ಬರಲು ಆ ಸಮುದಾಯದ ಮಕ್ಕಳು ಶಿಕ್ಷಿತರಾಗಬೇಕು ಎಂದು ರಾಜ್ಯ ಪರಿಸರ ತಜ್ಞರ ಮೌಲ್ಯಮಾಪನ ಸಮಿತಿ ಅಧ್ಯಕ್ಷ ಎ.ಎನ್. ಮಹೇಶ್ ಹೇಳಿದರು.

ಕುರುಬ ಸಮುದಾಯದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ, ನಿವೃತ್ತ ನೌಕರರ ಸನ್ಮಾನ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಹಿಂದುಳಿದ ಮತ್ತು ಕೆಳ ವರ್ಗದವರು ಸಮಾಜದ ಮುಖ್ಯವಾಹಿನಿಗೆ ಬರಲು ಆ ಸಮುದಾಯದ ಮಕ್ಕಳು ಶಿಕ್ಷಿತರಾಗಬೇಕು ಎಂದು ರಾಜ್ಯ ಪರಿಸರ ತಜ್ಞರ ಮೌಲ್ಯಮಾಪನ ಸಮಿತಿ ಅಧ್ಯಕ್ಷ ಎ.ಎನ್. ಮಹೇಶ್ ಹೇಳಿದರು.ಜಿಲ್ಲಾ ಕನಕ ನೌಕರರ ಸಂಘ ನಗರದ ಬೀಕನಹಳ್ಳಿ ರಸ್ತೆಯ ವಿದ್ಯಾ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಎಸ್‌ಎಸ್‌ಎಲ್ ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಅಧಿಕ ಅಂಕಗಳಿಸಿದ ಕುರುಬ ಸಮುದಾಯದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಮತ್ತು ನಿವೃತ್ತ ನೌಕರರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿದ್ಯೆ ಯಾವುದೇ ಸಮುದಾಯ, ಯಾರೊಬ್ಬರ ಸೊತ್ತಲ್ಲ, ಅದು ಸಾಧಕರಿಗೆ ಒಲಿಯುತ್ತದೆ. ಬಡತನದಿಂದ ಹೊರಬರಲು, ಸಮಾಜದ ಮುಖ್ಯವಾಹಿನಿಗೆ ಸೇರ್ಪಡೆಗೊಳ್ಳಲು ಶಿಕ್ಷಣ ಪ್ರಮುಖ ಸಾಧನ, ಅದನ್ನು ಗಳಿಸಿದರೆ ಸಮಾಜದಲ್ಲಿ ಗೌರವ, ಸ್ಥಾನಮಾನ ದೊರೆಯುತ್ತದೆ ಎಂದು ಕಿವಿ ಮಾತು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿಪ ಮಾಜಿ ಸದಸ್ಯೆ ಎ.ವಿ. ಗಾಯತ್ರಿ ಶಾಂತೇಗೌಡ, ಕುರುಬ ಸಮುದಾಯ ಸದೃಢವಾಗಬೇಕಾದರೆ ಆ ವರ್ಗದ ಎಲ್ಲರೂ ಸಂಘಟಿತರಾಗಬೇಕು ಎಂದು ಸಲಹೆ ಮಾಡಿದರು. ಸಮುದಾಯದ ವಿದ್ಯಾವಂತರು ಮತ್ತು ಅಧಿಕಾರಿಗಳು ಸಮುದಾಯದ ಸಂಘಟನೆಗೆ ಒತ್ತು ನೀಡಬೇಕು, ಸಂಘದ ಕಾರ್ಯ ಕ್ರಮಗಳಲ್ಲಿ ತಪ್ಪದೇ ಪಾಲ್ಗೊಳ್ಳಬೇಕು, ಸಮಾಜದ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕೆಂದರು.

