ಸಾರಾಂಶ
ಬಿಜೆಪಿಯಲ್ಲಿ ದಲಿತರು, ಹಿಂದುಳಿದ ವರ್ಗದವರ ನಿರ್ಲಕ್ಷಿಸುವ ಪ್ರವೃತ್ತಿ ಈಗ ಇದ್ದು, ಇದು ಪಕ್ಷದ ಬೆಳವಣಿಗೆ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ.
ಶಿವಮೊಗ್ಗ : ಬಿಜೆಪಿಯಲ್ಲಿ ದಲಿತರು, ಹಿಂದುಳಿದ ವರ್ಗದವರ ನಿರ್ಲಕ್ಷಿಸುವ ಪ್ರವೃತ್ತಿ ಈಗ ಇದ್ದು, ಇದು ಪಕ್ಷದ ಬೆಳವಣಿಗೆ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಜೊತೆಗೆ ಹಿಂದುತ್ವದ ಪ್ರತಿಪಾದಕರನ್ನು ಕೂಡ ಮೂಲೆಗುಂಪು ಮಾಡಲಾಗುತ್ತಿದೆ. ಇದೇ ಕಾರಣಕ್ಕೆ ಈ ಲೋಕಸಭಾ ಚುನಾವಣೆಯ ಫಲಿತಾಂಶದ ಜೊತೆಗೆ ಕಳೆದ ವಿಧಾನಸಭಾ ಚುನಾವಣೆಯಲ್ಲೂ ಪಕ್ಷ ಕಳಪೆ ಸಾಧನೆಗೆ ಕಾರಣವಾಯಿತು ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ವಿಶ್ಲೇಷಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಯಡಿಯೂರಪ್ಪನವರು ನಿಸ್ಸಂಶಯವಾಗಿಯೂ ಲಿಂಗಾಯತ ಸಮುದಾಯದಲ್ಲಿ ಪ್ರಭಾವಿ ನಾಯಕರು. ಅವರಿಂದಾಗಿಯೇ ಲಿಂಗಾಯತರು ಬಿಜೆಪಿ ಬೆಂಬಲಿಸಿದ್ದಾರೆ. ಆದರೆ ಒಂದು ಸಮುದಾಯ ಮಾತ್ರ ಸಾಕಾ? ಪಕ್ಷವನ್ನು ಬೆಂಬಲಿಸುವವರಲ್ಲಿ ಲಿಂಗಾಯತರಲ್ಲದೆ, ಕುರುಬರು, ಉಪ್ಪಾರರು, ಮಡಿವಾಳರು ಸೇರಿ ಇತರೆ ಹಿಂದುಳಿದ ವರ್ಗದ ದೊಡ್ಡ ಪಾಲಿದೆ. ಜೊತೆಗೆ ದಲಿತರು ದೊಡ್ಡ ಸಂಖ್ಯೆಯಲ್ಲಿ ಬೆಂಬಲಿಸಿದ್ದಾರೆ. ಆದರೆ ಈ ವರ್ಗಕ್ಕೆ ಯಾವ ಪ್ರಾಶಸ್ತ್ಯ ನೀಡಬೇಕಾಗಿತ್ತೋ ಅದನ್ನು ನೀಡುತ್ತಿಲ್ಲ. ಇದು ಬದಲಾಗಬೇಕು. ಆ ವರ್ಗಕ್ಕೂ ಚಿಕ್ಕಪುಟ್ಟ ಸ್ಥಾನವನ್ನಾದರೂ ನೀಡಬೇಕು ಎಂದು ಒತ್ತಾಯಿಸಿದರು. ಯಡಿಯೂರಪ್ಪನವರು ಏಕೆ ಹಿಂದುಳಿದ ಮತ್ತು ದಲಿತ ವರ್ಗದವರ ಕುರಿತು ಆಸಕ್ತಿ ವಹಿಸುತ್ತಿಲ್ಲ ಎಂಬುದು ಅರ್ಥವಾಗುತ್ತಿಲ್ಲ ಎಂದರು.17 ಸ್ಥಾನಕ್ಕೆ ಜೆಡಿಎಸ್ ಮೈತ್ರಿಯೂ ಕಾರಣ:
ಒಂದು ಕಾಲದಲ್ಲಿ ಬಿಜೆಪಿಯಲ್ಲಿ ಇದ್ದ ಬದ್ಧತೆ, ಸಿದ್ದಾಂತ ಮತ್ತು ಸಾಮೂಹಿಕ ನಾಯಕತ್ವ ಈಗ ಇಲ್ಲವಾಗಿದ್ದು, ಈಗೇನಿದ್ದರೂ ಅಪ್ಪ-ಮಕ್ಕಳಿಬ್ಬರೇ ಕುಳಿತು ತೀರ್ಮಾನ ಕೈಗೊಳ್ಳುವ ಪರಿಸ್ಥಿತಿಯಿದೆ. ಇದರಿಂದಾಗಿಯೇ ಲೋಕಸಭಾ ಚುನಾವಣೆಯಲ್ಲಿ 25 ರಿಂದ 17 ಸ್ಥಾನಕ್ಕೆ ಬಿಜೆಪಿ ಕುಸಿಯಬೇಕಾಯಿತು ಎಂದು ಟೀಕಿಸಿದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯವರ ವರ್ಚಸ್ಸಿನಿಂದಾಗಿ 25 ಸ್ಥಾನ ಗಳಿಸಲಾಯಿತು. ಈಗಲೂ ಅದೇ ವರ್ಚಸ್ಸು ಇದ್ದರೂ 17 ಸ್ಥಾನಕ್ಕೆ ಕುಸಿಯಲು ಕಾರಣ ಏನು? ಈ 17 ಸ್ಥಾನ ಗಳಿಸುವಲ್ಲಿ ಜೆಡಿಎಸ್ ಜೊತೆಗಿನ ಮೈತ್ರಿ ಕೂಡ ಕಾರಣ. ಕಳೆದ ಬಾರಿಯಷ್ಟೇ ಸ್ಥಾನ ಗಳಿಸಿದ್ದರೆ ಪ್ರಧಾನಿ ನರೇಂದ್ರ ಮೋದಿಯವರು ಬೇರೆಯವರ ಕಾಲು ಹಿಡಿಯಬೇಕಿರಲಿಲ್ಲ. ಇದೆಲ್ಲ ಬಿಜೆಪಿಯ ಕೇಂದ್ರ ವರಿಷ್ಠರ ಅರಿವಿಗೆ ಬಂದಿಲ್ಲ ಎಂದಲ್ಲ. ಆದರೆ ಸರಿಯಾದ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಬೇಸರಿಸಿದರು.
ಇದೇ ಕಾರಣಕ್ಕೆ ಪಕ್ಷ ಶುದ್ದೀಕರಣದ ವಿಷಯ ಮುಂದಿಟ್ಟು ನಾನು ಸ್ಪರ್ಧೆ ಮಾಡಿದ್ದು. ನನ್ನ ಬೆಂಬಲಿಸಿದ ಎಲ್ಲ ಹಿರಿಯ ನಾಯಕರು ಕೂಡ ಇದೇ ಕಾರಣಕ್ಕೆ ನಾನು ಸ್ಪರ್ಧೆಯಿಂದ ಹಿಂದೆ ಸರಿಯಬಾರದು ಎಂದು ಹೇಳಿದ್ದರು. ನಾನು ಗೆಲ್ಲದೇ ಇರಬಹುದು. ಆದರೆ ಇಡೀ ರಾಜ್ಯದಲ್ಲಿ ಈ ಬಗ್ಗೆ ಗಂಭೀರ ಚರ್ಚೆ ನಡೆಯಿತು. ನಾನು ಸ್ಪರ್ಧೆಗೆ ನಿರ್ಧರಿಸಿದಾಗ ನಾನು ಗೆಲ್ಲುತ್ತೇನೆ ಎಂದುಕೊಂಡಿರಲಿಲ್ಲ. ನಾನೂ ಸೇರಿದಂತೆ ಎಲ್ಲ ಹಿರಿಯರು ಸೇರಿ ಕಟ್ಟಿದ ಪಕ್ಷ ನನ್ನ ಕಣ್ಣೆದುರೇ ಹಾಳಾಗಬಾರದು ಎಂಬ ಒಂದೇ ಕಾರಣಕ್ಕೆ ನಾನು ಚುನಾವಣೆಯಲ್ಲಿ ಸ್ಪರ್ಧಿಸಿದೆ ಎಂದು ಹೇಳಿದರು.