ಜಿಪಂ ಮಾಜಿ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಮಾತನಾಡಿ, ಸಮುದಾಯ ಸರ್ವತೋಮುಖವಾಗಿ ಅಭಿವೃದ್ಧಿ ಯಾಗಲು ಶಿಕ್ಷಣದ ಜೊತೆಗೆ ರಾಜಕೀಯವಾಗಿಯೂ ಬೆಳೆಯಬೇಕು ಎಂದು ಸಲಹೆ ಮಾಡಿದರು.ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನಕ ನೌಕರರ ಸಂಘದ ಅಧ್ಯಕ್ಷ ಜೆ.ಎಚ್‌. ಪ್ರಹ್ಲಾದ ಸಮುದಾಯದ ಮಕ್ಕಳನ್ನು ಶಿಕ್ಷಣಕ್ಕೆ ಪ್ರೇರೇಪಿಸಿ, ಪ್ರೋತ್ಸಾಹಿಸುವ ಉದ್ದೇಶದಿಂದ ಪ್ರತಿ ವರ್ಷ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ ಎಂದು ತಿಳಿಸಿದರು. ರಾಜ್ಯ ಪರಿಸರ ತಜ್ಞರ ಮೌಲ್ಯಮಾಪನ ಸಮಿತಿ ಅಧ್ಯಕ್ಷ ಎ.ಎನ್‌. ಮಹೇಶ್ ಮತ್ತು ನಗರಸಭಾ ಅಧ್ಯಕ್ಷೆ ಸುಜಾತಾ ಶಿವಕುಮಾರ್ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅಧಿಕ ಅಂಕಗಳಿಸಿದ 57 ವಿದ್ಯಾರ್ಥಿಗಳು ಹಾಗೂ 7 ಮಂದಿ ನಿವೃತ್ತ ನೌಕರರನ್ನು ಗೌರವಿಸಲಾಯಿತು.

ಉಪಾಧ್ಯಕ್ಷ ಲಕ್ಕಿ ಹಾಲಿಯಪ್ಪ, ಸರ್ಕಾರಿ ನೌಕರರ ಸಂಘದ ಮಾಜಿ ಜಿಲ್ಲಾಧ್ಯಕ್ಷ ಕೆ.ಎ. ಗೋಪಾಲಕೃಷ್ಣ, ಕನಕ ನೌಕರರ ಸಂಘದ ಮಾಜಿ ಜಿಲ್ಲಾಧ್ಯಕ್ಷ ಎ.ಎಸ್‌. ದಿವಾಕರ, ದೇವರಾಜ ಅರಸು ಹಿಂದುಳಿದ ವರ್ಗಗಳ ನಿಗಮದ ವ್ಯವಸ್ಥಾಪಕ ಟಿ. ರಾಕೇಶ್, ಗಂಗಾಧರ್, ಸಂಘದ ಸಹ ಕಾರ್ಯದರ್ಶಿ ಪ್ರಕಾಶ್, ಶಿಕ್ಷಕರಾದ ಪುಟ್ಟಸ್ವಾಮಿ, ರಂಗಣ್ಣ ಉಪಸ್ಥಿತರಿದ್ದರು.

1 ಕೆಸಿಕೆಎಂ 4ಜಿಲ್ಲಾ ಕನಕ ನೌಕರರ ಸಂಘ ಚಿಕ್ಕಮಗಳೂರಿನ ವಿದ್ಯಾ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ನಿವೃತ್ತ ನೌಕರರಿಗೆ ಸನ್ಮಾನ ಕಾರ್ಯಕ್ರಮವನ್ನು ಎ.ವಿ. ಗಾಯತ್ರಿ ಶಾಂತೇಗೌಡ ಉದ್ಘಾಟಿಸಿದರು. ಎ.ಎನ್‌. ಮಹೇಶ್‌, ರೇಖಾ ಹುಲಿಯಪ್ಪಗೌಡ, ಪ್ರಹ್ಲಾದ್‌ ಇದ್ದರು.