ಯಡಿಯೂರಪ್ಪ ಕುಟುಂಬದ ಮೇಲೆ ದ್ವೇಷವಿಲ್ಲ:
ನನಗೆ ಯಡಿಯೂರಪ್ಪ ಅಥವಾ ಅವರ ಕುಟುಂಬದ ಮೇಲೆ ಯಾವ ದ್ವೇಷವೂ, ಅಸೂಯೆಯೂ ಇಲ್ಲ. ಯಡಿಯೂರಪ್ಪ ಕೇಂದ್ರ ನಾಯಕರಾಗಲಿ, ರಾಘವೇಂದ್ರ ಕೇಂದ್ರ ಸಚಿವರಾಗಲಿ, ವಿಜಯೇಂದ್ರ ರಾಜ್ಯದ ಮುಖ್ಯಮಂತ್ರಿಯಾಗಲಿ. ಆದರೆ ಪಕ್ಷದ ನೀತಿ, ಸಿದ್ಧಾಂತ ಹಾಳಾಗದಂತೆ ನೋಡಿಕೊಳ್ಳಿ ಎಂದು ಯಡಿಯೂರಪ್ಪರಲ್ಲಿ ಪ್ರಾರ್ಥಿಸುತ್ತೇನೆ. ನನ್ನ ಕಣ್ಣೆದುರೇ ನನ್ನ ಪಕ್ಷ ಹಾಳಾಗುವುದು ನೋಡಲು ಸಾಧ್ಯವಿಲ್ಲ ಎಂದರು.
ದೇಶಕ್ಕೆ ಬಿಜೆಪಿ ಮಾತ್ರ ಆಶಾಕಿರಣ. ಆದರೆ ರಾಜ್ಯದಲ್ಲಿ ಪಕ್ಷದಲ್ಲಿನ ನೂನ್ಯತೆ ಸರಿಪಡಿಸಬೇಕಾಗಿದೆ. ಈ ಬಾರಿ ಸಂಘಟನೆ ಇದ್ದಲ್ಲಿ ಮಾತ್ರ ಬಿಜೆಪಿ ಗೆದ್ದಿದೆ ಎಂಬುದು ಕೂಡ ಗಮನಿಸಬೇಕಾಗಿದೆ. ಶಿವಮೊಗ್ಗದಲ್ಲಿ ಕೂಡ ನಾನು ಸ್ಪರ್ಧೆಯ ನಿರ್ಧಾರ ಪ್ರಕಟಿಸಿದ ಆರಂಭದ ದಿನಗಳಲ್ಲಿ ಯಡಿಯೂರಪ್ಪ ಕುಟುಂಬದ ವಿರುದ್ಧ ಯಾವ ಮಟ್ಟದ ಆಕ್ರೋಶ ಇದೆ ಎಂಬುದು ಬಹಿರಂಗವಾಗಿಯೇ ಹೊರಗೆ ಬಂದಿತು. ಆದರೆ ಈ ಆಕ್ರೋಶದಿಂದ ಕಾಂಗ್ರೆಸ್ ಗೆದ್ದರೆ ಎಂಬ ಆತಂಕ ಮತ್ತು ನರೇಂದ್ರ ಮೋದಿಯವರ ಮುಖ ನೋಡಿಕೊಂಡು ಜನ ಬಿಜೆಪಿಗೆ ಮತ ನೀಡಿದರು ಎಂದು ವಿಶ್ಲೇಷಿಸಿದರು.
ಬಿಎಸ್ ವೈಗೆ ಮೂರು ಪ್ರಶ್ನೆಗಳು
1. ಹಿಂದೆ ನಾನು ರಾಯಣ್ಣ ಬ್ರಿಗೇಡ್ ಕಟ್ಟಿದಾಗ ಕೇಂದ್ರ ವರಿಷ್ಠರ ದಾರಿ ತಪ್ಪಿಸಿ ಅದನ್ನು ನಿಲ್ಲಿಸಿದರು. ಯಾಕೆ ನಿಲ್ಲಿಸಿದರು? 2. ಎರಡನೆಯ ಪ್ರಶ್ನೆಯೆಂದರೆ ನಾನು ಸಚಿವನಾಗಿದ್ದ ಸಂದರ್ಭದಲ್ಲಿ ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆಯ ಸಂದರ್ಭದಲ್ಲಿ ನಾನೇ ರಾಜೀನಾಮೆ ನೀಡಿದೆ. ನಿರ್ದೋಷಿಯಾಗಿ ಹೊರ ಬಂದ ಬಳಿಕ ಸಚಿವರಾಗಿ ಮಾಡಲಾಗುವುದು ಎಂದು ಹೇಳಿದ್ದ ಯಡಿಯೂರಪ್ಪ ಮತ್ತೆ ಏಕೆ ಸಚಿವರಾಗಿ ಮಾಡಲಿಲ್ಲ? 3. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೈಕಮಾಂಡ್ ನಿರ್ದೇಶನದಂತೆ ಚುನಾವಣೆಯಿಂದ ನಿವೃತ್ತಿ ಘೋಷಿಸಿದಾಗ ಮುಂದೆ ನನಗೆ ಸಂಘಟನೆಯಲ್ಲಿ ಅವಕಾಶ ಕೊಡುವುದಾಗಿಯೂ, ಪುತ್ರ ಕಾಂತೇಶ್ ಗೆ ಹಾವೇರಿಯಿಂದ ಲೋಕಸಭಾ ಟಿಕೆಟ್ ಕೊಡಿಸಿ ಗೆಲ್ಲಿಸಿಕೊಂಡು ಬರುವುದಾಗಿ ಸ್ಪಷ್ಟ ಮಾತುಗಳಲ್ಲಿ ಹೇಳಿದ್ದರು. ಆದರೆ ಯಾಕೆ ನುಡಿದಂತೆ ನಡೆಯಲಿಲ್ಲ? ಎಂದರಲ್ಲದೆ, ನನ್ನನ್ನು ರಾಜ್ಯ ಬಿಜೆಪಿ ಒಬಿಸಿ ಮೋರ್ಚಾ ನಾಯಕತ್ವ ನೀಡಿದ ಹೈಕಮಾಂಡ್ ಸಂಘಟನೆ ಮಾಡಿ ಎಂದರು. ಆದರೆ ಆಗ ಬಿಜೆಪಿ ರಾಜ್ಯ ಅಧ್ಯಕ್ಷರಾಗಿ ಯಡಿಯೂರಪ್ಪ ನನಗೆ ಬೆಂಬಲ ನೀಡಲಿಲ್ಲ ಎಂದು ಆರೋಪಿಸಿದರು.
ಸಿ.ಟಿ.ರವಿಗೆ ಟಿಕೆಟ್; ಬಿಎಸ್ ವೈ ಬಳಗದ ವಿರೋಧವಿತ್ತು:
ಈ ಬಾರಿ ವಿಧಾನಸಭೆಯಿಂದ ವಿಧಾನಪರಿಷತ್‌ಗೆ ನಡೆಯುವ ಚುನಾವಣೆಯಲ್ಲಿ ಹಿಂದುತ್ವದ ಪ್ರತಿಪಾದಕ ಸಿ.ಟಿ.ರವಿ ಸೇರಿ ಹಿಂದುಳಿದ ವರ್ಗಕ್ಕೆ ಆದ್ಯತೆ ನೀಡಿರುವುದು ಸ್ವಾಗತಾರ್ಹ. ಆರಂಭದಲ್ಲಿ ಸಿ.ಟಿ.ರವಿಗೆ ಟಿಕೆಟ್ ನೀಡಲು ಯಡಿಯೂರಪ್ಪ ಬಳಗ ವಿರೋಧಿಸಿತ್ತು. ಆದರೆ ಸಂಘ ಪರಿವಾರದ ಗಟ್ಟಿ ನಿಲುವಿನಿಂದ ಸಿ.ಟಿ.ರವಿಗೆ ಟಿಕೆಟ್ ಸಿಕ್ಕಿತು ಎಂದು ಈಶ್ವರಪ್ಪ ಹೇಳಿದರು.
ರಾಜಕೀಯ ಭವಿಷ್ಯ ಕಾಲವೇ ಉತ್ತರಿಸಲಿದೆ
ಪಕ್ಷದ ಶುದ್ಧೀಕರಣದ ಕುರಿತಾದ ತಮ್ಮ ಮುಂದಿನ ನಡೆಯ ಕುರಿತು, ಬಿಜೆಪಿಯನ್ನು ಮತ್ತೆ ಸೇರುವ ಕುರಿತು, ಮುಂದಿನ ರಾಜಕೀಯ ನಿರ್ಧಾರದ ಕುರಿತಾದ ಎಲ್ಲ ಪ್ರಶ್ನೆಗಳಿಗೂ ಈಶ್ವರಪ್ಪನವರು ಕಾಲವೇ ಉತ್ತರ ನೀಡುತ್ತದೆ ಎಂದು ಮುಗುಮ್ಮಾಗಿ ಹೇಳಿದರು. ನನಗೆ ಇನ್ನೂ ವಯಸ್ಸಿದೆ. ಈಗ ಕೇವಲ 76 ವರ್ಷ ಮಾತ್ರ. ನನಗಿಂತ ವಯಸ್ಸಾದವರಿಗೆ ಟಿಕೆಟ್ ನೀಡಿಲ್ಲವೇನು ಎಂದು ಈಶ್ವರಪ್ಪ ಪ್ರಶ್ನಿಸಿದರು.